ಅನಧಿಕೃತ ಸೊತ್ತು, ಕಟ್ಟಡಗಳಿಗೆ, ಕಟ್‌ಕನ್ವರ್ಷನ್‌ಗೆ ’ಬಿ’ ಖಾತೆ ಸಕ್ರಮವಾಗುವುದಿಲ್ಲ., ಸಾರ್ವಜನಿಕರು ಗೊಂದಲವಾಗದಿರಿ – ಹೆಚ್. ಮಹಮ್ಮದ್ ಆಲಿ

0

  • ಸಿಂಗಲ್ ಟ್ಯಾಕ್ಸ್, ಬ್ಯಾಂಕ್‌ಸಾಲ, ಮಾರಾಟಕ್ಕೆ ಅವಕಾಶದ ಪ್ರಯೋಜನ
  • ಸಿಂಗಲ್ ಲೇ ಔಟ್ ಮಾಡಲವಕಾಶವಿಲ್ಲದಲ್ಲಿ ಮನೆ ಕಟ್ಟಲು ಸಮಸ್ಯೆ
  • ಪರವಾನಿಗೆ ಇಲ್ಲದೆ ಕಟ್ಟಡ ನಿರ್ಮಾಣ ಮಾಡಬೇಡಿ

  • ಪುತ್ತೂರು: ಸರಕಾರದ ಹೊಸ ನಿಮಯದಂತೆ ಅಧಿಕೃತ ಕಟ್ಟಡ ಮತ್ತು ಸ್ಥಳಕ್ಕೆ ’ಎ’ ಖಾತೆ ನೀಡುವುದು, ಅನಧಿಕೃತ ಕಟ್ಟಡ ಮತ್ತು ಸ್ಥಳಕ್ಕೆ ’ಬಿ’ ಖಾತೆ ನೀಡಲು ಸರಕಾರ ಆದೇಶಿಸಿದೆ. ಇದರಲ್ಲಿ ಹಿಂದೆ ೨ಪಟ್ಟು ಹೆಚ್ಚು ತೆರಿಗೆ ನೀಡುವ ಅನಧಿಕೃತ ಕಟ್ಟಡಗಳು ಒಂದು ಪಟ್ಟು ತೆರಿಗೆ ವಿಧಿಸುವ ಅವಕಾಶ ಮತ್ತು ಕಾವೇರಿ ತಂತ್ರಾಂಶಕ್ಕೆ ಲಿಂಕ್ ಮಾಡಿರುವುದರಿಂದ ಈಗಿನ ನಿಯಮದಲ್ಲಿ ಮಾರಲು ಅವಕಾಶ ನೀಡಿರುವುದು ಹಾಗು ಬ್ಯಾಂಕ್ ಸಾಲವೂ ಪಡೆಯಲು ಅವಕಾಶ ಇರುವುದು ಸಾರ್ವಜನಿಕರಿಗೆ ಪ್ರಯೋಜನ ಆಗಿದೆ. ಸರಕಾರದ ಜನಪರ ಆದೇಶಕ್ಕೆ ಪುತ್ತೂರು ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಇಲ್ಲಿ ಎಲ್ಲಿಯೂ ಅಕ್ರಮ ಕಟ್ಟಡ ಸಕ್ರಮ ಆಗುವುದಿಲ್ಲ ಎಂದು ಜನರು ತಿಳಿದಿರಬೇಕು. ಹಾಗಾಗಿ ಪರವಾನಿಗೆ ಇಲ್ಲದೆ ಕಟ್ಟಡ ನಿರ್ಮಾಣ ಮಾಡಬೇಡಿ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿಯವರು ಪತ್ರಿಕಾಗೋಷ್ಟಿಯಲ್ಲಿ ಜನರ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಕಟ್‌ಕನ್ವರ್ಷನ್‌ನಲ್ಲಿ ಜನರಿಗೆ ಗೊಂದಲವಿದೆ. ಈಗಿನ ಕಾಯಿದೆಯಲ್ಲಿ ಕಟ್ ಕನ್ವರ್ಷನ್ ಆಗಿರುವ ಸ್ಥಳಗಳಿಗೆ ’ಬಿ’ ಖಾತೆ ನೀಡುವ ಅವಕಾಶವಿದ್ದು, ಆದರೆ ಸದರಿ ’ಬಿ’ ಖಾತೆಯ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಯಾಕೆಂದರೆ ಕಟ್‌ಕನ್ವರ್ಷನ್ ಆದ ಸ್ಥಳಕ್ಕೆ ಸಿಂಗಲ್ ಲೇ ಔಟ್ ಅನುಮೋದನೆಗೆ ಅವಕಾಶ ಇಲ್ಲದ ಕಾರಣ ಕಟ್‌ಕನ್ವರ್ಷನ್ ಸ್ಥಳದಲ್ಲಿ ಮನೆ ಕಟ್ಟಲು ಈ ಕಾಯಿದೆಯಲ್ಲಿ ಅವಕಾಶವಿರುವುದಿಲ್ಲ. ಹಾಗಾಗಿ ಕಟ್‌ಕನ್ವರ್ಷನ್‌ಗೆ ಒಳಪಟ್ಟಿರುವ ಸ್ಥಳಕ್ಕೆ ’ಬಿ’ ಖಾತೆ ನೀಡಬಹುದು ಮತ್ತು ಮಾರಾಟವನ್ನೂ ಮಾಡಬಹುದು. ಆದರೆ ಈ ಸ್ಥಳಕ್ಕೆ ಸಿಂಗಲ್ ಲೇ ಔಟ್ ಮಾಡಲು ಅವಕಾಶವಿಲ್ಲ. ಹಾಗಾಗಿ ಅಲ್ಲಿ ಕಟ್ಟಡ ಕಟ್ಟಲು ಅನುಮತಿಯೂ ಸಿಗುವುದಿಲ್ಲ. ಹಾಗಾಗಿ ಸ್ಥಳವನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಅದನ್ನು ಖರೀದಿಸುವವರು ಎಚ್ಚರಿಕೆ ವಹಿಸಿಕೊಳ್ಳಬೇಕೆಂದು ಅವರು ತಿಳಿಸಿದರು. ಒಟ್ಟು ಸಂಪನ್ಮೂಲ ಕ್ರೋಢೀಕರಿಸಲು ಈ ಕಾಯ್ದೆ ತರಲಾಗಿದೆ. ಹೊರತು ಅಕ್ರಮವನ್ನು ಸಕ್ರಮ ಮಾಡುವುದಕ್ಕಾಗಿ ಅಲ್ಲ ಎಂದು ಹೇಳಿದರು.

  • ಪರವಾನಿಗೆ ಪಡೆಯದೆ ಕಟ್ಟಿರುವ ಕಟ್ಟಡ ಸಕ್ರಮಗೊಳಿಸಲು ಅವಕಾಶವಿಲ್ಲ:
  • ೨೦೧೩ರಲ್ಲಿ ಮೊದಲು ನಿರ್ಮಾಣವಾದ ಅನಧಿಕೃತ ಕಟ್ಟಡಗಳನ್ನು ಸಕ್ರಮಗೊಳಿಸಲು ಸರಕಾರ ಕಾಯಿದೆ ರೂಪಿಸಿದ್ದು, ಇದರಲ್ಲಿ ನಕ್ಷೆಯನ್ನು ಉಲ್ಲಂಘಿಸಿ ಕಟ್ಟಿರುವ ಕಟ್ಟಡವನ್ನು ವಲಯ ನಿಯಮಾವಳಿಯಂತೆ ಶೇ.೫೦ ಒಳಗಿರುವ ಉಲ್ಲಂಘಿತ ಕಟ್ಟಡಗಳನ್ನು ಮಾತ್ರ ಸಕ್ರಮ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಕಾನೂನಿನಲ್ಲಿ ಪರವಾನಿಗೆ ಪಡೆಯದೆ ಕಟ್ಟಿರುವ ಕಟ್ಟಡಗಳನ್ನು ಸಕ್ರಮಗೊಳಿಸಲು ಅವಕಾಶವಿರುವುದಿಲ್ಲ. ಈ ಕಾನೂನಿಗೆಎ ಸುಪ್ರೀಂ ಕೋರ್ಟ್‌ನಲ್ಲಿ ತಡೆಯಾಜ್ಞೆಯೂ ಇದೆ. ಆದುದರಿಂದ ’ಬಿ’ ಖಾತೆ ಅನಧಿಕೃತ ಖಾತೆಯಾಗಿದ್ದು ಸಕ್ರಮವಾಗುವುದಿಲ್ಲ ಎಂದು ಮಹಮ್ಮದ್ ಆಲಿ ಹೇಳಿದರು.

