ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ ಮಂಗಳೂರು ಮತ್ತು ಪುತ್ತೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಪುತ್ತೂರು ಇದರ ವತಿಯಿಂದ ಜಿಲ್ಲಾ ಮಟ್ಟದ ವಿಶ್ವ ಮಹಿಳಾ ದಿನಾಚರಣೆಯು ಮಾ.8ರಂದು ಪುತ್ತೂರಿನಲ್ಲಿ ನಡೆಯಲಿದೆ.
ಮಹಿಳೆಯರೇ ವಿವಿಧ ವಾಹನ ಚಲಾಯಿಸುವ ಮೂಲಕ ವಾಹನ ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಮಹಿಳಾ ಸಾಧಕಿಯರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ ಇದರ ಗೌರವಾಧ್ಯಕ್ಷೆ ಚಂಚಲ ತೇಜೋಮಯ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ 37 ವರ್ಷಗಳ ಇತಿಹಾಸ ಇರುವ ಮಹಿಳಾ ಒಕ್ಕೂಟವು ಎಲ್ಲಾ ವರ್ಗದ ಮಹಿಳೆಯರ ಜಾತಿ, ಮತ ಪಕ್ಷ ರಹಿತವಾಗಿ ಎಲ್ಲರನ್ನು ಭಾವೈಕ್ಯತೆಯಿಂದ ಒಗ್ಗೂಡಿಸಿ ಸಮಗ್ರ ಅಭಿವೃದ್ಧಿಗಾಗಿ ಕಾರ್ಯಚಟುವಟಿಕೆಗಳನ್ನು ಮಾಡಿಕೊಂಡು ಬಂದಿದೆ. ಜಿಲ್ಲಾ ಮಟ್ಟದ ಮಹಿಳಾ ದಿನಾಚರಣೆಯು ಈ ಹಿಂದೆ ಮಂಗಳೂರಿನಲ್ಲಿ ನಡೆದಿತ್ತು. ಈ ವರ್ಷ ಪುತ್ತೂರಿನಲ್ಲಿ ಮಾಡಲಿದ್ದೇವೆ. ಮಹಿಳೆಯರ ಆತ್ಮ ವಿಶ್ವಾಸ ತುಂಬವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಾ.8ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗಂಟೆ 9ಕ್ಕೆ ದರ್ಬೆ ಪ್ರಶಾಂತ್ ಮಹಲ್ ಬಳಿಯ ಮೈದಾನದಿಂದ ಮಹಿಳಾ ವಾಹನ ಜಾಥ ನಡೆಯಲಿದೆ. ಇದರಲ್ಲಿ ಶ್ರೇಷ್ಠ ತಂಡಕ್ಕೆ ಬಹುಮಾನ ನೀಡಲಾಗುವುದು. ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಎಸ್.ಐ ಸವಿತಾ ಅವರು ಜಾಥಾ ಉದ್ಘಾಟಿಸಲಿದ್ದಾರೆ.
ಗಂಟೆ 11ಕ್ಕೆ ನಟರಾಜ ವೇದಿಕೆಯಲ್ಲಿ ವಿವಿಧತೆಯಲ್ಲಿ ಏಕತೆ ಎಂಬ ಸಭಾ ಕಾರ್ಯಕ್ರಮವನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು| ಭಾಗೀರಥಿ ಮುರುಳ್ಯ ಉದ್ಘಾಟಿಸಲಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ಶಾಸಕ ಸಂಜೀವ ಮಠಂದೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಗೌರವ ಉಪಸ್ಥಿತಿಯಲ್ಲಿರುವರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಉಪ ಪ್ರಧಾನ ವ್ಯವಸ್ಥಾಪಕಿ ಭವಾನಿ ಪ್ರಭು, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಸುಧಾ ಎಸ್ ರಾವ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.
ಜಾಥಾದಲ್ಲಿ ಬಹುಮಾನ, ಸಾಧಕರಿಗೆ ಸನ್ಮಾನ:
ವಿವಿಧತೆಯಲ್ಲಿ ಏಕತೆ ತೋರುವ ಮಹಿಳಾ ಜಾಥಾದಲ್ಲಿ ಶ್ರೇಷ್ಠ ಮೂರು ತಂಡಕ್ಕೆ ನಗದು ಬಹುಮಾನ ನೀಡಲಾಗುವುದು. ಸಮಾರಂಭದಲ್ಲಿ 7 ಮಂದಿ ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಗುವುದು ಎಂದು ಜಿಲ್ಲಾ ಒಕ್ಕೂಟದ ಅಧ್ಯಕ್ಷೆ ಉಷಾ ನಾಯಕ್ ಅವರು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ದ.ಕ.ಜಿಲ್ಲಾ ಮಹಿಳಾ ಮಂಡಲ ಒಕ್ಕೂಟದ ಗೌರವ ಸಲಹೆಗಾರ ಪ್ರೇಮಲತಾ ಟಿ.ರಾವ್, ಪುತ್ತೂರು ಒಕ್ಕೂಟದ ಅಧ್ಯಕ್ಷೆ ಶಾಂತಿ ಹೆಗಡೆ, ಕಾರ್ಯದರ್ಶಿ ಪೂರ್ಣಿಮಾ ಶೆಟ್ಟಿ, ಜಿಲ್ಲಾ ಒಕ್ಕೂಟದ ಖಜಾಂಚಿ ರೇಖಾ ಶೆಟ್ಟಿಯವರು ಉಪಸ್ಥಿತರಿದ್ದರು.