ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ದರೋಡೆ ಪ್ರಕರಣ: ಕನ್ಯಾನ ನಿವಾಸಿ ಸೇರಿ ಮತ್ತಿಬ್ಬರ ಬಂಧನ

0

ವಿಟ್ಲ: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಸಿ. ರೋಡ್‌ನಲ್ಲಿರುವ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ತಾಲೂಕು ಕನ್ಯಾನ ನಿವಾಸಿ ಸೇರಿ ಮತ್ತಿಬ್ಬರು ಆರೋಪಿಗಳನ್ನು ತನಿಖಾ ತಂಡ ಬಂಧಿಸಿದೆ.

ಜ.17ರಂದು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಸಿ ರೋಡ್ ನಲ್ಲಿರುವ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ದರೋಡೆ ನಡೆದಿತ್ತು. ದರೋಡೆ ಪ್ರಕರಣವನ್ನು ಪತ್ತೆಹಚ್ಚಿ ಆರೋಪಿಗಳು ದರೋಡೆ ಗೈದ ಚಿನ್ನಾಭರಣಗಳು ಮತ್ತು ನಗದು ಹಣವನ್ನು ವಶಪಡಿಸಿಕೊಂಡಿದ್ದು ಪ್ರಕರಣದಲ್ಲಿ ಈಗಾಗಲೇ ನಾಲ್ಕು ಜನ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿರುವ ತಂಡ ಪ್ರಕರಣದ ಪ್ರಮುಖ ಆರೋಪಿಯಾದ ಶಶಿ ತೇವರ್ ಹೆಸರಲ್ಲಿರುವ ಬಂಟ್ವಾಳ ತಾಲೂಕಿನ ಕನ್ಯಾನ ನಿವಾಸಿ ಭಾಸ್ಕರ್ ಬೆಳ್ಚಡ ಎಂಬಾತನನ್ನು ಫೆ.24ರಂದು ಬೆಂಗಳೂರಿನ ರೈಲ್ವೇ ಸ್ಟೇಷನ್ ಬಳಿ ವಶಕ್ಕೆ ಪಡೆದುಕೊಂಡಿದ್ದರು. ಆತನನ್ನು ವಿಚಾರಿಸಿದಾಗ ಏಳು ವರ್ಷಗಳಿಂದ ಸ್ಥಳೀಯ ವ್ಯಕ್ತಿ ಉಳ್ಳಾಲ ನಿವಾಸಿ ಮಹಮ್ಮದ್ ನಝೀರ್ ಎಂಬಾತನೊಂದಿಗೆ ಆತ ಸಂಪರ್ಕದಲ್ಲಿದ್ದು ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ದರೋಡೆ ಕೃತ್ಯವೆಸಗಲು ಸುಮಾರು 6 ತಿಂಗಳಿನಿಂದ ಇತರ ಆರೋಪಿಗಳೊಂದಿಗೆ ಸೇರಿ ಸಂಚು ರೂಪಿಸಿ ಕೃತ್ಯವೆಸಗಿರುವುದಾಗಿ ತಿಳಿಸಿದ್ದಾನೆ.

ಭಾಸ್ಕರ್ ಬೆಳ್ಚಪಾಡ ಮಹಮ್ಮದ್ ನಝೀರ್ ನೊಂದಿಗೆ ಸಂಚಿನಲ್ಲಿ ಪಾಲ್ಗೊಂಡಿದ್ದು ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘದ ಕಟ್ಟಡವನ್ನು ಆರೋಪಿಗಳಿಗೆ ತೋರಿಸಿಕೊಟ್ಟು ದರೋಡೆ ನಡೆಸಬೇಕಾದ ದಿನ, ವೇಳೆ ಹಾಗೂ ಸೊಸೈಟಿಯಲ್ಲಿರುವ ಸಿಬ್ಬಂದಿಗಳ ಬಗ್ಗೆ ಮತ್ತು ಕೃತ್ಯದ ನಂತರ ತಪ್ಪಿಸಿಕೊಂಡು ಹೋಗುವ ಮಾರ್ಗ ಮುಂತಾದ ಸ್ಥಳೀಯ ಮಾಹಿತಿಯನ್ನು ತಿಳಿಸಿದ್ದ ಬಗ್ಗೆ ತನಿಖೆಯಲ್ಲಿ ಆರೋಪಿ ಬಾಯ್ಬಿಟ್ಟಿದ್ದಾನೆ. ಆರೋಪಿ ಭಾಸ್ಕರ್ ಬೆಳ್ಚಪಾಡ ಎಂಬಾತನು ಸುಮಾರು 25 ವರ್ಷಗಳಿಂದ ಹುಟ್ಟೂರಾದ ಕನ್ಯಾನವನ್ನು ಬಿಟ್ಟು ಮುಂಬೈನಲ್ಲಿ ವಾಸವಾಗಿದ್ದು ಈತನ ವಿರುದ್ದ ಬೇರೆ ಬೇರೆ ಪೊಲೀಸ್ ಠಾಣೆಯಲ್ಲಿ ಡಕಾಯಿತಿ, ಸುಲಿಗೆ, ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ಸಿಟಿ ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್‌ರವರ ನಿರ್ದೇಶನದಂತೆ ಉಪ ಪೊಲೀಸ್ ಆಯುಕ್ತರಾದ ಸಿದ್ಧಾರ್ಥ ಗೋಯಲ್ ಮತ್ತು ರವಿಶಂಕರ್ ಮತ್ತು ದಕ್ಷಿಣ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಉಳ್ಳಾಲ ಠಾಣಾ ಪೊಲೀಸ್ ನಿರೀಕ್ಷರಾದ ಟಿ. ಡಿ ನಾಗರಾಜ್ ರವರ ನೇತೃತ್ವದಲ್ಲಿ ಉಳ್ಳಾಲ ಠಾಣಾ ಪಿ.ಎಸ್.ಐ ರವರಾದ ಶೀತಲ್ ಅಲಗೂರ, ಸಂತೋಷ್ ಕುಮಾರ್ ಡಿ ಮತ್ತು ಸಿಬ್ಬಂದಿಗಳು ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

LEAVE A REPLY

Please enter your comment!
Please enter your name here