ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಧೀಕೃತ ಅಭ್ಯರ್ಥಿಗಳನ್ನೇ ಗೆಲ್ಲಿಸಿ – ವೆಂಕಟ್ ವಳಲಂಬೆ ಮನವಿ

0

ಪುತ್ತೂರು: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಈ ಹಿಂದೆಯೂ ಸಹಕಾರ ಭಾರತಿ ಉತ್ತಮ ಆಡಳಿತ ನೀಡಿದೆ. ಹಾಗಾಗಿ ಆಲಂಕಾರಿಗೆ ದೊಡ್ಡ ಇತಿಹಾಸವೂ ಇದೆ. ಅಲ್ಲಿ ಯಾವುದೇ ಚುನಾವಣೆ ನಡೆದರೂ ಬಿಜೆಪಿಗೆ ಬಹಳ ದೊಡ್ಡ ರೀತಿಯಲ್ಲಿ ಮತ ನೀಡುವ ನಮ್ಮ ಮತದಾರರಿದ್ದಾರೆ. ಮಾ.೨ರಂದು ನಡೆಯುವ ಚುನಾವಣೆಯಲ್ಲೂ ಪಕ್ಷಕ್ಕೆ ಸೆಡ್ಡು ಹೊಡೆಯುವ ವ್ಯವಸ್ಥೆಗೆ ಸರಿಯಾದ ಪ್ರತ್ಯುತ್ತರ ಕೊಡುವ ನಿಟ್ಟಿನಲ್ಲಿ ಎಲ್ಲಾ 12 ಸ್ಥಾನಗಳಿಗೆ ಕಣದಲ್ಲಿರುವ ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಅಧೀಕೃತ ಅಭ್ಯರ್ಥಿಗಳಿಗೆ ಮತ ನೀಡುವಂತೆ ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆ ಅವರು ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಡಬ ಹಾಗು ಸುಳ್ಯ ಎರಡು ತಾಲೂಕುಗಳಲ್ಲಿ ೨೫ ಸಹಕಾರಿ ಕ್ಷೇತ್ರದ ಚುನಾವಣೆ ನಡೆದು ಕೊನೆಯ ಚುನಾವಣೆ ಕಡಬ ತಾಲೂಕಿನ ಆಲಂಕಾರಿನಲ್ಲಿ ಮಾ.೨ರಂದು ನಡೆಯಲಿದೆ. ಸುಮಾರು ಒಂದು ತಿಂಗಳಿನಿಂದ ಅಲಂಕಾರಿನ ೬ ಗ್ರಾಮಗಳ ವ್ಯಾಪ್ತಿಯಲ್ಲಿನ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಒಳಪಟ್ಟ ಬಿಜೆಪಿ ಮತ್ತು ಸಹಕಾರ ಭಾರತೀಯ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಹಿಂದೆಯೂ ಸಹಕಾರ ಭಾರತಿ ಉತ್ತಮ ಆಡಳಿತ ನೀಡಿದೆ. ಹಾಗಾಗಿ ಆಲಂಕಾರಿಗೆ ದೊಡ್ಡ ಇತಿಹಾಸವೂ ಇದೆ. ಅಲ್ಲಿ ಯಾವುದೇ ಚುನಾವಣೆ ನಡೆದರೂ ಬಿಜೆಪಿಗೆ ಬಹಳ ದೊಡ್ಡ ರೀತಿಯಲ್ಲಿ ಮತ ನೀಡುವ ನಮ್ಮ ಮತದಾರರಿದ್ದಾರೆ. ಹಾಗಾಗಿ ಈ ಭಾರಿಯೂ ಸಹಕಾರ ಭಾರತಿ ಮತ್ತು ಬಿಜೆಪಿ ಕಡೆಯಿಂದ ೧೨ ಮಂದಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಆದರೆ ಇಲ್ಲಿ ವೈಯುಕ್ತಿಕ ಹಿತಾಸಕ್ತಿಯಂದ ಕೆಲವರು ಬಂಡಾಯವಾಗಿ ನಿಂತಿದ್ದಾರೆ. ಆದರೆ ಬಿಜೆಪಿ ಕಾರ್ಯಕರ್ತರು, ಪ್ರಬುದ್ಧ ನಾಯಕರು ಮತ್ತು ಮಂಡಲ ಸಮಿತಿಯ ನಾವು ಒಳ್ಳೆಯ ರೀತಿಯ ತೀರ್ಮಾಣಕ್ಕೆ ಬಂದು ಒಂದು ಹೊಸ ತಂಡವನ್ನು ಕಣಕ್ಕಿಳಿಸಿದ್ದೇವೆ. 12 ಮಂದಿಯೂ ಕೂಡಾ ಹೊಸ ಅಭ್ಯರ್ಥಿಗಳಾಗಿದ್ದಾರೆ. ಈ ನಡುವೆ ವೈಯುಕ್ತಿಕ ಹಿತಾಸಕ್ತಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ನಾವೆ ಬಿಜೆಪಿ, ನಾವೆ ಬಿಜೆಪಿಯನ್ನು ಕಟ್ಟಿಬೆಳೆಸಿದ್ದು ಎಂದು ಪಕ್ಷಕ್ಕೆ ಸೆಡ್ಡು ಹೊಡೆಯುತ್ತಿದ್ದಾರೆ. ಇದಕ್ಕೆ ಉತ್ತರವಾಗಿ ನಮ್ಮ ಅಧಿಕೃತ ಅಭ್ಯರ್ಥಿಗಳನ್ನೇ ಮತದಾರು ಗೆಲ್ಲಿಸುವಂತೆ ಮನವಿ ಮಾಡಿದರು.
ಅವಕಾಶ ನೀಡಿದರೂ ಬಂಡಾಯ ನಿಂತರು:
ಬಂಡಾಯದ ಅಲೆಯನ್ನು ಎಬ್ಬಿಸುತ್ತಿದ್ದ ತಂಡವನ್ನೂ ಚುನಾವಣೆ ಪೂರ್ವವಾಗಿ ಕರೆಸಿ ಮಾತನಾಡುವ ಸಂದರ್ಭ ಅವರು ಒಂದಷ್ಟು ಪಟ್ಟಿ ನೀಡಿ ನಮಗೆ ಅವಕಾಶ ನೀಡುವಂತೆ ಕೇಳಿಕೊಂಡರು. ಆಗ ಮಂಡಲ ಅಧ್ಯಕ್ಷನಾಗಿ ನಾನು ವಿಶೇಷವಾಗಿ ಆ ಗ್ರಾಮಗಳಿಗೆ ಭೇಟಿ ನೀಡಿ. ಅವರ ತಂಡ ಮತ್ತು ಬಿಜೆಪಿ ತಂಡವನ್ನು ಮಾತನಾಡಿಸಿ ಒಂದಷ್ಟು ಮೂರು ಮಂದಿಗೆ ಅಭ್ಯರ್ಥಿ ಸ್ಥಾನ ನೀಡುವ ಘೋಷಣೆ ಮಾಡಿದ್ದೇವೆ. ಆಗ ಅವರು ೧೨ ಸ್ಥಾನವನ್ನೂ ಕೂಡಾ ನಮಗೆ ಕೊಡುವಂತೆ ಒತ್ತಡ ತಂದಿದ್ದರು. ಆಗ ನಮ್ಮ ಪಕ್ಷ ಆ ರೀತಿಯ ಬೇಡಿಕೆಗೆ ಜಗ್ಗಲಿಲ್ಲ. ರಾಷ್ಟ್ರೀಯ ಪಾರ್ಟಿಯಾಗಿ ಯಾವುದೋ ತಂಡ ಅಥವಾ ವ್ಯಕ್ತಿ ಹೇಳಿದ ಹಾಗೆ ಪಕ್ಷ ನಡೆಸಲು ಆಗುವುದಿಲ್ಲ. ಒಳ್ಳೆಯ ರೀತಿಯ ತಂಡ ಮಾಡಿ ಪಕ್ಷದ ವ್ಯವಸ್ಥೆಯೊಳಗೆ ಹೋಗಬೇಕು ಹೊರತು ಒತ್ತಡ ತರುವುದಲ್ಲ. ಹಾಗಾಗಿ ನಾವು ಎಲ್ಲಾ ಸಹಕಾರ ಭಾರತಿಯಲ್ಲಿ ಹೊಸ ಮುಖಗಳನ್ನೇ ಕಣಕ್ಕೆ ಇಳಿಸಿದ್ದೇವೆ. ಆಲಂಕಾರು ಸೊಸೈಟಿ ಚುನಾವಣೆಯಲ್ಲಿ 12ಕ್ಕೆ 12 ಕೂಡಾ ನಾವು ಗೆದ್ದೇ ಗೆಲ್ಲುತ್ತೇವೆ. ಈಗಾಗಲೇ ಪ್ರತಿ ಬೂತ್‌ನಲ್ಲಿ ಕಾರ್ಯಕರ್ತರು ಬಹಳ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಕಾರ್ಯಕರ್ತರ ಆಧಾರದಲ್ಲಿ ನಾವು ನೂರಕ್ಕೆ ನೂರು ಗೆಲ್ಲುತ್ತೇವೆ ಎಂದು ವೆಂಕಟ್ ವಳಲಂಬೆ ಹೇಳಿದರು.
ನಾನು ಬಿಟ್ಟರೆ ಬಿಜೆಪಿಯೇ ಇಲ್ಲ ಅನ್ನುವವರಿಗೆ ಪ್ರತ್ಯುತ್ತರ:
ಮುಂದಿನ ದಿನದಲ್ಲಿ ಪಕ್ಷಕ್ಕೆ ವಿರುದ್ದವಾಗಿ ನಿಲ್ಲುವ ಅಥವಾ ಅವಕಾಶ ವಾದಿಗಳು ಅಥವಾ ನಾನೆ ಬಿಜೆಪಿ. ನಾನು ಬಿಟ್ಟರೆ ಬಿಜೆಪಿಯೇ ಇಲ್ಲ ಎನ್ನುವ ಮನೋಭಾವ ಇರುವವರಿಗೆ ಪ್ರತ್ಯುತ್ತರ ನೀಡುತ್ತೇವೆ. ಸಾಲಗಾರರ ಕ್ಷೇತ್ರದಿಂದ ೧೬೪೩ ಹಾಗೂ ಸಾಲಗಾರರಲ್ಲದವರು ೪೪೦ ಒಟ್ಟು ೨೦೮೩ ಮತದಾರರಿದ್ದಾರೆ. ನಮ್ಮ ಅಭ್ಯರ್ಥಿಗಳಾದ ಅಶೋಕ, ಜನಾರ್ಧನ ಪೂಜಾರಿ, ಪ್ರಶಾಂತ್ ಆರ್.ಕೆ, ರಘುರಾಮ ಕೆ, ಸುಭಾನ್ ರೈ, ಗಾಯತ್ರಿ, ಸುಂದರಿ, ಜಯಕರ ಪೂಜಾರಿ, ಮಾಧವ ಮೇರ, ನಿರಂಜನ ಎನ್, ಸುಧೀಶ, ದಯಾನಂದ ಎನ್ ಅವರು ಗೆಲುವು ಸಾಧಿಸಲಿದ್ದಾರೆ.
