ಪುತ್ತೂರು: ಸಿಸೇರಿಯನ್ ಸಂದರ್ಭ ಆಸ್ಪತ್ರೆಯ ಬಟ್ಟೆ ಹೊಟ್ಟೆಯೊಳಗೆ ಬಾಕಿಯಾದ ವಿಚಾರಕ್ಕೆ ಸಂಬಂಧಿಸಿ ಘಟನೆಗೆ ಕಾರಣವಾದ ಪುತ್ತೂರಿನ ಖಾಸಗಿ ಆಸ್ಪತ್ರೆ ಮತ್ತು ಸಂತ್ರಸ್ತೆಯ ಮನೆಗೆ ಪ್ರಕರಣದ ತನಿಖೆಗಾಗಿ 6 ಮಂದಿ ಅಧಿಕಾರಿಗಳು ಮತ್ತು ವೈದ್ಯರ ತಂಡ ಫೆ.24ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ನೇತೃತ್ವದಲ್ಲಿ ಈ ತನಿಖಾ ತಂಡ ರಚಿಸಲಾಗಿದ್ದು, ತಂಡವು ಒಂದು ವಾರದಲ್ಲಿ ವಿಚಾರಣೆ ನಡೆಸಿ ವರದಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಅಗತ್ಯ ಕ್ರಮಕ್ಕಾಗಿ ಕಳುಹಿಸಲಿದೆ. ಈ ತನಿಖೆ ನಡೆಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ಹೊರಡಿಸಿದ್ದಾರೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್. ಆರ್. ತಿಮ್ಮಯ್ಯ ಅವರನ್ನೊಳಗೊಂಡ ತಂಡ ಸಂತ್ರಸ್ತ ಮಹಿಳೆಯ ಮನೆಗೆ ಭೇಟಿ ನೀಡಿ ಘಟನೆಯ ಸಮಗ್ರ ಮಾಹಿತಿಯನ್ನು ಪಡೆದಿದ್ದಾರೆ. ಅಗತ್ಯ ದಾಖಲೆ ಪತ್ರಗಳನ್ನು ಸಂಗ್ರಹಿಸಿಕೊಂಡಿದ್ದಾರೆ. ಬಳಿಕ ಅವರು ಪುತ್ತೂರು ಸಿಟಿ ಆಸ್ಪತ್ರೆಗೆ ಭೇಟಿಯನ್ನು ನೀಡಿ ಮಾಹಿತಿ ಸಂಗ್ರಹಿಸುವ ಕಾರ್ಯ ಮಾಡಿದ್ದಾರೆ. ಜೊತೆಗೆ ಬಟ್ಟೆಯನ್ನು ಹೊರಗೆ ತೆಗೆಯಲು ಶಸ್ತ್ರಚಿಕಿತ್ಸೆ ನಡೆಸಿದ ಧನ್ವಂತರಿ ಅಸ್ಪತ್ರೆಯ ವೈದ್ಯರನ್ನೂ ಸಂಪರ್ಕ ಮಾಡಿ ಮಾಹಿತಿ ಪಡೆದು ಕೊಂಡಿದ್ದಾರೆ.