ಸ್ವಚ್ಚ ಸಂಸ್ಕೃತಿ, ನಮ್ಮ ಸಂಸ್ಕೃತಿ ಕೇವಲ ಕನಸೇ… ಇದನ್ನು ನನಸು ಮಾಡೋರಾದ್ರು ಯಾರು…?
@ ಸಿಶೇ ಕಜೆಮಾರ್
ಪುತ್ತೂರು: ಸ್ವಚ್ಚ ಸಂಸ್ಕೃತಿ, ನಮ್ಮ ಸಂಸ್ಕೃತಿ ಎಂಬ ಧ್ಯೇಯ ವಾಕ್ಯದೊಂದಿಗೆ ತಾಲೂಕಿನಾದ್ಯಂತ ಹತ್ತು ದಿನಗಳ ಕಾಲ ಬೃಹತ್ ಸ್ವಚ್ಚತಾ ಶ್ರಮದಾನ ನಡೆದಿರುವುದು ಎಲ್ಲರಿಗೂ ತಿಳಿದ ವಿಚಾರ. ತಾಲೂಕಿನ 22 ಗ್ರಾಮ ಪಂಚಾಯತ್‌ಗಳು ಈ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಊರಿನ ಪ್ರತಿಯೊಂದು ಸಂಘ ಸಂಸ್ಥೆಗಳ ನೆರವಿನೊಂದಿಗೆ ಬೀದಿ ಬೀದಿ ಸ್ವಚ್ಛ ಮಾಡುವ ಕೆಲಸ ಮಾಡಿದೆ. ಅಧಿಕಾರಿಗಳು, ಜನ ಪ್ರತಿನಿಧಿಗಳು, ಗ್ರಾಮಸ್ಥರು, ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹೀಗೆ ಪ್ರತಿಯೊಬ್ಬರು ಸೇರಿಕೊಂಡು ಬಸ್ಸು ತಂಗುದಾಣ, ಅಂಗಡಿ ಮುಂಗಟ್ಟು ಎದುರು, ಪೇಟೆ, ಜಂಕ್ಷನ್, ಶಾಲಾ ಕಾಲೇಜು ಆವರಣ, ಮುಖ್ಯ ರಸ್ತೆಗಳ ಬದಿಗಳಲ್ಲಿ ಹೀಗೆ ಪ್ರತಿಯೊಂದು ಕಡೆಗಳಲ್ಲೂ ಕಸ,ತ್ಯಾಜ್ಯವನ್ನು ಹೆಕ್ಕಿ ಸ್ವಚ್ಛತೆಯ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ಆದರೆ ಈ ಸ್ವಚ್ಛತಾ ಶ್ರಮದಾನ ಕಳೆದು ತಿಂಗಳು ಆಗುವ ಮೊದಲೆ ಮತ್ತೆ ರಸ್ತೆ ಬದಿಗೆ ಕಸ,ತ್ಯಾಜ್ಯ ಬಂದು ಬಿದ್ದಿರುವುದು ಮಾತ್ರ ದುರಂತವೇ ಸರಿ.
ಮತ್ತೆ ಬೀದಿಗೆ ಬಿತ್ತು ಕಸ…!