ಬಂಡಾಯ ಕಾಂಗ್ರೆಸ್ ಬೆಂಬಲಿತ:
ಬಂಡಾಯ ನಿಂತ ವ್ಯಕ್ತಿ ಚುನಾವಣೆ ಸಂದರ್ಭ ಪ್ರಮುಖರು ಬಂದಾಗ ಮುಂದೆ ಹೋಗಿ ನಿಲ್ಲುವ ವ್ಯಕ್ತಿಯಾಗಿದ್ದು, ಯಾವುದೇ ಚುನಾವಣೆ ಅಥವಾ ಸಾಮಾನ್ಯ ಸಮಸ್ಯೆಗಳಿಗೆ ಸ್ಪಂಧಿಸುವ ವ್ಯಕ್ತಿಯಾಗಿರದೆ ಕಾಂಗ್ರೆಸ್ ಬೆಂಬಲಿಗರಾಗಿದ್ದಾರೆ. ಯಾಕೆಂದರೆ ಕಾಂಗ್ರೆಸ್‌ನವರು ಕೂಡಾ 12 ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಕೊನೆ ಕ್ಷಣದಲ್ಲಿ ಬಿಜೆಪಿ ಎಂಬ ಹೆಸರಿನಲ್ಲಿರುವ ಬಂಡಾಯವೆದ್ದವರೊಂದಿಗೆ ಸೇರಿಕೊಂಡು ತಮ್ಮ 1 ಸ್ಥಾನ ಉಳಿಸಿಕೊಂಡು 11 ಸ್ಥಾನ ಹಿಂದಕ್ಕೆ ಪಡೆದಿದ್ದಾರೆ. ನಮ್ಮ ಹೋರಾಟ ಪಕ್ಷಕ್ಕೆ ವಿರೋಧವಾಗಿ ಹೋದವರ ವಿರುದ್ದ. ಪ್ರತಿ ಸಂದರ್ಭದಲ್ಲಿ ಬಂಡಾಯದ ಧ್ವನಿ ಎತ್ತುವವರು ನಮಗೆ ವಿರೋಧಿಗಳಾಗಿದ್ದಾರೆ ಎಂದು ವೆಂಕಟ್ ವಳಲಂಬೆ ಹೇಳಿದರು.
೧ಸಾವಿರ ಕೋಟಿ ವಾರ್ಷಿಕ ವಹಿವಾಟು:
ಕಳೆದ 48 ವರ್ಷಗಳಲ್ಲಿ ಕಾರ್ಯಚರಿಸುತ್ತಿರುವ ಈ ಸಂಘವು ಸಹಕಾರ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಯೊಂದಿಗೆ ಮಹತ್ತರ ಮೈಲುಗಲ್ಲು ದಾಟಿ ಮುಂದುವರಿಯುತ್ತಿದೆ. ಹಿಂದೆ ಕೇವಲ ೪.೭೭ ಕೋಟಿ ವಾರ್ಷಿಕ ವಾಹಿವಾಟು ನಮ್ಮ ಅವಧಿಯಲ್ಲಿ ೧ ಸಾವಿರ ಕೋಟಿ ವಾರ್ಷಿಕ ವಾಹಿವಾಟು ಮಾಡಿಕೊಂಡು ರೂ. ೨.೫ ಕೋಟಿ ಲಾಭ ಗಳಿಸಿದ್ದೇವೆ. ಒಟ್ಟು ಎಲ್ಲಾ ಕ್ಷೇತ್ರದಲ್ಲೂ ಸಂಘ ಉತ್ತಮ ವ್ಯವಹಾರ ನಡೆಸಿದೆ ಎಂದು ಸಂಘದ ನಿಕಟಪೂರ್ವ ಅಧ್ಯಕ್ಷ ಧರ್ಮಪಾಲ ರಾವ್ ಕಜೆ ಅವರು ಹೇಳಿದ ಅವರು ನಿಯಮಾವಳಿಗಳ ಪ್ರಕಾರ ಬಜೆಟ್ ನಲ್ಲಿ ಹಣ ಇಟ್ಟಿರುವುದಕ್ಕಿಂತ ಒಂದು ರೂಪಾಯಿಯೂ ಹೆಚ್ಚು ಖರ್ಚು ಮಾಡಿಲ್ಲ ಎಂದರು. ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಶ್ ರೈ ಮಾವಂಜೆ, ಕಾರ್ಯದರ್ಶಿ ಶಿವಪ್ರಸಾದ್ ನಡುತೋಟ, ಕೊಯಿಲ ಶಕ್ತಿ ಕೇಂದ್ರ ಅಧ್ಯಕ್ಷ ರವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

*Lokesh Bannur*
Reporter
*SUDDI BIDUGADE*, Kannada Daily News Paper Puttur
*Mobile : 9449593676*
Click : www.suddimahithi.com
          Online news: suddinews.com

LEAVE A REPLY

Please enter your comment!
Please enter your name here