15ನೇ ಹಣಕಾಸು ಯೋಜನೆ ಅನುದಾನ ಪೂರ್ಣ ಬಳಕೆಗೆ ಸೂಚನೆ
ನೆಲ್ಯಾಡಿ: ಬಜತ್ತೂರು ಗ್ರಾಮ ಪಂಚಾಯತ್ನ 2023-24ನೇ ಸಾಲಿನ ಜಮಾಬಂದಿ ಸಭೆ ಫೆ.25ರಂದು ಪೂರ್ವಾಹ್ನ 11ಕ್ಕೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ದ.ಕ.ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಡಾ.ಆನಂದ ಕೆ.ಅವರು ಜಮಾಬಂದಿ ಅಧಿಕಾರಿಯಾಗಿ ಭಾಗವಹಿಸಿ ಗ್ರಾಮ ಪಂಚಾಯತ್ನ ಲೆಕ್ಕಪತ್ರ, ದಾಖಲೆ ಪುಸ್ತಕಗಳ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, 14ನೇ ಹಣಕಾಸು ಯೋಜನೆಯಡಿ ಅನುದಾನ ಬಳಕೆಗೆ ಹಲವು ಮಾನದಂಡ ವಿಧಿಸಲಾಗಿತ್ತು. ಆದರೆ 15ನೇ ಹಣಕಾಸು ಯೋಜನೆಯಡಿ ಅನುದಾನ ಬಳಕೆಗೆ ಇದ್ದ ಮಾನದಂಡ ಸರಳೀಕರಣಗೊಳಿಸಲಾಗಿದೆ. ಆದ್ದರಿಂದ ಗ್ರಾಮ ಪಂಚಾಯತ್ಗಳು ಈ ಯೋಜನೆಯಡಿ ಬರುವ ಅನುದಾನವನ್ನು ಆಯಾ ವರ್ಷವೇ ಪೂರ್ಣವಾಗಿ ಬಳಕೆ ಮಾಡಬೇಕು. ಅನುದಾನ ಖರ್ಚು ಆಗದೇ ಇದ್ದಲ್ಲಿ ಮುಂದೆ 16ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾಗುವ ಅನುದಾನದಲ್ಲಿ ಕಡಿತ ಆಗುವ ಸಾಧ್ಯತೆ ಇರುತ್ತದೆ ಎಂದರು. ಗ್ರಾ.ಪಂ.ಅಧ್ಯಕ್ಷ ಗಂಗಾಧರ ಪಿ.ಎನ್.ಅವರು ಪ್ರತಿಕ್ರಿಯೆ ನೀಡಿ,2023-24ನೇ ಸಾಲಿನಲ್ಲಿ ಐದಾರು ಗ್ರಾಮ ಪಂಚಾಯತ್ಗಳಿಗೆ ಒಬ್ಬರೇ ಇಂಜಿನಿಯರ್ ಇರುತ್ತಿದ್ದರು. ಇದರಿಂದ ಅನುದಾನ ಬಳಕೆಯಲ್ಲೂ ವಿಳಂಬ ಆಗುತ್ತಿತ್ತು. ಈಗ ಪಂಚಾಯತ್ಗೊಬ್ಬರು ಇಂಜಿನಿಯರ್ ಇರುವುದರಿಂದ ಆ ಸಮಸ್ಯೆ ಇಲ್ಲ ಎಂದರು. ಪಿಡಿಒ ಚಂದ್ರಮತಿ ಅವರು ವಿವಿಧ ಕಾಮಗಾರಿಗಳಿಗೆ ಅನುದಾನ ಬಳಕೆ, ಅಭಿವೃದ್ಧಿ ಕಾಮಗಾರಿಗಳ ಕುರಿತು ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಮಾಹಿತಿ ನೀಡಿದರು.