ಪ್ರತಿಯೊಂದು ಗ್ರಾ.ಪಂ ವ್ಯಾಪ್ತಿಯಲ್ಲೂ ಬೀದಿ ಬದಿಗಳಲ್ಲಿರುವ ಕಸ, ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಛ ಮಾಡಲಾಗಿತ್ತು. ಆದರೆ ತಿಂಗಳೊಳಗೆ ಮತ್ತೆ ಅದೇ ಬೀದಿಗಳಲ್ಲಿ ಕಸ,ತ್ಯಾಜ್ಯದ ರಾಶಿಗಳು ಕಂಡು ಬಂದಿದೆ. ಒಂದಷ್ಟು ದಿನ ಸ್ವಚ್ಛವಾಗಿದ್ದ ರಸ್ತೆ ಬದಿಗಳಲ್ಲಿ ಈಗ ಮತ್ತೆ ಕಸ ತುಂಬಿಕೊಂಡಿದೆ.ರಸ್ತೆಯ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್, ಪೇಪರ್, ಬಾಟಲಿ ಇತ್ಯಾದಿಗಳು ಬಿದ್ದು ಕೊಂಡಿವೆ. ಕೆಲವೊಂದು ಕಡೆಗಳಲ್ಲಿ ಗೋಣಿ ಚೀಲಗಳಲ್ಲಿ ಕಸ,ತ್ಯಾಜ್ಯಗಳನ್ನು ಕಟ್ಟಿ ತಂದು ಹಾಕಿದ್ದು ಕಂಡು ಬರುತ್ತಿದೆ. ಹಾಗಾದರೆ ಈ ಜನರಿಗೆ ಬುದ್ದಿ ಬರೋದಾದ್ರು ಯಾವಾಗ…?
ಸ್ವಚ್ಛತೆ ಕೇವಲ ಕನಸೇ..?
ಸ್ವಚ್ಛತೆಯ ಅರಿವು ಮೂಡಿಸುವ ಸಲುವಾಗಿ ಪುತ್ತೂರು ತಾಲೂಕು ಪಂಚಾಯತ್ ಜಿಲ್ಲೆಯಲ್ಲೇ ಒಂದು ವಿಭಿನ್ನ ಪ್ರಯೋಗ ಮಾಡಿತ್ತು. ಸ್ವಚ್ಚ ಸಂಸ್ಕೃತಿ, ನಮ್ಮ ಸಂಸ್ಕೃತಿ ಎಂಬ ಧ್ಯೇಯವಾಕ್ಯದೊಂದಿಗೆ ಪ್ರತಿಯೊಬ್ಬರಲ್ಲೂ ಸ್ವಚ್ಚತೆಯ ಅರಿವು ಮೂಡಿಸುವ ಕೆಲಸ ನಡೆದಿತ್ತು. ಕೇವಲ ಮಾತಿನಲ್ಲಿ ಅರಿವು ಮೂಡಿಸದೇ ಸ್ವತಃ ಕಸ,ತ್ಯಾಜ್ಯಗಳನ್ನು ಹೆಕ್ಕಿ ಸಂಗ್ರಹಿಸಿ ಅವುಗಳನ್ನು ಘನ ತ್ಯಾಜ್ಯ ಘಟಕಕ್ಕೆ ವಿಲೇವಾರಿ ಮಾಡುವ ಮೂಲಕ ಸ್ವಚ್ಛತೆಯ ಜಾಗೃತಿಯನ್ನು ಮೂಡಿಸಲಾಗಿತ್ತು. ಆದರೆ ಇದೆಲ್ಲಾ ಕಳೆದು ತಿಂಗಳು ಆಗುವ ಮೊದಲೇ ರಸ್ತೆ ಬದಿಗೆ ಕಸ ತ್ಯಾಜ್ಯ ಬಂದು ಬೀಳುತ್ತಿದೆ ಎಂದಾದರೆ ಸ್ವಚ್ಚತೆ ಅನ್ನೋದು ಕೇವಲ ಕನಸೇ ಇದನ್ನು ನನಸು ಮಾಡೋದಾದ್ರು ಯಾರು? ಎಂಬ ಯಕ್ಷ ಪ್ರಶ್ನೆ ಮೂಡುತ್ತಿದೆ.

ದಂಡ ಹಾಕಿದ್ರು ಭಯ ಬಂದಿಲ್ಲ..?
