ಪುತ್ತೂರಿಗೆ ಸರ್ಕಾರಿ ಮೆಡಿಕಲ್ ಕಾಲೇಜು-ಬಹುಕಾಲದ ಬೇಡಿಕೆಗೆ ಸಿಎಂ ಅಸ್ತು

0

ಪುತ್ತೂರು: ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಾ.7ರಂದು ರಾಜ್ಯ ಬಜೆಟ್ ಮಂಡನೆಯಲ್ಲಿ ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದಾರೆ.

ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಈಗಿರುವ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆಯನ್ನು ಉನ್ನತೀಕರಿಸಿ ಪ್ರಸಕ್ತ ವರ್ಷದಲ್ಲಿ ಕ್ರಮ ವಹಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ ನಲ್ಲಿ ತಿಳಿಸಿದ್ದಾರೆ.

ಪುತ್ತೂರಿಗೆ ಮೆಡಿಕಲ್ ಕಾಲೇಜು ಕುರಿತ ಹಲವು ವರ್ಷಗಳ ಪುತ್ತೂರಿನ ಜನತೆಯ ಕನಸು ಈ ಬಾರಿ ನನಸಾಗಲಿದೆ. ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ನಿಟ್ಟಿನಲ್ಲಿ ಕಳೆದ ಏಳೆಂಟು ವರ್ಷಗಳಿಂದ ನಡೆಯುತ್ತಿರುವ ಹೋರಾಟ ಈ ಮೂಲಕ ತಾರ್ಕಿಕ ಅಂತ್ಯ ಕಂಡಿದೆ.


2024ರ ಬಜೆಟ್‌ನಲ್ಲಿಯೇ ಪುತ್ತೂರಿಗೆ ಮೆಡಿಕಲ್ ಕಾಲೇಜು ಘೋಷಣೆಯಾಗಲಿದೆ ಎಂದು ಹೇಳಲಾಗುತ್ತಿತ್ತು.ಆದರೆ ಅದು ಬೇಡಿಕೆಯಾಗಿಯೇ ಉಳಿದಿತ್ತು. ಮೆಡಿಕಲ್ ಕಾಲೇಜು ಮಂಜೂರಾತಿಗಾಗಿ ಆರಂಭದಿಂದಲೇ ಸರಕಾರದ ಮೇಲೆ ಒತ್ತಡ ಹೇರಿದ್ದ ಶಾಸಕ ಅಶೋಕ್ ಕುಮಾರ್ ರೈ ಶ್ರಮ ಈಗ ಫಲ ಕೊಟ್ಟಿದೆ.

ದಕ್ಷಿಣ ಕನ್ನಡದಲ್ಲಿ ಈಗಾಗಲೇ 8 ಮೆಡಿಕಲ್ ಕಾಲೇಜುಗಳ ಪಟ್ಟಿಗೆ ಇನ್ನೊಂದು ಮೆಡಿಕಲ್ ಕಾಲೇಜು ಸೇರ್ಪಡೆಗೊಳ್ಳಲಿದೆ.


ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ:
ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರಾತಿಗಾಗಿ ಹಿಂದಿನಿಂದಲೇ ಪ್ರಯತ್ನ ಮುಂದುವರಿದಿದೆ.ಶಕುಂತಳಾ ಶೆಟ್ಟಿ, ಸಂಜೀವ ಮಠಂದೂರು ಅವರು ಶಾಸಕರಾಗಿದ್ದ ಅವಧಿಯಲ್ಲಿಯೂ ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿತ್ತು.ಅಶೋಕ್ ಕುಮಾರ್ ರೈ ಅವರು ಶಾಸಕರಾಗಿ ಚುನಾಯಿತರಾದ ಬಳಿಕ ಮೆಡಿಕಲ್ ಕಾಲೇಜು ಸ್ಥಾಪನೆ ಕೂಗು ಜೋರಾಗಿ ಕೇಳಿ ಬಂದಿತ್ತು.ಅವರು ಶಾಸಕರಾದ ಆರಂಭದಿಂದಲೇ ಈ ನಿಟ್ಟಿನಲ್ಲಿ ಸರಕಾರದ ಮೇಲೆ ನಿರಂತರ ಒತ್ತಡ ಹೇರುತ್ತಾ ಬಂದಿದ್ದು, ಮಾತ್ರವಲ್ಲದೆ ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿಯೇ ತೀರುತ್ತೇನೆ ಎಂದು ಘಂಟಾಘೋಷಣೆ ಮಾಡಿದ್ದರು.ಮೆಡಿಕಲ್ ಕಾಲೇಜಿಗಾಗಿ ಪುತ್ತೂರಿನಲ್ಲಿ ಹೋರಾಟ ಸಮಿತಿಯೊಂದು ಅಸ್ತಿತ್ವಕ್ಕೂ ಬಂದಿತ್ತು. ಮೆಡಿಕಲ್ ಕಾಲೇಜು ಸ್ಥಾಪನೆ ಕುರಿತ ಶಾಸಕರ ಕೆಲಸ ಕಾರ್ಯಗಳಿಗೆ ಪೂರಕವಾಗಿ ಈ ಸಮಿತಿ ಬೆಂಬಲ ನೀಡುತ್ತಿದೆ.ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಹಬ್ ಆಗಿ ಬೆಳೆದಿರುವ ದ.ಕ.ದಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಇಲ್ಲ.ಎಲ್ಲವೂ ಖಾಸಗಿ ಒಡೆತನದಲ್ಲಿದೆ.ಹೀಗಾಗಿ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ನೀಡಬೇಕೆಂದು ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಪ್ರತಿಪಾದಿಸುತ್ತಲೇ ಬಂದಿತ್ತು.ಪುತ್ತೂರಿನಲ್ಲಿ 40 ಎಕರೆ ಜಾಗವನ್ನು ಸರಕಾರಿ ಮೆಡಿಕಲ್ ಕಾಲೇಜಿಗಾಗಿಯೇ ಮೀಸಲಿರಿಸಲಾಗಿದೆ.


