ಪುತ್ತೂರು: ಕುಂಬ್ರ ವರ್ತಕರ ಸಂಘದಲ್ಲಿ ಕಳೆದ 21 ವರ್ಷಗಳಿಂದ ಗೌರವ ಸಲಹೆಗಾರರಾಗಿದ್ದು ಇತ್ತೀಚಿಗೆ ನಿಧನ ಹೊಂದಿದ ಚಂದ್ರಕಾಂತ ಶಾಂತಿವನರ ಆತ್ಮಕ್ಕೆ ಚಿರಶಾಂತಿ ಕೋರಿ ಶ್ರದ್ಧಾಂಜಲಿ ಸಭೆಯು ಮಾ.5 ರಂದು ಕುಂಬ್ರ ನಿಶ್ಮಿತಾ ಕಾಂಪ್ಲೆಕ್ಸ್‌ನಲ್ಲಿ ನಡೆಯಿತು.
ಆರಂಭದಲ್ಲಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸುವ ಮೂಲಕ ಚಂದ್ರಕಾಂತ ಶಾಂತಿವನರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅಂತಿಮ ನುಡಿ ನಮನ ಸಲ್ಲಿಸಲಾಯಿತು. ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳರವರು ಮಾತನಾಡಿ, ಕಳೆದ 21 ವರ್ಷಗಳಿಂದ ಸಂಘದ ಗೌರವ ಸಲಹೆಗಾರರಾಗಿ ಸಂಘವನ್ನು ಮುನ್ನೆಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಂಘಕ್ಕೆ ಅವರ ಕೊಡುಗೆ ಅಪಾರವಾಗಿದೆ. ಒಬ್ಬ ಅತ್ಯಂತ ಒಳ್ಳೆಯ ಮನಸ್ಸಿನ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಇದು ಸಮಾಜಕ್ಕೆ ತುಂಬುಲಾರದ ನಷ್ಟವಾಗಿದೆ. ಅವರನ್ನು ಉಳಿಸಿಕೊಳ್ಳಬೇಕು ಎಂದು ನಾವೆಲ್ಲರೂ ಪ್ರಯತ್ನ ಪಟ್ಟಿದ್ದೇವೆ ಆದರೆ ದೇವರ ನಿರ್ಣಯದ ಮುಂದೆ ಯಾವುದೂ ನಡೆಯಲಿಲ್ಲ, ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ಹೇಳಿದರು.
ಸಂಘದ ಗೌರವ ಸಲಹೆಗಾರ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಮಾತನಾಡಿ, ನೇರ ನಡೆನುಡಿಯ ಮೂಲಕ ಸಂಘಕ್ಕೆ ಉತ್ತಮ ಸಲಹೆ ಮಾರ್ಗದರ್ಶನ ನೀಡುತ್ತಿದ್ದ ಚಂದ್ರಕಾಂತ್‌ರವರ ಅಗಲಿಕೆ ಸಂಘಕ್ಕೆ ದೊಡ್ಡ ನಷ್ಟವಾಗಿದೆ. ಅವರ ಆತ್ಮಕ್ಕೆ ದೇವರ ಶಾಂತಿ ನೀಡಲಿ, ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಹೇಳಿದರು. ಸದಸ್ಯ ನಿತೀಶ್ ಕುಮಾರ್ ಶಾಂತಿವನ ಮಾತನಾಡಿ, ವಿವಿಧ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಓರ್ವ ಕ್ರಿಯಾಶೀಲ ವ್ಯಕ್ತಿಯಾಗಿದ್ದ ಚಂದ್ರಕಾಂತ್‌ರವರು ಮೂರ್ತೆದಾರರ ಸೊಸೈಟಿಯ ಅಭಿವೃದ್ಧಿಯಲ್ಲೂ ಅವರ ಪಾಲು ದೊಡ್ಡದಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಹೇಳಿದರು. ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಮುಹಮ್ಮದ್ ಪಿ.ಕೆ ಕೂಡುರಸ್ತೆ ಮಾತನಾಡಿ, ಸಂಘದ ಗೌರವ ಸಲಹೆಗಾರರಾಗಿ ಸಂಘದ ಅಭಿವೃದ್ಧಿಗೆ ಉತ್ತಮ ಸಲಹೆ ನೀಡುತ್ತಿದ್ದ ಚಂದ್ರಕಾಂತ್‌ರವರು ಇಲ್ಲ ಎಂದು ಹೇಳಲು ಸಾಧ್ಯವಾಗುತ್ತಿಲ್ಲ ಅವರ ಆತ್ಮಕ್ಕೆ ದೇವರ ಚಿರಶಾಂತಿ ಕರುಣಿಸಲಿ ಎಂದು ಹೇಳಿದರು. ಸಭಿಕರ ಪರವಾಗಿ ಸ್ಪಂದನಾ ಸೇವಾ ಬಳಗದ ಅಧ್ಯಕ್ಷ ರತನ್ ರೈ ಕುಂಬ್ರ ಮಾತನಾಡಿ, ಚಂದ್ರಕಾಂತ್‌ರವರನ್ನು ಉಳಿಸಿಕೊಳ್ಳಬೇಕು ಎಂದು ವರ್ತಕರ ಸಂಘ ಹಾಗೇ ಸ್ಪಂದನಾ ಸೇವಾ ಬಳಗ ಹಾಗೂ ಪ್ರತಿಯೊಬ್ಬರು ಆರ್ಥಿಕ ಸಹಾಯ ನೀಡುವ ಮೂಲಕ ಶ್ರಮ ಪಟ್ಟಿದ್ದಾರೆ. ಆದರೆ ಭಗವಂತ ಕೊಟ್ಟ ಆಯುಷ್ಯದ ಮುಂದೆ ಯಾರ ಪ್ರಾರ್ಥನೆಯು ನಡೆಯಲಿಲ್ಲ. ಒಬ್ಬ ಸಜ್ಜನ ವ್ಯಕ್ತಿಯನ್ನು ಕಳೆದುಕೊಂಡ ನೋವು ಇದೆ. ಅವರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ ಎಂದು ಹೇಳಿದರು. ವರ್ತಕರ ಸಂಘದ ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ ಮಾತನಾಡಿ, ಒಬ್ಬ ಸಜ್ಜನ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಸಂಘದ ಅಭಿವೃದ್ಧಿಯಲ್ಲಿ ಅವರ ಸಲಹೆ ಅತ್ಯಮೂಲ್ಯವಾಗಿತ್ತು. ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದರು.
ಸಂಘದ ಮಾಜಿ ಅಧ್ಯಕ್ಷ ಸುಂದರ ರೈ ಮಂದಾರ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳೊಂದಿಗೆ ಚಂದ್ರಕಾಂತ್ ಶಾಂತಿವನರವರ ಬಗ್ಗೆ ನುಡಿನಮನ ಸಲ್ಲಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಭವ್ಯ ರೈ ವಂದಿಸಿದರು. ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.