ಗ್ರಾ.ಪಂ.ಕಾರ್ಯವೈಖರಿಗೆ ಮೆಚ್ಚುಗೆ:
ಎಸ್ಕ್ರೋ ಖಾತೆಗೆ ಬಂದ ಅನುದಾನದಲ್ಲಿ ವಿದ್ಯುತ್ ಬಿಲ್ಲು ಪಾವತಿಸಿ ಉಳಿಕೆಯಾದ ಅನುದಾನದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಕಾಮಗಾರಿ ಮಾಡಿರುವುದಕ್ಕೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ ಕೆ.ಅವರು ’ವೆರಿಗುಡ್’ ಎಂದು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದರು. ಕುಡಿಯುವ ನೀರಿನ ಸ್ಥಾವರಗಳಿಗೆ ಸಂಬಂಧಿಸಿ ಸಮಿತಿ ರಚಿಸಿಕೊಂಡು ನಿರ್ವಹಣೆ ಮಾಡುತ್ತಿರುವ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿ, ಕುಡಿಯುವ ನೀರಿನ ಮೀಟರ್ ರೀಡಿಂಗ್, ಕಂಪ್ಯೂಟರೀಕೃತ ಬಿಲ್ಲಿನ ಕುರಿತು ಗ್ರಾ.ಪಂ.ನಿಂದ ಮಾಹಿತಿ ಪಡೆದುಕೊಂಡರು. ನೀರು ನಿರ್ವಾಹಕ ಮಹಮ್ಮದ್ ವಿ.ಕೆ.ಅವರು ಮಾಹಿತಿ ನೀಡಿದರು.

ತೆರಿಗೆ ಪಾವತಿಸುವವರನ್ನು ಪ್ರೋತ್ಸಾಹಿಸಿ:
ಆರ್ಥಿಕ ವರ್ಷದ ಆರಂಭದ 3 ತಿಂಗಳಿನೊಳಗೆ ಗ್ರಾಮ ಪಂಚಾಯಿತಿಗೆ ಮನೆ ತೆರಿಗೆ ಪಾವತಿಸುವವರಿಗೆ ಶೇ.5 ರಿಯಾಯಿತಿ ಇದೆ. ಈ ಬಗ್ಗೆ ಪ್ರಚಾರ ಮಾಡಿ ಆರ್ಥಿಕ ವರ್ಷದ ಆರಂಭದಲ್ಲೇ ತೆರಿಗೆ ಪಾವತಿಗೆ ಗ್ರಾಮಸ್ಥರಿಗೆ ಪ್ರೋತ್ಸಾಹ ನೀಡಬೇಕು. ನಾಲ್ಕೈದು ವರ್ಷಗಳಿಂದ ಸರಿಯಾಗಿ ತೆರಿಗೆ ಪಾವತಿಸುತ್ತಿರುವವರನ್ನು ಗುರುತಿಸಿ ಅವರನ್ನು ಅಭಿನಂದಿಸುವಂತೆಯೂ ಡಾ.ಆನಂದ ಕೆ.,ಅವರು ಸಲಹೆ ನೀಡಿದರು.
ಗ್ರಾ.ಪಂ.ಉಪಾಧ್ಯಕ್ಷೆ ವಿಮಲ, ಸದಸ್ಯರಾದ ಮೋನಪ್ಪ ಗೌಡ, ರತ್ನ, ಪ್ರೆಸಿಲ್ಲಾ ಡಿ.ಸೋಜ, ಉಮೇಶ್ ಓಡ್ರಪಾಲು, ಸ್ಮಿತಾ ಪೂಯಿಲ, ಗಂಗಾಧರ ಕೆ.ಎಸ್., ಯಶೋಧ, ಸಂತೋಷ್ಕುಮಾರ್ ಪಿ., ಪ್ರೇಮಾ ಬಿ., ಇಂಜಿನಿಯರ್ಗಳಾದ ಹೊಳೆಬಸಪ್ಪ, ಲಕ್ಷ್ಮೀ, ಪಶುಸಖಿ ವಿನೋದ, ಕೃಷಿ ಸಖಿ ರಂಜನಿ, ಎಲ್ಸಿಆರ್ಪಿ ನಯನ, ಎಂಬಿಕೆ ಸುನೀತಾ, ಭಾಗೀರಥಿ, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯದರ್ಶಿ ಕೊರಗಪ್ಪ ಕೆ.,ವರದಿ ವಾಚಿಸಿದರು. ಪಿಡಿಒ ಚಂದ್ರಮತಿ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳಾದ ರಮೇಶ್ ಎಂ., ಮಮತಾ, ಮೀನಾಕ್ಷಿ, ಕವಿತಾ, ಐಸಿಂತಾ ಪ್ರಜ್ವಲ್ ಡಿ.ಸೋಜ ಸಹಕರಿಸಿದರು.
