ಭರತನಾಟ್ಯ ಶಾಸ್ತ್ರೀಯ ಚೌಕಟ್ಟಿನಲ್ಲೇ ಇರಲಿ: ವಿದ್ವಾನ್ ಉಳ್ಳಾಲ ಮೋಹನ್ ಕುಮಾರ್

ಪುತ್ತೂರು: ಆಧುನಿಕತೆಯ ಈ ಕಾಲಘಟ್ಟದಲ್ಲಿ ಭರತನಾಟ್ಯವನ್ನು ಬೆರಕೆ ಮಾಡದೆ ಅದರದೇ ಶಾಸ್ತ್ರೀಯ ಚೌಕಟ್ಟಿನಲ್ಲಿ ಪ್ರಸ್ತುತಪಡಿಸಬೇಕು ಎಂದು ಶಾಂತಲಾ ಪ್ರಶಸ್ತಿ ಪುರಸ್ಕೃತ
ನೃತ್ಯಗುರು ವಿದ್ವಾನ್ ಉಳ್ಳಾಲ ಮೋಹನ್ ಕುಮಾರ್ ಹೇಳಿದರು.

ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಫೆ.24ರಂದು ಇಲ್ಲಿನ ತೆಂಕಿನ ಬೈಪಾಸ್ನ ಜೈನ ಭವನದಲ್ಲಿ ಆಯೋಜಿಸಿದ ‘ನೃತ್ಯ ತರಂಗಿಣಿ-1’ ಹಾಗೂ ‘ಮೋಹನ- ಸಂವಾದ’ ಕಾರ್ಯಕ್ರಮದಲ್ಲಿ ಅವರು ಸಂವಾದ ನಡೆಸಿದರು.

ಯಕ್ಷಗಾನ ಪ್ರೇರಣೆಯಿಂದ ಭರತನಾಟ್ಯ ರಂಗ ಪ್ರವೇಶಿಸುವಂತೆ ಆಯಿತು ಎಂದು ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ಮೋಹನ್ ಕುಮಾರ್, ಪಂದನಲ್ಲೂರು ಶೈಲಿಯ ಕಲಿಕೆ ಹಾಗೂ
ಜನಪ್ರಿಯತೆ ಬಗ್ಗೆ ಮಾತನಾಡಿದರು.

ಕರ್ನಾಟಕದಲ್ಲಿ ಭರತನಾಟ್ಯ ಇದ್ದರೂ ಎಲ್ಲರೂ ನೋಡುವುದು ತಮಿಳುನಾಡು ಕಡೆಗೆ ಎಂದ ಅವರು, ಭರತನಾಟ್ಯದ ಎಲ್ಲ ಪ್ರಕಾರಗಳು ಕರ್ನಾಟಕದಲ್ಲೂ ಸೊಗಸಾಗಿದೆ. ಭರತನಾಟ್ಯ ವೇಳೆ ಮನೋಧರ್ಮ ಹಿತವಾಗಿಯೇ ಇರಬೇಕೇ ವಿನಃ ಅಹಿತವಾಗಿ ಇರಬಾರದು. ವಿದ್ವತ್ ಪೂರ್ಣಗೊಳಿಸಿದ ಬಳಿಕ ಮತ್ತೆ ಕಲಿಯುವುದು ಏನೂ ಇಲ್ಲ ಎಂಬ ಮನೋಭಾವ ಬರಬಾರದು, ನಾಟ್ಯ ಕ್ಷೇತ್ರದಲ್ಲಿ ಕಲಿಕೆ ಯಾವತ್ತೂ ಇದ್ದದೇ. ನಾನು ಕೂಡ ಈಗಲೂ ಈಜುತ್ತಲೇ ಇದ್ದೇನೆ. ನಾನು ದೊಡ್ಡ ವಿದ್ವಾಂಸನೂ ಅಲ್ಲ ಎಂದು ವಿನೀತರಾಗಿ ಹೇಳಿದರು.

