ಪುತ್ತೂರು:ಕೊಂಬೆಟ್ಟಿನಲ್ಲಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಜಾಗವಿರುವ ಸ್ಥಳದಲ್ಲಿ ಆವರಣಗೋಡೆ ನಿರ್ಮಾಣ ಮಾಡಲಾಗುತ್ತಿದೆ ಎಂಬ ಮಾಹಿತಿಯರಿತು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮತ್ತು ಕಾರ್ಯನಿರ್ವಹಣಾಧಿಕಾರಿಯವರು,ಕಾಮಗಾರಿ ಮಾಡದಂತೆ ತಿಳಿಸಿ ತಾತ್ಕಾಲಿಕವಾಗಿ ತಡೆ ಹಿಡಿದ ಘಟನೆ ಮಾ.3ರಂದು ನಡೆದಿದೆ.
ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿ ಕೊಂಬೆಟ್ಟು ಪರಿಸರದಲ್ಲಿ ಸುಮಾರು 92 ಸೆಂಟ್ಸ್ ಜಾಗವಿದ್ದು,ಈ ಹಿಂದಿನ ವ್ಯವಸ್ಥಾಪನಾ ಸಮಿತಿ ಜಾಗದ ಸರ್ವೆ ಕಾರ್ಯ ಮಾಡಿತ್ತು.ಬಳಿಕ ಅದರ ಮುಂದಿನ ಬೆಳವಣಿಗೆ ಆಗಿರಲಿಲ್ಲ.ಮಾ.3ರಂದು ಕೊಂಬೆಟ್ಟು ಬ್ರಾಹ್ಮಣರ ಹಾಸ್ಟೇಲ್ ಬಳಿಯ ಗೇಟ್ ಮುಂದೆ ಆವರಣಗೋಡೆ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಸಂದರ್ಭ ಮಾಹಿತಿ ಪಡೆದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಸದಸ್ಯರಾದ ಈಶ್ವರ ಬೆಡೇಕರ್, ವಿನಯ ಸುವರ್ಣ ಹಾಗು ಕಾರ್ಯನಿರ್ವಹಣಾದಿಕಾರಿ ಕೆ.ವಿ.ಶ್ರೀನಿವಾಸ್ ಅವರು ಸ್ಥಳಕ್ಕೆ ಆಗಮಿಸಿ ದೇವಳದ ಜಾಗದ ಸರ್ವೆ ಆಗಿರುವ ವರದಿ ಬಾರದೆ ಕಾಮಗಾರಿ ನಡೆಸದಂತೆ ತಿಳಿಸಿದರು.ಅದರಂತೆ ಆವರಣಗೋಡೆ ನಿರ್ಮಾಣದ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಗಡಿಗುರುತಿಗೆ ಸರ್ವೆ
ದೇವಳದ ಜಾಗ ಇರುವ ಕುರಿತು ಈ ಹಿಂದೆ ಸರ್ವೆ ಮಾಡಲಾಗಿದೆ.ಇದೀಗ ದೇವಳದ ಎಲ್ಲಾ ಜಾಗದ ಗಡಿಗುರುತಿಗಾಗಿ ಈಗ ಮತ್ತೊಮ್ಮೆ ಸರ್ವೆ ಕಾರ್ಯ ಮಾಡಲಾಗುವುದು.ಅಲ್ಲಿನ ತನಕ ಯಾವುದೇ ಕಾಮಗಾರಿ ನಡೆಸದಂತೆ ತಿಳಿಸಲಾಗಿದೆ
-ಈಶ್ವರ ಭಟ್ ಪಂಜಿಗುಡ್ಡೆ,, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು