ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ 36ನೇ ಉಚಿತ ವೈದ್ಯಕೀಯ ಶಿಬಿರ

0

ಪುತ್ತೂರು: ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಹಾಗೂ ಆರೋಗ್ಯ ರಕ್ಷಾ ಸಮಿತಿ ಸಂಪ್ಯ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯುತ್ತಿರುವ 36ನೇ ಉಚಿತ ವೈದ್ಯಕೀಯ ಶಿಬಿರವು ಮಾ.೧ರಂದು ದೇವಸ್ಥಾನದಲ್ಲಿ ನಡೆಯಿತು.


ದೇವಸ್ಥಾನದ ಎಲ್ಲಾ ಕಾರ್ಯಕ್ರಮಗಳಲ್ಲಿ ನಿರಂತರ ಸಹಕಾರ ನೀಡುತ್ತಿರುವ ನೀಲಮ್ಮರವರು ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಪ್ರತಿ ತಿಂಗಳು ನಿರಂತರವಾಗಿ ನಡೆಸುತ್ತಿರುವ ವೈದ್ಯಕೀಯ ಶಿಬಿರವು ಮೂರು ವರ್ಷ ಪೂರೈಸಿದೆ. ಪುತ್ತೂರಿನ ಹಲವು ಮಂದಿ ವೈದ್ಯರು, ಔಷಧಿ ಕಂಪನಿಗಳು, ಲ್ಯಾಬೋರೇಟರಿಗಳು ಹಾಗೂ ಭಕ್ತಾದಿಗಳು ಸಹಕಾರದಿಂದ ಶಿಬಿರವು ಯಶಸ್ವಿಯಾಗಿ ನಡೆಯುತ್ತಿದೆ. ಶಿಬಿರವು ನಿರಂತರವಾಗಿ ಮುಂದುವರಿಯಲಿದೆ. ಇದೀಗ ಹೊಸ ವ್ಯವಸ್ಥಾಪನಾ ಸಮಿತಿ ರಚನೆಯಾಗಿದೆ. ದೇವಸ್ಥಾನದ ಕಾರ್ಯಕ್ರಮಗಳು ಹಾಗೂ ಶಿಬಿರದಲ್ಲಿ ಎಲ್ಲರ ಸಹಕಾರ ನಿರಂತರವಾಗಿರಲಿ ಎಂದು ವಿನಂತಿಸಿದರು.


ಸುನಂದ ಕೆ.ಪುತ್ತೂರಾಯರವರಿಗೆ ಶ್ರದ್ಧಾಂಜಲಿ ಸಭೆ:
ವೈದ್ಯಕೀಯ ಶಿಬಿರದ ೨೫ನೇ ಶಿಬಿರವನ್ನು ಉದ್ಘಾಟಿಸಿದ್ದ, ಡಾ.ಸುರೇಶ್ ಪುತ್ತೂರಾಯರವರ ತಾಯಿ ಸುನಂದ ಕೆ.ಪುತ್ತೂರಾಯರವರಿಗೆ ವೈದ್ಯಕೀಯ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಬಳಿಕ ಶ್ರದ್ಧಾಂಜಲಿ ಸಭೆ ನಡೆಯಿತು. ನುಡಿ ನಮನ ಸಲ್ಲಿಸಿದ ರವಿನಾಥ ಗೌಡ ಬೈಲಾಡಿ ಮಾತನಾಡಿ, ಡಾ. ಸುರೇಶ್ ಪುತ್ತೂರಾಯರವರ ತಾಯಿ ಸುನಂದ ಕೆ. ಪುತ್ತೂರಾಯರವರು ನಮಗೆ ತಾಯಿಗೆ ಸಮಾನವಾಗಿದ್ದವರು. ನಮ್ಮನ್ನೂ ಮಕ್ಕಳಂತೆ ಸಲಹಿದವರು. ಅವರ ನಾಲ್ವರು ಮಕ್ಕಳು ಹಾಗೂ ನಾವು ಐವರು ಮಕ್ಕಳು ಸಹೋದರರಂತೆ ಆಡಿ ಬೆಳೆದವರು. ಮನೆ ಎಲ್ಲಾ ಕಾರ್ಯಕ್ರಮಗಳಲ್ಲಿ ನಾವು ಭಾಗಿಯಾಗುತ್ತಿದ್ದೇವು. ಯಾವುದೇ ಕಾರ್ಯಕ್ರಮಗಳಿಗೆ, ಸಿನೆಮಾಗಳಿಗೆ ನಾವು ಜತೆಯಾಗಿ ಹೋಗುತ್ತಿದ್ದೆವು. ಸ್ನೇಹಮಯವಾಗಿ ಜೀವನ ನಡೆಸಿದ್ದ ಅವರು ಅಮ್ಮನಂತೆ ನಮ್ಮನ್ನು ಸಲಹಿದವರು ಎಂದ ತನ್ನ ಬಾಲ್ಯದ ನೆನಪುಗಳು ತಿಳಿಸಿದರು.


ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯಕುಮಾರ್ ನಾಯರ್, ಲಕ್ಷ್ಮಣ ಬೈಲಾಡಿ, ವಿನ್ಯಾಸ್ ಯು.ಎಸ್., ಅರ್ಚಕ ಮೋಹನ ರಾವ್, ಡಾ.ರಚಿತಾ ರೈ, ಮುಕ್ರಂಪಾಡಿ ಶ್ರೀಸತ್ಯನಾರಾಯಣ ಪೂಜಾ ಸಮಿತಿಯ ಸಂತೋಷ್ ಮುಕ್ರಂಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನವಚೇತನ ಯುವಕ ಮಂಡಲದ ಅಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಕ ಸ್ವಾಗತಿಸಿ, ನಿಕಟಪೂರ್ವ ಅಧ್ಯಕ್ಷ ವಿಜಯ ಬಿ.ಎಸ್ ವಂದಿಸಿದರು. ಉದಯ ಕುಮಾರ್ ರೈ ಎಸ್ ಸಂಪ್ಯ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ತಜ್ಞರಿಂದ ಸಾಮಾನ್ಯ ವೈದ್ಯಕೀಯ ತಪಾಸಣೆ, ಆಯುರ್ವೇದ ವೈದ್ಯಕೀಯ ತಪಾಸಣೆ, ಇಸಿಜಿ, ಮಧುಮೇಹ ರಕ್ತಪರೀಕ್ಷೆಗಳನ್ನು ನಡೆಸಿ ಔಷಧಿಗಳನ್ನು ಉಚಿತವಾಗಿ ವಿತರಿಸಿದರು.


ನವಚೇತನ ಯುವಕ ಮಂಡಲ ಸಂಪ್ಯ, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮುಕ್ರಂಪಾಡಿ, ಐಕ್ಯ ಕಲಾ ಸೇವಾ ಟ್ರಸ್ಟ್ ಮೊಟ್ಟೆತ್ತಡ್ಕ, ಐಡಿಯಲ್ ಲ್ಯಾಬೊರೇಟರಿ ಪುತ್ತೂರು, ಮಹಾವೀರ ಆಸ್ಪತ್ರೆ ಪುತ್ತೂರು, ಭಾರತೀಯ ಜನೌಷಧಿ ಕೇಂದ್ರಗಳು ಪುತ್ತೂರು, ಉಷಾ ಸ್ಕ್ಯಾನ್ ಸೆಂಟರ್ ದರ್ಬೆ, ಪುತ್ತೂರು ಡಯಾಗ್ನೋಸ್ಟಿಕ್ ಮತ್ತು ರಿಸರ್ಚ್ ಸೆಂಟರ್ ತೆಂಕಿಲ, ಹಲವು ಔಷಧಿ ಕಂಪೆನಿಗಳು ಹಾಗೂ ಭಕ್ತಾದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here