ಕಾವು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು, ಸಹಕಾರ ಇಲಾಖೆ ದ.ಕ ಜಿಲ್ಲೆ, ಇವರ ಸಹಕಾರದೊಂದಿಗೆ ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಲಿ. ಮಂಗಳೂರು ಇವರ ನೇತೃತ್ವದಲ್ಲಿ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಪುತ್ತೂರು ಮತ್ತು ಕಡಬ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೂತನವಾಗಿ ಆಯ್ಕೆಯಾದ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮವು ಮಾ.8ರಂದು ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶಿವಸದನ ಸಭಾಂಗಣದಲ್ಲಿ ನಡೆಯಿತು.

ಸಹಕಾರಿ ಶಿಕ್ಷಣದ ಜತೆಗೆ ಅಪ್ಡೇಟ್ ತುಂಬಾ ಮುಖ್ಯ-ನನ್ಯ
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಮಾತನಾಡಿ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮವು ಹೆಚ್ಚಾಗಿ ಮಂಗಳೂರಿನಲ್ಲಿ ನಡೆಯುತ್ತಿತ್ತು. ಆದರೆ ಈ ಬಾರಿ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಯೂನಿಯನ್ನ ಜಿಲ್ಲಾಧ್ಯಕ್ಷರಾದ ಬಳಿಕ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಹಳ್ಳಿಗೆ ತರುವ ಮೂಲಕ ಈ ಭಾಗದ ಪುತ್ತೂರು-ಕಡಬ ತಾಲೂಕಿನ ಸಹಕಾರ ಸಂಘದ ನಿರ್ದೇಶಕರುಗಳಿಗೆ, ಸಿಬ್ಬಂದಿಗಳಿಗೆ ಹೆಚ್ಚಿನ ಅನುಕೂಲವಾಗಿದೆ. ಪ್ರಮುಖವಾಗಿ ಸಹಕಾರಿ ಕ್ಷೇತ್ರದಲ್ಲಿ ಎಷ್ಟೇ ವರ್ಷದ ಅನುಭವ ಇದ್ದರೂ ಕೂಡ ನಾವು ಮತ್ತೆ ಮತ್ತೆ ಅಪ್ಡೇಟ್ ಆಗಬೇಕಾಗುತ್ತದೆ. ಯಾಕೆಂದರೆ ಸಹಕಾರ ಕ್ಷೇತ್ರದಲ್ಲಿ ಕಾನೂನಿನ ಬದಲಾವಣೆ, ವ್ಯವಸ್ಥೆಯ ಬದಲಾವಣೆ, ಹೊಸ ಹೊಸ ಸುತ್ತೋಲೆಗಳು, ನಿಯಮಗಳು ಬರುತ್ತಲೇ ಇರುತ್ತದೆ, ಆ ನಿಟ್ಟಿನಲ್ಲಿ ಇಂತಹ ತರಬೇತಿ ಕಾರ್ಯಕ್ರಮದ ಮೂಲಕ ಸಹಕಾರಿ ಶಿಕ್ಷಣದ ಜತೆಗೆ ನಾವು ಮತ್ತಷ್ಟು ಅಪ್ಡೇಟ್ ಆಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಹಕಾರಿ ಸಂಘಗಳನ್ನು ಬಲಪಡಿಸುವುದೇ ತರಬೇತಿಯ ಮೂಲ ಉದ್ದೇಶ-ಶಶಿಕುಮಾರ ರೈ ಬಾಲ್ಯೊಟ್ಟು
ಸಭಾಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ನ ಅಧ್ಯಕ್ಷ, ಎಸ್ಸಿಡಿಸಿಸಿ ಬ್ಯಾಂಕ್ನ ನಿರ್ದೇಶಕರೂ ಆಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ ಜಿಲ್ಲಾ ಸಹಕಾರ ಯೂನಿಯನ್ನ ಮೂಲಕ ಜಿಲ್ಲೆಯಲ್ಲಿ 6 ಕಡೆಗಳಲ್ಲಿ ತರಬೇತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಿದ್ದೇವೆ. ಸಹಕಾರ ಸಂಘಗಳನ್ನು, ಸಹಕಾರಿ ವ್ಯವಸ್ಥೆಯನ್ನು ಬಲಪಡಿಸುವುದೇ ತರಬೇತಿ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಸಹಕಾರ ಸಂಘದ ನಿರ್ದೇಶಕರುಗಳಿಗೆ, ಸಿಬ್ಬಂದಿಗಳಿಗೆ ಸೂಕ್ತವಾದ ತರಬೇತಿ, ಮಾರ್ಗದರ್ಶನವನ್ನು ನೀಡುವ ಮೂಲಕ ಗ್ರಾಹಕರಿಗೆ, ಸದಸ್ಯರುಗಳಿಗೆ ಉತ್ತಮ ರೀತಿಯ ಸೇವೆಯನ್ನು ನೀಡಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಮುಂದಿನ ದಿನದಲ್ಲಿ ಸಂತೋಷದಾಯದ ಸುದ್ದಿ-ಬಾಲ್ಯೊಟ್ಟು
ನಿಂತು ಹೋಗಿರುವ ಸಹಕಾರ ಪತ್ರಿಕೆಯನ್ನು ಮತ್ತೆ ಎಪ್ರಿಲ್ನಲ್ಲಿ ಆರಂಭ ಮಾಡುವುದರ ಜತೆಗೆ, ಜಿಲ್ಲಾ ಸಹಕಾರ ಯೂನಿಯನ್ಗೆ ಕಛೇರಿ ನಿರ್ಮಾಣ ಸೇರಿದಂತೆ ಮುಂದಿನ ಮಹಾಸಭೆಯಲ್ಲಿ ಯೂನಿಯನ್ನಿಂದ ಸಹಕಾರ ಸಂಘಗಳಿಗೆ ಡಿವಿಡೆಂಡ್ನ್ನು ನೀಡುವಂತಹ ಸಂತೋಷದಾಯಕ ಸುದ್ದಿ ಹೊರಬರಲಿದೆ ಎಂದು ಶಶಿಕುಮಾರ್ ರೈ ಬಾಲ್ಯೊಟ್ಟುರವರು ಹೇಳಿದರು.
ತರಬೇತಿ ಹೆಚ್ಚು ಪರಿಣಾಮಕಾರಿ-ಪ್ರವೀಣ್ ರೈ
ತಾಲೂಕು ಯೂನಿಯನ್ನ ಅಧ್ಯಕ್ಷ ಪ್ರವೀಣ್ ರೈ ಮೇನಾಲರವರು ಮಾತನಾಡಿ ಸಹಕಾರ ಸಂಘಗಳ ನಿರ್ದೇಶಕರುಗಳಿಗೆ ಮತ್ತು ಸಿಬ್ಬಂದಿಗಳಿಗೆ ಗ್ರಾಮೀಣ ಭಾಗದಲ್ಲಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದು ಹೇಳಿದರು.
