ಪುತ್ತೂರು: ಮುಂಡೂರು ಗ್ರಾ.ಪಂ ವ್ಯಾಪ್ತಿಯ ಸರ್ವೆ ಗ್ರಾಮದ ನೇರೋಳ್ತಡ್ಕದಲ್ಲಿ ತಲೆದೋರಿದ್ದ ನೀರಿನ ಸಮಸ್ಯೆ ಕೊನೆಗೂ ಬಗೆಹರಿದಿದೆ. ಪರಿಸರದಲ್ಲಿ ಸುಮಾರು 40-50 ಮನೆಗಳಿಗೆ ಕೆಲವು ಸಮಯದಿಂದ ಕುಡಿಯುವ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಇತ್ತೀಚೆಗೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಬಳಿಕ ನಡೆದ ಮುಂಡೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲೂ ಇದೇ ವಿಚಾರವಾಗಿ ಭಾರೀ ಚರ್ಚೆ, ವಾಗ್ವಾದ ನಡೆದಿತ್ತು.
ಪತ್ರಿಕಾ ಮಾಧ್ಯಮಗಳಲ್ಲೂ ನೀರಿನ ಸಮಸ್ಯೆ ವಿಚಾರದ ಬಗ್ಗೆ ವರದಿ ಪ್ರಕಟಗೊಂಡಿತ್ತು. ಬಳಿಕದ ಬೆಳವಣಿಗೆಯಲ್ಲಿ ಕುಡಿಯಲು ಯೋಗ್ಯವಲ್ಲವೆನಿಸಿದ್ದ ಬೋರ್ವೆಲ್ನ್ನು ಗ್ರಾ.ಪಂ ವತಿಯಿಂದ ಫ್ಲಶಿಂಗ್ ಮಾಡಿ, ಕಬ್ಬಿಣದ ಪೈಪ್ನ್ನು ತೆಗೆದು ಹೊಸ ಪೈಪ್ ಅಳವಡಿಸಿ ಬಳಿಕ ನೀರನ್ನು ಪರೀಕ್ಷಿಸಲು ಲ್ಯಾಬ್ಗೆ ಕಳುಹಿಸಲಾಗಿತ್ತು. ನೀರನ್ನು ಪರೀಕ್ಷಿಸಿ ‘ಕುಡಿಯಲು ಯೋಗ್ಯ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವರದಿ ನೀಡಿದ್ದು ಇದೀಗ ಪರಿಸರದ ಮನೆಗಳಿಗೆ ಗ್ರಾ.ಪಂ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ನೀರಿನ ಸಮಸ್ಯೆ ಬಗೆಹರಿದಿರುವುದಕ್ಕೆ ಸ್ಥಳೀಯ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ.