ಉಪ್ಪಿನಂಗಡಿ: ಫೆ.27ರಂದು ನಿಗದಿಯಾಗಿದ್ದ ಇಳಂತಿಲ ಗ್ರಾ.ಪಂ. ಸಾಮಾನ್ಯ ಸಭೆಯು ಕೋರಂ ಕೊರತೆಯಿಂದ ರದ್ದುಗೊಂಡಿದೆ.
ಇಳಂತಿಲ ಗ್ರಾ.ಪಂ.ನ ಸಾಮಾನ್ಯ ಸಭೆಯು ಫೆ.27ರಂದು 10.30ಕ್ಕೆ ನಿಗದಿಯಾಗಿತ್ತು. ಸುಮಾರು ಒಂದು ಗಂಟೆಯಷ್ಟು ಕಾದರೂ ಅಧ್ಯಕ್ಷ, ಉಪಾಧ್ಯಕ್ಷರ ಸಹಿತ ಕೇವಲ ಮೂರು ಸದಸ್ಯರು ಮಾತ್ರ ಸಭೆಗೆ ಹಾಜರಾಗಿದ್ದರಿಂದ ಸಭೆಯಲ್ಲಿ ಕೋರಂ ಕೊರತೆ ಕಂಡು ಬಂದಿತ್ತು. ಬಳಿಕ ಸಭೆಯನ್ನು ಮುಂದೂಡಲಾಯಿತು.
14 ಸದಸ್ಯ ಬಲದ ಇಳಂತಿಲ ಗ್ರಾ.ಪಂ.ನಲ್ಲಿ ಕೆಲವು ದಿನಗಳ ಹಿಂದೆ 9 ಮಂದಿ ಸದಸ್ಯರು ಅಧ್ಯಕ್ಷರು ಗ್ರಾಮದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಯಾವುದೇ ಗಮನ ಹರಿಸುವುದಿಲ್ಲ. ಅಲ್ಲದೇ, ಗ್ರಾ.ಪಂ. ಸದಸ್ಯರುಗಳಾದ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಗ್ರಾಮ ಪಂಚಾಯತ್ ಹಿತವನ್ನು ಧಿಕ್ಕರಿಸಿ ತಮ್ಮ ಮನಸ್ಸೋ ಇಚ್ಚೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಅಧ್ಯಕ್ಷ ತಿಮ್ಮಪ್ಪ ಗೌಡರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅವಕಾಶ ಕೋರಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು.
ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಸವಿತಾ, ಸದಸ್ಯರಾದ ಉಷಾ ಎಂ.ಎನ್., ಜಾನಕಿ, ರಮೇಶ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸುಮಯ್ಯ, ಕಾರ್ಯದರ್ಶಿ ವಿಜಯ ಉಪಸ್ಥಿತರಿದ್ದರು.
ಇಳಂತಿಲವು ಗ್ರಾಮೀಣ ಪ್ರದೇಶವಾಗಿದ್ದು, ಇಲ್ಲಿ ಹೆಚ್ಚಾಗಿ ಕೃಷಿಕರೇ ಇದ್ದಾರೆ. ಇಲ್ಲಿ ಹೆಚ್ಚಿನ ತೆರಿಗೆ ಸಂಗ್ರಹವಿಲ್ಲ. ಬಂದ ತೆರಿಗೆ ಹಣದಲ್ಲಿ ಸಿಬ್ಬಂದಿಯ ವೇತನ ನಿಭಾಯಿಸಬೇಕಿದೆ. ಸರಕಾರದ ಅನುದಾನದ ಕೊರತೆಯಿಂದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂದು ಗ್ರಾ.ಪಂ. ಅಧ್ಯಕ್ಷ ತಿಮ್ಮಪ್ಪ ಗೌಡ ಅವರು ಅಭಿವೃದ್ಧಿ ವಿಚಾರಕ್ಕೆ ಸಂಬಂದಿಸಿ ಮಾಧ್ಯಮಕ್ಕೆ ತಿಳಿಸಿದರು.
ಅಧ್ಯಕ್ಷರ ಕೆಲವೊಂದು ಏಕಪಕ್ಷೀಯ ನಿರ್ಧಾರದಿಂದ ರೋಸಿ ಹೋಗಿ ನಾನು ಕೂಡಾ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದೇನೆ. ಹೀಗಿರುವಾಗ ಪೂರ್ವ ನಿಗದಿತ ಸಾಮಾನ್ಯ ಸಭೆಗೆ ತೆರಳುವುದು ಸಮಂಜಸವಲ್ಲ. ಆದ್ದರಿಂದ ಸಭೆಗೆ ಗೈರು ಹಾಜರಾಗಿದ್ದೇನೆ ಎಂದು ಗ್ರಾ.ಪಂ.ನ ಹಿರಿಯ ಸದಸ್ಯ ಇಸುಬು ಪೆದಮಲೆ ತಿಳಿಸಿದ್ದಾರೆ.