ಕಡಬ: ಕೊಯಿಲ ಗ್ರಾಮದ ಪರಂಗಾಜೆ ಎಂಬಲ್ಲಿ ಪತ್ತೆಯಾಗಿದ್ದ ಅಕ್ರಮ ಜಾನುವಾರು ಸಾಗಾಟ ಪ್ರಕರಣದ ಆರೋಪಿ ಉಳ್ಳಾಲ ನಿವಾಸಿ ಹನೀಫ್ ಎಂಬಾತ 47 ದಿನಗಳ ಬಳಿಕ ಇದೀಗ ಕಡಬ ಠಾಣೆಗೆ ಹಾಜರಾಗಿದ್ದಾನೆ ಎಂದು ತಿಳಿದು ಬಂದಿದೆ.
ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ಜ.14 ರಂದು ಕಡಬ ಪೊಲೀಸರು ತಡೆದು ಅದರಲ್ಲಿದ್ದ ಗೋವುಗಳನ್ನು ರಕ್ಷಿಸಿದ್ದರು. ಬಳಿಕ ಐದು ದನಗಳು, ಹಿಂಸಾತ್ಮಕವಾಗಿ ಕಟ್ಟಿ ಹಾಕಿದ್ದ ಪರಿಣಾಮ ಅಸ್ವಸ್ಥಗೊಂಡು ಮೃತಪಟ್ಟಿದ್ದವು. ಈ ಬೆನ್ನಲ್ಲೇ, ಹಿಂದೂ ಪರ ಸಂಘಟನೆಗಳು ಅಕ್ರಮ ಜಾನುವಾರು ಸಾಗಾಟದ ವಿರುದ್ದ ಪ್ರತಿಭಟನೆ ಮಾಡಿ ಆರೋಪಿಯ ಪತ್ತೆಗೆ ಆಗ್ರಹಿಸಿದ್ದರು, ಆದರೂ ಆರೋಪಿಯ ಬಂಧನವಾಗಲಿಲ್ಲ. ಇದೀಗ ಈ ಪ್ರಕರಣದ ಪ್ರಮುಖ ಆರೋಪಿ ಠಾಣೆಗೆ ಶರಣಾಗಿದ್ದಾನೆ.
ಈತನ ಜೊತೆಗೆ, ಬಾಡಿಗೆಗಾಗಿ ವಾಹನ ನೀಡಿದಾತನೂ ಆಗಮಿಸಿದ್ದು ಹಲವು ಮಾಹಿತಿಗಳನ್ನು ಪೊಲೀಸರು ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ. ಬಂಧನದ ಭೀತಿಯಲ್ಲಿದ್ದ ಆರೋಪಿ ಮೊದಲು ಸ್ಥಳೀಯ ಕೆಲವರ ನೆರವು ಪಡೆದು ಘಟನಾ ಸ್ಥಳದಿಂದ ಪರಾರಿಯಾಗಿದ್ದ. ಬಂಧಿಸಲೆಂದು ಪೊಲೀಸರು ಉಳ್ಳಾಲಕ್ಕೆ ತೆರಳಿದ್ದರೂ ಅಲ್ಲಿಂದಲೂ ಪರಾರಿಯಾಗಿದ್ದ. ಅಕ್ರಮ ದನ ಸಾಗಾಟದ ವಾಹನವನ್ನು ಕೊಯಿಲ ಬಳಿಯ ಕುದುರುಲು ಎಂಬಲ್ಲಿ ಪೊಲೀಸರು ಮೊದಲು ಪತ್ತೆ ಹಚ್ಚಿದ್ದರು. ಬಳಿಕ ಸಂಕೇಶ ಹಾಲು ಉತ್ಪಾದಕರ ಸಹಕಾರ ಸಂಘದ ಬಳಿ ಮಹಜರು ನಡೆಸಲಾಗಿತ್ತು ಠಾಣೆಯಲ್ಲಿ ದಾಖಲಾದ ಎಫ್.ಐ.ಆರ್ ನಲ್ಲಿ ‘ಪರಂಗಾಜೆ’ ಎಂಬ ಹೆಸರು ಉಲ್ಲೇಖಗೊಂಡಿದ್ದ ಕಾರಣ ಸ್ಥಳೀಯರೊಳಗೆ ಚರ್ಚೆಗೆ ಕಾರಣವಾಗಿತ್ತು.