ಜಿಲ್ಲಾ ಸಹಕಾರ ಯೂನಿಯನ್ನ ನಿರ್ದೇಶಕ ಮಂಜುನಾಥ ಎನ್.ಎಸ್ರವರು ಮಾತನಾಡಿ ಸಹಕಾರ ಸಂಘದ ನಿರ್ದೇಶಕರಾದವರು ಮೊದಲು ಸಂಘದ ಬೈಲಾ ಪ್ರತಿಯನ್ನು ತೆಗೆದುಕೊಂಡು ಅಧ್ಯಯನ ಮಾಡಬೇಕು ಆಗ ಮಾತ್ರ ನಾವು ಸಂಘದ ಬಗ್ಗೆ ಸಹಕಾರ ಕ್ಷೇತ್ರದ ಬಗ್ಗೆ ಕೆಲಸ ಮಾಡಲು ಸುಲಭವಾಗುತ್ತದೆ, ಇತ್ತೀಚಿನ ದಿನಗಳಲ್ಲಿ ದಿನದಿಂದ ದಿನಕ್ಕೆ ಮಾತ್ರವಲ್ಲ ಕ್ಷಣದಿಂದ ಕ್ಷಣಕ್ಕೆ ಆಕ್ಟ್ ಬದಲಾವಣೆ ಆಗುತ್ತಿರುತ್ತದೆ, ಹೊಸ ಹೊಸ ನಿಯಮಗಳು ಸೇರ್ಪಡೆಯಾಗುತ್ತಿರುತ್ತದೆ, ಹಾಗಾಗಿ ನಾವು ಬೈಲಾ, ಆಕ್ಟ್, ನಿಯಮಗಳನ್ನು ತಿಳಿದುಕೊಂಡು ಕಾನೂನಾತ್ಮಕವಾಗಿಯೇ ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡಬೇಕಾಗುತ್ತದೆ ಹಾಗಾಗಿ ಇಂತಹ ತರಬೇತಿ ಕಾರ್ಯಕ್ರಮಗಳು ತುಂಬಾ ಅವಶ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಸಹಕಾರ ಯೂನಿಯನ್ನ ನಿರ್ದೇಶಕ ಸಂಜೀವ ಪೂಜಾರಿ, ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಮಂಜುನಾಥ ರೈ ಸಾಂತ್ಯರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತರಬೇತಿ:
ಸಹಕಾರ ಕಾಯ್ದೆ ಸ್ವರೂಪ, ಆಡಳಿತ ಮಂಡಳಿ ಸದಸ್ಯರ ಹಕ್ಕು ಮತ್ತು ಜವಾಬ್ದಾರಿ ವಿಷಯದಲ್ಲಿ ದ.ಕ ಜಿಲ್ಲೆ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿಯ ಅಧೀಕ್ಷಕ ಎನ್.ಜೆ ಗೋಪಾಲ್ರವರು, ಸಿಆರ್ಆರ್, ಎಸ್ಎಲ್ಆರ್, ಸಿಆರ್ಎಆರ್, ಎನ್ಪಿಎ, ಐಎಂಬಿಪಿ, ಪಿಎಲ್ಗಳ ವಿಷಯದಲ್ಲಿ ಎಸ್ಸಿಡಿಸಿಸಿ ಬ್ಯಾಂಕ್ನ ನಿವೃತ್ತ ಸಿಇಓ ವಿಶ್ವನಾಥ ನಾಯರ್ರವರು ತರಬೇತಿ ನೀಡಿದರು.
ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿ ಅಣ್ಣು ಪ್ರಾರ್ಥಿಸಿದರು. ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ಪಿ.ಜಿಯವರು ಸ್ವಾಗತಿಸಿ, ಜಿಲ್ಲಾ ಸಹಕಾರ ಯೂನಿಯನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿ ಹಿರೇಮಠರವರು ವಂದಿಸಿದರು. ಕಾವು ಸಹಕಾರ ಸಂಘದ ಸಿಬ್ಬಂದಿ ಸುನೀಲ್ ನಿಧಿಮುಂಡ ಕಾರ್ಯಕ್ರಮ ನಿರ್ವಹಿಸಿದರು.
ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶ್ ಕಲ್ಪುರೆ, ಉಪ್ಪಿನಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುನೀಲ್ ದಡ್ಡು, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಮ್ಮದ್ ಆಲಿ, ಲ್ಯಾಂಪ್ಸ್ ಅಧ್ಯಕ್ಷ ಪೂವಪ್ಪ ನಾಯ್ಕ, ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೃಷ್ಣಪ್ಪ ದೇವಾಡಿಗ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಿಶೇಷಾಧಿಕಾರಿ ಶರತ್ ಡಿ, ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸತೀಶ್ ಗೌಡ, ಪುತ್ತೂರು ಮತ್ತು ಕಡಬ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ಸಿಬ್ಬಂದಿಗಳು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬೆಳಿಗ್ಗೆ ಉಪಾಹಾರ ವ, ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.