  • ಅನಧಿಕೃತ ಕಟ್ಟಡ ನಿರ್ಮಾಣ ತಡೆಯಲು ಸರಕಾರ ಆದೇಶ:
  • ಮಾ.೧ರಂದು ಸರಕಾರದ ಹೊಸ ಆದೇಶದಂತೆ ನಗರ ಸ್ಥಳೀಯ ಸಂಸ್ಥೆಗಳಿಂದ ಮಂಜೂರಾದ ಕಟ್ಟಡ ಪರವಾನಿಗೆ ಉಲ್ಲಂಘಿಸಿ ನಿರ್ಮಿಸಲಾಗಿರುವ ಕಟ್ಟಡಗಳು ಮತ್ತು ಅನಧಿಕೃತ ಕಟ್ಟಡಗಳ ನಿರ್ಮಾಣ ತಡೆಯುವ ಬಗ್ಗೆ ಸರಕಾರದಿಂದ ಹೊಸ ಆದೇಶವಾಗಿದೆ. ಹಾಗಾಗಿ ಸಾರ್ವಜನಿಕರು ಪರವಾನಿಗೆ ಇಲ್ಲದೆ ಕಟ್ಟಡ ನಿರ್ಮಾಣ ಮಾಡಬಾರದು ಅಥವಾ ಮಂಜೂರಾದ ನಕ್ಷೆಯಂತೆ ಕಟ್ಟದೆ ಸೆಟ್‌ಬ್ಯಾಕ್ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಬಾರದು ಎಂದು ಹೆಚ್ ಮಹಮ್ಮದ್ ಆಲಿ ವಿನಂತಿಸಿದ್ದಾರೆ.

  • ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಬೇಕು
  • ಅಧಿಕಾರಿಗಳ ಪರೋಕ್ಷವಾದ ಬೆಂಬಲದಿಂದ ಅನಧಿಕೃತ ಕಟ್ಟಡ ನಿರ್ಮಾಣ ಆಗುತ್ತದೆ. ನಗರ ಪ್ರದೇಶದಲ್ಲಿ ಈ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕು. ಸಿಂಗಲ್ ಟ್ಯಾಕ್ಸ್ ಈಗ ಉತ್ತಮ ವಿಚಾರ. ಆದರೆ ಅನಧಿಕೃತ ಕಟ್ಟಡಗಳಿಗೆ ಪರೋಕ್ಷವಾಗಿ ಬೆಂಬಲಿಸಿದ ಅಧಿಕಾರಿಗಳ ಮೇಲೂ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಬೇಕಾಗಿದೆ ಎಂದ ಹೆಚ್ ಮಹಮ್ಮದ್ ಆಲಿ ಅವರು ಕೆಲವೊಂದು ವಸತಿ ಬಡಾವಣೆ, ಕಟ್ಟಡಗಳ ಅನುಮೋದಿವಲ್ಲವಾದರೂ ಪರವಾನಿಗೆ ನೀಡಿರುವ ಕುರಿತು ಈಗಾಗಲೇ ಲೋಕಾಯುಕ್ತದಲ್ಲಿ ಕೇಸು ನಡೆಯುತ್ತಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಸದಸ್ಯ ಮಹಮ್ಮದ್ ರಿಯಾಜ್, ನಾಮನಿರ್ದೇಶಿತ ಸದಸ್ಯ ರೋಶನ್ ರೈ ಬನ್ನೂರು, ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ಭೂ ನ್ಯಾಯ ಮಂಡಳಿ ಸದಸ್ಯ ಮಂಜುನಾಥ್ ಕೆಮ್ಮಾಯಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here