ಈಗಾಗಲೇ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಸ, ತ್ಯಾಜ್ಯ ಹಾಕುವವರನ್ನು ಗುರುತಿಸಿ ದಂಡ ಹಾಕುವ ಪ್ರಕ್ರಿಯೆ ಕೂಡ ನಡೆದಿದೆ. 5 ಸಾವಿರದವರೇಗೆ ದಂಡ ಹಾಕುವ ಕಾರ್ಯವೂ ನಡೆದಿದೆ. ಆದರೂ ಕಸ ಹಾಕುವ ದುರ್ಬುದ್ದಿ ಮಾತ್ರ ನಿಂತಿಲ್ಲ. ಹಾಗಾದರೆ ಕಸ ತ್ಯಾಜ್ಯವನ್ನು ರಸ್ತೆ, ಹೊಳೆಗೆ ಇತ್ಯಾದಿ ಕಡೆಗಳಿಗೆ ಬಿಸಾಡುವ ಹೀನ ಸಂಸ್ಕೃತಿ ಯಾವಾಗ ಕೊನೆಯಾಗಬಹುದು?
ರಸ್ತೆ ಬದಿಗೆ ಕಸ ಹಾಕೋರ್‍ಯಾರು?
ರಸ್ತೆ ಬದಿಗೆ ಕಸ ಹಾಕುವವರು ಹೆಚ್ಚಾಗಿ ವಾಹನಗಳಲ್ಲಿ ಸಂಚರಿಸುವವರೇ ಆಗಿರುತ್ತಾರೆ. ವಸತಿಗೃಹ, ಬಾಡಿಗೆ ಮನೆ, ಅಂಗಡಿ ಇತ್ಯಾದಿಗಳಲ್ಲಿ ಉತ್ಪತ್ತಿಯಾದ ಕಸವನ್ನು ಪ್ಲಾಸ್ಟಿಕ್, ಗೋಣಿ ಚೀಲಗಳಲ್ಲಿ ಕಟ್ಟಿಕೊಂಡು ಬೈಕ್,ಕಾರುಗಳಲ್ಲಿ ಬಂದು ರಸ್ತೆ ಬದಿಗೆ ಬಿಸಾಡಿ ಹೋಗುತ್ತಾರೆ. ಇನ್ನುಳಿದಂತೆ ವಾಹನಗಳಲ್ಲಿ ತೆರಳುವಾಗ ನೀರು ಕುಡಿದ ಬಾಟಲಿ, ತಿಂಡಿಗಳ ಪೊಟ್ಟಣ ಇತ್ಯಾದಿಗಳನ್ನು ರಸ್ತೆ ಬದಿಗೆ ಎಸೆದು ಬಿಡುತ್ತಾರೆ. ರಸ್ತೆಗೆ ಕಸ ಬಿಸಾಡುವ ಸಂಸ್ಕೃತಿ ಬದಲಾಗಬೇಕಾದರೆ ಮೊದಲು ನಮ್ಮ ಮನಸ್ಸು ಬದಲಾಗಬೇಕು.
ಬಲ್ನಾಡು ಗ್ರಾಪಂನಿಂದ ಸಿಸಿ ಕ್ಯಾಮರಾ ಅಳವಡಿಕೆ
ಸ್ವಚ್ಚತೆಗೆ ಇನ್ನಷ್ಟು ಬಲ ತುಂಬಿಸುವ ಕೆಲಸವನ್ನು ಬಲ್ನಾಡು ಗ್ರಾಮ ಪಂಚಾಯತ್ ಮಾಡಿದ್ದು ಗ್ರಾ.ಪಂ ವ್ಯಾಪ್ತಿಯ 5 ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. ಮುಖ್ಯವಾಗಿ ಮಂಜ ಸೇತುವೆ, ಅಟ್ಲಾರ್ ಸೇತುವೆ ಹಾಗೇ ಬುಳೇರಿಕಟ್ಟೆ ಜಂಕ್ಷನ್, ಸಾಜ ಕ್ರಾಸ್ ಹಾಗೂ ಚನಿಲದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. ಸಿಸಿ ಕ್ಯಾಮರ ಅಳವಡಿಸಿದ ಬಳಿಕ ಹೊಳೆಗಳಿಗೆ ಕೋಳಿ ತ್ಯಾಜ್ಯ, ಕಸ ಇತ್ಯಾದಿ ಹಾಕುವುದು ಸಂಪೂರ್ಣ ನಿಂತಿದೆ ಹಾಗೇ ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವುದು ಕೂಡ ನಿಂತಿದೆ. ತಿಂಗಳಿಗೆ 2 ಸಲ ಸ್ವಚ್ಚತಾ ಕಾರ್ಯ ಮಾಡುತ್ತಿದ್ದೇವೆ ಎನ್ನುತ್ತಾರೆ ಗ್ರಾಪಂ ಅಧ್ಯಕ್ಷೆ ಪರಮೇಶ್ವರಿ ಭಟ್ ಬಿ.ಆರ್.ರವರು. ಕಸ,ತ್ಯಾಜ್ಯವನ್ನು ರಸ್ತೆ, ಹೊಳೆಗಳಿಗೆ ಬಿಸಾಡುವುದನ್ನು ತಪ್ಪಿಸಲು ಸಿಸಿ ಕ್ಯಾಮರಾ ಒಂದು ಒಳ್ಳೆಯ ಉಪಾಯ ಎಂಬುದನ್ನು ಬಲ್ನಾಡು ಗ್ರಾ.ಪಂ ಮಾಡಿ ತೋರಿಸಿದೆ.
