ಪುತ್ತೂರು: ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿವೇಕಾನಂದ ನರ್ಸರಿ ಶಿಕ್ಷಕರ ಶಿಕ್ಷಣ ಅಕಾಡೆಮಿಯ ಉದ್ಘಾಟನಾ ಸಮಾರಂಭವು ಫೆ. 28 ರಂದು ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿದ್ಯಾಭಾರತಿ ಕ್ಷೇತ್ರೀಯ ಸಹ ಶಿಶು ಶಿಕ್ಷಣ ಪ್ರಮುಖ್ ತಾರಾ ಕಾಳಿಚರಣ್ ಮಗು ಸಮಗ್ರ ಬೆಳವಣಿಗೆಯನ್ನು ಪಡೆಯಲು ಶಿಕ್ಷಣವು ತಾಯಿಯ ಗರ್ಭದಲ್ಲಿಯೇ ಆರಂಭವಾಗಬೇಕು. ಮಗು ಮೂರು ವರ್ಷದವರೆಗೆ ತಾಯಿಯಿಂದಲೇ ಸಂಸ್ಕಾರ, ನೈತಿಕ ಮೌಲ್ಯಗಳು ಹಾಗೂ ಪ್ರಾಥಮಿಕ ಜ್ಞಾನವನ್ನು ಪಡೆಯುತ್ತದೆ. ನಂತರ ಶಾಲಾ ವಾತಾವರಣದಲ್ಲಿ ಮೊಂಟೆಸರಿ ಶಿಕ್ಷಕರ ಮಾರ್ಗದರ್ಶನದಲ್ಲಿ ಬೆಳೆಯಲು ಪ್ರಾರಂಭಿಸುತ್ತದೆ. ಈ ಶಿಕ್ಷಕರು ಕೇವಲ ಪಾಠ ಹೇಳಿಕೊಡುವವರು ಮಾತ್ರವಲ್ಲ, ತಾಯಿಯಂತೆ ಲಾಲನೆ-ಪಾಲನೆ ಮಾಡುವ ಮಹತ್ತರ ಜವಾಬ್ದಾರಿ ಹೊಂದಿರುತ್ತಾರೆ. ಒಂದು ಬೃಹತ್ ವೃಕ್ಷ ಸಮೃದ್ಧವಾಗಿ ಬೆಳೆಯಬೇಕಾದರೆ ಅದಕ್ಕೆ ಸಮರ್ಪಕವಾದ ಪರಿಸರ ಬೇಕಾದಂತೆ, ಮಗು ದೀರ್ಘಕಾಲದ ಶ್ರೇಷ್ಠ ವ್ಯಕ್ತಿತ್ವ ಬೆಳೆಸಿಕೊಳ್ಳಲು ಪ್ರಾಥಮಿಕ ಶಿಕ್ಷಣದ ಅಡಿಪಾಯ ಪ್ರಮುಖವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿ, ಭಾರತದ ಗುರುಕುಲ ಪದ್ಧತಿ ಅತ್ಯಂತ ಸಮಗ್ರವಾದ ಶಿಕ್ಷಣ ವ್ಯವಸ್ಥೆ. ಬಾಲ್ಯದ ಪಾಠಶಾಲೆಗಳೇ ವ್ಯಕ್ತಿತ್ವ ನಿರ್ಮಾಣದ ಅಡಿಪಾಯವಾಗಬೇಕು. ಇದಕ್ಕಾಗಿ, ಮಕ್ಕಳಿಗೆ ಕೇವಲ ಪಾಠ ಪುಸ್ತಕದ ಜ್ಞಾನವಷ್ಟೇ ಅಲ್ಲ, ಜೀವನ ಕೌಶಲಗಳನ್ನು ಕಲಿಸಿಕೊಡುವುದು ಅವಶ್ಯಕ. ಜೀವನದ ದಾರಿಯನ್ನು ಗುರುತಿಸುವಂತೆ ಮಾಡುವ ಶಿಕ್ಷಣವೇ ನಿಜವಾದ ಶಿಕ್ಷಣ ಎಂದರು.
ಕಾರ್ಯಕ್ರಮದಲ್ಲಿ ತಾರಾ ಕಾಳಿಚರಣ್ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಗಂಗಮ್ಮ ಎಚ್ ಶಾಸ್ತ್ರಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ ಎಂ ಕೃಷ್ಣ ಭಟ್, ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ಶೋಭಿತ ಸತೀಶ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಸ್ಥಳೀಯ ಸಂಸ್ಥೆಗಳ ಹಾಗೂ ಶಿಶು ಮಂದಿರಗಳ ಆಡಳಿತ ಮಂಡಳಿ ಸದಸ್ಯರು, ಮುಖ್ಯಸ್ಥರು, ಸಹಾಯಕ ಪ್ರಾಧ್ಯಾಪಕರು, ಶಿಕ್ಷಕರು ಹಾಗೂ ಶಿಶು ಶಿಕ್ಷಣಕ್ಕೆ ಸೇರ್ಪಡೆಗೊಂಡವರು ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಶೋಭಿತ ಸತೀಶ್ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಗಂಗಮ್ಮ ಎಚ್ ಶಾಸ್ತ್ರಿ ವಂದನಾರ್ಪಣೆ ಸಲ್ಲಿಸಿದರು. ಪ್ರಶಿಕ್ಷಣಾರ್ಥಿಗಳಾದ ಅಂಕಿತ, ಪಲ್ಲವಿ, ಜಯಶ್ರೀ, ಚರಿತಾ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕಿ ಅಕ್ಷತಾ ಎಂ. ನಿರೂಪಿಸಿದರು.