ಗುರುಭಕ್ತಿ, ಪ್ರೋತ್ಸಾಹ ಬೇಕು:
ಭರತನಾಟ್ಯ ಕಲಿಕೆಗೆ ಗುರುಭಕ್ತಿ ಮಾತ್ರವಲ್ಲ ಗುರು ಪ್ರೋತ್ಸಾಹವೂ ಬೇಕು. ದೇವರನ್ನು ಮುಂದಿಟ್ಟುಕೊಂಡು ಗುರು ಹೇಳಿದಂತೆ ಶಿಷ್ಯರು ಮುನ್ನಡೆಯಬೇಕು. ಆಗ ಮಾತ್ರ ಯಶಸ್ಸು
ಸಿಗಲು ಸಾಧ್ಯ. ಚಿಕ್ಕವರಿಂದಲೂ ಕಲಿಯುವುದು ಇರುತ್ತದೆ. ಭರತನಾಟ್ಯ ಕ್ಷೇತ್ರದಲ್ಲೂ ಜನರಿಗೆ ಬೇಕಾದ್ದನ್ನು ಶಾಸ್ತ್ರೀಯ ಚೌಕಟ್ಟು ಮೀರದೆ ಕೊಡಬೇಕು. ನಮ್ಮ ಪರಿಸರದ ಶಾಸ್ತ್ರೀಯ ನೃತ್ಯಗಳಿಗೆ ಮನ್ನಣೆ ನೀಡಬೇಕು. ಸಹಜ ಅಭಿಯನದ ಮೂಲಕ ಶಾಸ್ತ್ರಬದ್ಧತೆಗೆ ಒತ್ತು ನೀಡಬೇಕು ಎಂದು ಅವರು ಕಿವಿ ಮಾತು ಹೇಳಿದರು.

ಹಿರಿಯ ಮೃದಂಗ ವಿದ್ವಾನ್ ಡಾ.ಬಾಲಕೃಷ್ಣ ಭಟ್ ಅವರ ಕಲೆ ಹಾಗೂ ಲೌಕಿಕ ತಾಕಲಾಟವನ್ನು ನಿಭಾಯಿಸುವ ಬಗೆ ಕುರಿತ ಪ್ರಶ್ನೆಗೆ ಉತ್ತರಿಸಿದ ಮೋಹನ್ ಕುಮಾರ್, ಮಕ್ಕಳ ನೃತ್ಯ
ಕಲಿಕೆಯಲ್ಲಿ ಪೋಷಕರು ಯಾವತ್ತೂ ಅವಸರ ಮಾಡಬಾರದು. ಕಲೆಯನ್ನು ಕಲೆಯಾಗಿಯೇ ಉಳಿಸಿಕೊಳ್ಳಲು ಹೆತ್ತವರ ಸಹಕಾರ ಅತ್ಯಗತ್ಯ. ಗುರುಗಳಿಗೆ ಮಕ್ಕಳು ಎಲ್ಲರೂ ಸಮಾನರು
ಎಂಬುದನ್ನು ಹೆತ್ತವರು ಮನಗಾಣಬೇಕು ಎಂದರು.

ಈ ಸಂದರ್ಭ ಅಕಾಡೆಮಿ ಪರವಾಗಿ ವಿದ್ವಾನ್ ಉಳ್ಳಾಲ ಮೋಹನ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 71ರ ಹರೆಯದ ಕರಾವಳಿಯ ಹಿರಿಯ ಭರತನಾಟ್ಯ ಕಲಾವಿದ
ವಿದ್ವಾನ್ ಮೋಹನ್ ಕುಮಾರ್ ಜೊತೆಗಿನ ಮೋಹನ- ಸಂವಾದ ಕಾರ್ಯಕ್ರಮದ ದಾಖಲೀಕರಣವನ್ನು ನಡೆಸಲಾಯಿತು. ನೃತ್ಯೋಪಾಸನಾ ಕಲಾ ಅಕಾಡೆಮಿಯ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಸಂವಾದ ನಡೆಸಿಕೊಟ್ಟರು. ವೇದಿಕೆಯಲ್ಲಿ ಕರ್ನಾಟಕ ಕಲಾಶ್ರೀ ಪುರಸ್ಕೃತ ವಿದುಷಿ ರಾಜಶ್ರೀ ಶೆಣೈ ಉಳ್ಳಾಲ, ಅಕಾಡೆಮಿ ಅಧ್ಯಕ್ಷ ಮಂಜುನಾಥ್ ಪಿ.ಎಸ್, ಉಪಾಧ್ಯಕ್ಷ ಕೃಷ್ಣ ಕುಮಾರ್ ಪಿ.ಎಸ್, ಪ್ರಧಾನ ಕಾರ್ಯದರ್ಶಿ ಆತ್ಮಭೂಷಣ್ ಇದ್ದರು. ನೃತ್ಯೋಪಾಸನಾ ಕಲಾ ಅಕಾಡೆಮಿಯ ಕಲಾವಿದರಿಂದ ‘ನೃತ್ಯೋಹಂ’ ವಿಶೇಷ ನೃತ್ಯ ಕಾರ್ಯಕ್ರಮ ನಡೆಯಿತು.