ಭಕ್ತ ಜನರ ಮನಸ್ಸನ್ನು ಮುದಗೊಳಿಸುವ ಕಲಾವಿದರನ್ನು ಪ್ರೋತ್ಸಾಹಿಸಿ: ನಿವೃತ್ತ ಉಪ ತಹಸೀಲ್ದಾರ್ ರಾಮಣ್ಣ ನಾಯ್ಕ್
ಪುತ್ತೂರು: ಈಶ್ವರಮಂಗಲ ಜಾತ್ರೆ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಆ ಬಳಿಕ ಮಾತನಾಡಿದ ನಿವೃತ್ತ ಉಪತಹಸೀಲ್ದಾರ್ ರಾಮಣ್ಣ ನಾಯ್ಕ್‌ರವರು ಭಕ್ತ ಜನರ ಮನಸ್ಸನ್ನು ಮುದಗೊಳಿಸುವ ಕಲಾವಿದರನ್ನು ಪ್ರೋತ್ಸಾಹಿಸುವ ಅಗತ್ಯ ಇದೆ. ಅವರ ಕಲಾ ಚಟುವಟಿಕೆ ಎಲ್ಲೆಡೆ ಪಸರಿಸಲಿ ಎಂದು ಶುಭ ಹಾರೈಸಿದರು.

ಜಾತ್ರೋತ್ಸವ ಸಮಿತಿ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮಟ್ಟಿ ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದರು. ಜಾತ್ರೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪೂರ್ಣಚಂದ್ರ ರೈ ನೆಲ್ಲಿತ್ತಡ್ಕ, ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಆನಂದ ರೈ ಸಾಂತ್ಯ, ಸಂಚಾಲಕ ಸತೀಶ್ ಹಿತ್ಲುಮೂಲೆ, ಕೊರಗಪ್ಪ ಮುಂಡ್ಯ ಉಪಸ್ಥಿತರಿದ್ದರು. ಶಿಕ್ಷಕ ದೇವಿಪ್ರಕಾಶ್ ಶೆಟ್ಟಿ ಕುತ್ಯಾಳ ಕಾರ್ಯಕ್ರಮ ನಿರ್ವಹಿಸಿದರು.
ಅಂಗನವಾಡಿ ಕೇಂದ್ರದ ಪುಟಾಣಿಗಳು ವಿವಿಧ ಪದ್ಯಗಳಿಗೆ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಸೇರಿದ ಸಭಿಕರನ್ನು ಮುದ ಗೊಳಿಸಿದರು. ಬಳಿಕ ಡಿಸಿಸಿ ಬ್ಯಾಂಕ್ ಈಶ್ವರಮಂಗಲ ಶಾಖೆಯ ಸಿಬ್ಬಂದಿ ಮನೋಜ್ ಕೆಮ್ಮತ್ತಡ್ಕ-ಮುಂಡ್ಯ ಮತ್ತು ಸುಳ್ಯ ವಲಯದ ಅಂಗನವಾಡಿ ಮೇಲ್ವಿಚಾರಕಿ ಉಷಾಪ್ರಸಾದ ಅವರು ಅಂಗನವಾಡಿ ಮಕ್ಕಳಿಗೆ ನೃತ್ಯಾಭ್ಯಾಸ ಮಾಡಿದ ಶಿಕ್ಷಕಿಯರಿಗೆ ಗೌರವಾರ್ಪಣೆ ಮಾಡಿದರು. ಬಳಿಕ ತೇಜಸ್ವಿನಿ ನವೀನ್ ಕುಕ್ಕುಡೇಲು ಎಸ್ಟೇಟ್ ನಿರ್ದೇಶನದ ಸಮರ್ಥ ಸಾಂಸ್ಕೃತಿಕ ಕಲಾತಂಡ ಈಶ್ವರಮಂಗಲ ಇವರಿಂದ ನಟರಾಜ ನಾಟ್ಯ-ಗಾನ ವೈಭವ ನಡೆಯಿತು. ದೇವಸ್ಥಾನದ ವತಿಯಿಂದ ಸಾಂಸ್ಕೃತಿಕ ಕಲಾತಂಡ ಹಾಗೂ ಪೋಷಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.