ಬಜೆಟ್ ಮೇಲೆ ಒತ್ತಡ:
ಕಳೆದ ವರ್ಷದ ಬಜೆಟ್‌ನಲ್ಲಿಯೇ ಮೆಡಿಕಲ್ ಕಾಲೇಜು ಘೋಷಣೆಗೆ ಒತ್ತಡ ಹಾಕಿದ್ದ ಶಾಸಕ ಅಶೋಕ್ ಕುಮಾರ್ ರೈ ಅವರು, ಅದು ಈಡೇರದಿದ್ದಾಗ 2025ರ ಬಜೆಟ್‌ನಲ್ಲಿ ಘೋಷಣೆ ಮಾಡಲೇಬೇಕು ಎಂದು ಸಿಎಂ, ಡಿಸಿಎಂ, ವೈದ್ಯಕೀಯ ಶಿಕ್ಷಣ, ಆರೋಗ್ಯ ಸಚಿವರ ಸಹಿತ ಸರಕಾರದ ಮೇಲೆ ಒತ್ತಡ ಹಾಕುತ್ತಲೇ ಬಂದಿದ್ದರು.ಮುಖ್ಯಮಂತ್ರಿಗಳನ್ನು ಹಲವು ಬಾರಿ ಖುದ್ದು ಭೇಟಿ ಮಾಡಿ ಮನವಿ ಮಾಡಿದ್ದರು.ಇತ್ತೀಚೆಗೆ ಸಿಎಂ ಸಿದ್ಧರಾಮಯ್ಯ ಮಂಗಳೂರಿಗೆ ಬಂದಿದ್ದಾಗಲೂ ಅವರ ಜತೆ ಖಾಸಗಿಯಾಗಿ 10 ನಿಮಿಷ ಮಾತನಾಡಿದ್ದ ಶಾಸಕ ರೈ, ಮೆಡಿಕಲ್ ಕಾಲೇಜು ಕುರಿತು ಬೇಡಿಕೆಯನ್ನು ಮುಂದಿರಿಸಿದ್ದರು.ಈ ಸಂದರ್ಭ ‘ಆಯ್ತು,ನೋಡೋಣ’ ಎಂದು ಸಿಎಂ ಹೇಳಿರುವುದು ಮೆಡಿಕಲ್ ಕಾಲೇಜು ಕುರಿತ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿತ್ತು.ಬಜೆಟ್ ಅಧಿವೇಶನದ ಮೊದಲು ಶಾಸಕ ರೈ ಮತ್ತೊಮ್ಮೆ ಸಿಎಂ ಅವರನ್ನು ಭೇಟಿಯಾಗಿ ಮೆಡಿಕಲ್ ಕಾಲೇಜು ಕುರಿತ ಬೇಡಿಕೆಯನ್ನು ನೆನಪಿಸಿದ್ದಾರೆ.ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಲಾಗಿದೆ.

ಸಿಎಂ ಅಭಿನಂದಿಸಲು ಕಾಂಗ್ರೆಸ್ ಕಾರ‍್ಯಕರ್ತರು ಬೆಂಗಳೂರಿಗೆ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾ.7ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಪುತ್ತೂರಿಗೆ ಮೆಡಿಕಲ್ ಕಾಲೇಜು ಘೋಷಣೆ ಮಾಡುವುದು ಬಹುತೇಕ ಖಚಿತವಾಗಿದ್ದ ಕಾರಣ ಪುತ್ತೂರು ಬ್ಲಾಕ್ ಕಾಂಗ್ರೆಸ್‌ನಿಂದ ಮುಖ್ಯ ಮಂತ್ರಿಯವರನ್ನು ಸನ್ಮಾನಿಸಲು ಸಿದ್ಧತೆ ಮಾಡಿಕೊಂಡಿದ್ದು ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರು ತೆರಳಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here