ಒಳಮೊಗ್ರು ಗ್ರಾಪಂನಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು ವರ್ತಕರು ಸೇರಿದಂತೆ ಗ್ರಾಮಸ್ಥರು ಕೂಡ ಉತ್ತಮ ಸಹಕಾರ ನೀಡುತ್ತಿದ್ದಾರೆ. ಈಗಾಗಲೇ ಕುಂಬ್ರ ವರ್ತಕರ ಸಂಘವು ಪಂಚಾಯತ್‌ನೊಂದಿಗೆ ಕೈಜೋಡಿಸಿಕೊಂಡು ವಾರಕ್ಕೆ ಒಂದು ಸಲ ಪೇಟೆ ಸ್ವಚ್ಛತಾ ಕಾರ್ಯವನ್ನು ಮಾಡುತ್ತಿದ್ದಾರೆ. ಪ್ರತಿ ವಾರ್ಡ್‌ನಲ್ಲಿ ಸದಸ್ಯರ ಸಹಕಾರ ಪಡೆದುಕೊಂಡು ಮನೆ ಭೇಟಿ ಮಾಡುವ ಮೂಲಕ ಕಸ ವಿಲೇವಾರಿಯ ಬಗ್ಗೆ ಪರಿಶೀಲನೆ ಮಾಡುವ ಮೂಲಕ `ನನ್ನ ಕಸಕ್ಕೆ ನಾನೇ ಜವಬ್ದಾರ’ ಎಂಬುದನ್ನು ತಿಳಿಸುವುದು ಹಾಗೇ ಕುಂಬ್ರ ಸೇತುವೆ ಬಳಿ ಸಿಸಿ ಕ್ಯಾಮರ ಅಳವಡಿಸುವ ಕೆಲಸ ಮಾಡಲಿದ್ದೇವೆ.
– ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಪಂ
……………………….
ನಾವು 5 ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದೇವೆ. ಮುಖ್ಯವಾಗಿ ಸೇತುವೆಗಳಿಗೆ ಸಿಸಿ ಕ್ಯಾಮರಾ ಅಳವಡಿಸಿದ್ದೇವೆ. ಇದರಿಂದ ತ್ಯಾಜ್ಯಗಳನ್ನು ಹೊಳೆಗೆ ಬಿಸಾಡುವುದು ನಿಂತಿದೆ. ಈಗಾಗಲೇ ಒಂದಿಬ್ಬರನ್ನು ಹಿಡಿದು ಎಚ್ಚರಿಕೆ ನೀಡುವ ಕೆಲಸ ಮಾಡಿದ್ದೇವೆ. ಸ್ವಚ್ಛತೆ ನಮ್ಮೆಲ್ಲರ ಜವಬ್ದಾರಿ ಮತ್ತು ಕರ್ತವ್ಯವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.