ಗ್ರಂಥಾಲಯ,ಶಾಲೆಗೆ ಭೇಟಿ:
ಜಮಾಬಂದಿ ಸಭೆ ಬಳಿಕ ಡಾ.ಆನಂದ ಕೆ.,ಅವರು ಗ್ರಾ.ಪಂ.ಕಚೇರಿ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ಎನ್ಆರ್ಎಲ್ಎಂ ಕಟ್ಟಡದ ಪರಿಶೀಲನೆ ನಡೆಸಿದರು. ಆ ಬಳಿಕ ಅವರು ಗ್ರಾ.ಪಂ.ಗ್ರಂಥಾಲಯಕ್ಕೆ ಭೇಟಿ ನೀಡಿ ಗ್ರಂಥಾಲಯ ಮೇಲ್ವಿಚಾರಕಿ ಸವಿತಾ ಅವರಿಂದ ಮಾಹಿತಿ ಪಡೆದುಕೊಂಡರು. ಬಜತ್ತೂರು ಸರಕಾರಿ ಹಿ.ಪ್ರಾ.ಶಾಲೆಗೆ ಭೇಟಿ ನೀಡಿ ೫ನೇ ತರಗತಿ ವಿದ್ಯಾರ್ಥಿಗಳಿಂದ ಪಾಠ ಓದಿಸಿದರು. ಮುಖ್ಯಶಿಕ್ಷಕ ಮಂಜುನಾಥ ಕೆ.ವಿ.,ಅವರು ಮಾಹಿತಿ ನೀಡಿದರು. ನಂತರ ಬಜತ್ತೂರು ಅಂಗನವಾಡಿ ಕೇಂದ್ರಕ್ಕೆ ತೆರಳಿ ಪುಟಾಣಿಗಳೊಂದಿಗೆ ಬೆರೆತು ಪದ್ಯ ವಾಚಿಸಿದರು. ಬಳಿಕ ಬಜತ್ತೂರು ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿದರು.
ಮೇಲೂರು ಕೆರೆ ವೀಕ್ಷಣೆ:
ಮೇಲೂರಿನಲ್ಲಿ ಸುಮಾರು 1 ಎಕ್ರೆ ಜಾಗದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅನುದಾನದಲ್ಲಿ ನಿರ್ಮಾಣಗೊಂಡ ಕೆರೆ ವೀಕ್ಷಣೆ ಮಾಡಿದ ಡಾ.ಆನಂದ ಕೆ.,ಅವರು ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ಗ್ರಾ.ಪಂ.ಅಧ್ಯಕ್ಷ ಗಂಗಾಧರ ಪಿ.ಎನ್., ಪಿಡಿಒ ಚಂದ್ರಮತಿ ಕೆ., ಕಾರ್ಯದರ್ಶಿ ಕೊರಗಪ್ಪ ಕೆ., ಸದಸ್ಯರಾದ ಸಂತೋಷ್ ಪಂರ್ದಾಜೆ, ಗಂಗಾಧರ ಕೆ.ಎಸ್., ಮಾಜಿ ಸದಸ್ಯ ಆನಂದ ಕೆ.ಎಸ್., ಉದ್ಯೋಗ ಖಾತ್ರಿ ಯೋಜನೆ ಇಂಜಿನಿಯರ್ ಲಕ್ಷ್ಮಿ, ಮನೋಜ್, ತಾ.ಪಂ.ನ ಭರತ್ ಉಪಸ್ಥಿತರಿದ್ದರು.