– ಪರಮೇಶ್ವರಿ ಭಟ್ ಬಿ.ಆರ್, ಬಬ್ಬಿಲಿ, ಅಧ್ಯಕ್ಷರು ಬಲ್ನಾಡು ಗ್ರಾಪಂ
…………..
ಕೆಯ್ಯೂರು ಗ್ರಾಪಂನಿಂದ ಕಸ,ತ್ಯಾಜ್ಯ ಹಾಕಿದವರನ್ನು ಪತ್ತೆ ಹಚ್ಚುವ ಮೂಲಕ 29,500 ರೂ.ದಂಡ ಸಂಗ್ರಹಿಸಲಾಗಿದೆ. ಆದರೂ ಜನರಿಗೆ ಬುದ್ದಿ ಬರಲಿಲ್ಲ. ಪ್ರಸ್ತುತ ಪ್ಯಾಂಪರ್‍ಸ್ ಅನ್ನು ವಿಲೇವಾರಿ ಮಾಡುವ ಕೆಲಸವನ್ನು ಪಂಚಾಯತ್ ಮಾಡುತ್ತಿದೆ.ಈಗ ಪ್ಯಾಂಪರ್‍ಸ್ ರಸ್ತೆಗೆ ಬಿಸಾಡುವ ಕೆಲಸ ನಿಂತಿದೆ. ತಿಂಗಳ ಮೊದಲ ಆದಿತ್ಯವಾರ ಸ್ವಚ್ಚತಾ ಶ್ರಮದಾನ ಮಾಡುತ್ತಿದ್ದೇವೆ.
-ಶರತ್ ಕುಮಾರ್ ಮಾಡಾವು, ಅಧ್ಯಕ್ಷರು ಕೆಯ್ಯೂರು ಗ್ರಾಪಂ
…………..
ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲೂ ಸ್ವಚ್ಛತಾ ಶ್ರಮದಾನ ಅಭಿಯಾನ ಬಹಳ ಉತ್ತಮವಾಗಿ ನಡೆದಿದೆ ಮತ್ತು ಜನರಿಗೆ ಒಂದು ಸಂದೇಶ ಕೂಡ ತಲುಪಿದೆ. ಆದರೆ ಜನರನ್ನು ಅದನ್ನು ಎಟ್ಟರಮಟ್ಟಿಗೆ ತೆಗೆದುಕೊಂಡಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ. ಮುಂದಿನ 1 ವಾರದೊಳಗೆ ಮತ್ತೆ ಎಲ್ಲರನ್ನು ಸೇರಿಸಿಕೊಂಡು ಒಂದು ಅವಲೋಕನ ಸಭೆ ನಡೆಸಿ ಮುಂದಿನ ಕ್ರಮ ಏನು ಎಂಬುದನ್ನು ತಿಳಿಸಲಾಗುತ್ತದೆ.
-ನವೀನ್ ಭಂಡಾರಿ, ತಾಪಂ ಕಾರ್ಯನಿರ್ವಹಣಾಧಿಕಾರಿ
………………
ಆರ್ಯಾಪು ಗ್ರಾಪಂನಿಂದ ಈಗಾಗಲೇ ಚೆನ್ನಡ್ಕ ಮತ್ತು ದೇವಸ್ಯ ಸೇತುವೆ ಬಳಿ ಸಿಸಿ ಕ್ಯಾಮರ ಅಳವಡಿಸಿದ್ದೇವೆ. ಮುಂದೆ ಮರಕ್ಕ ಹಾಗೇ ಇನ್ನೆರಡು ಕಡೆಗಳಲ್ಲಿ ಕ್ಯಾಮರ ಅಳವಡಿಸಲಿದ್ದೇವೆ. ಇದಕ್ಕೆ ದಾನಿಗಳ ನೆರವು ಕೇಳಿದ್ದೇವೆ. ಸ್ವಚ್ಚತೆಗಾಗಿ ಗ್ರಾಪಂನಿಂದ ಸಾಧ್ಯವಾಗುವ ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ.
– ಗೀತಾ,ಅಧ್ಯಕ್ಷರು ಆರ್ಯಾಪು ಗ್ರಾಪಂ
………………