ಕಂಬಳದೊಂದಿಗೆ ಸಸ್ಯ ಮೇಳ, ಆಹಾರ ಮೇಳ, ಯಂತ್ರೋಪಕರಣಗಳ ಮೇಳ ಹಾಗೂ ನದಿಯ ಹಿನ್ನೀರಿನಲ್ಲಿ ಬೋಟಿಂಗ್ ವ್ಯವಸ್ಥೆ- ಶಾಸಕ ಅಶೋಕ್ ರೈ
ಉಪ್ಪಿನಂಗಡಿ: ಈ ಬಾರಿಯೂ ಉಪ್ಪಿನಂಗಡಿಯ ವಿಜಯ- ವಿಕ್ರಮ ಜೋಡುಕರೆ ಕಂಬಳವನ್ನು ಉಬಾರ್ ಕಂಬಳೋತ್ಸವನ್ನಾಗಿ ವಿಜೃಂಭಣೆಯಿಂದ ಆಚರಿಸಲು ಉದ್ದೇಶಿಸಿದ್ದು, ಮಾ.22ರಂದು ನಡೆಯುವ ಕಂಬಳಕ್ಕಾಗಿ ಭರದ ಸಿದ್ಧತೆಗಳು ನಡೆಯುತ್ತಿವೆ ಎಂದು ಶಾಸಕ, ಉಪ್ಪಿನಂಗಡಿ ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ತಿಳಿಸಿದರು.
ಇಲ್ಲಿನ ಹಳೆಗೇಟಿನ ದಡ್ಡು ಎಂಬಲ್ಲಿರುವ ನೇತ್ರಾವತಿ ನದಿ ಕಿನಾರೆಯಲ್ಲಿರುವ ಕಂಬಳದ ಜೋಡುಕರೆಯ ಬಳಿ ಮಾ.9ರಂದು ನಡೆದ ಸಮಿತಿಯ ಸಭೆಯಲ್ಲಿ ಕಂಬಳೋತ್ಸವದ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಂಬಳಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಕಂಬಳದ ಆಮಂತ್ರಣ ಪತ್ರವನ್ನು ಎಲ್ಲರಿಗೂ ತಲುಪಿಸುವ ಕಾರ್ಯವನ್ನು ಸಮಿತಿಯವರು ಮಾಡಬೇಕು. ಮೂರು ದಿನಕ್ಕೊಮ್ಮೆ ಸಮಿತಿಯ ಸದಸ್ಯರು ಸಭೆ ನಡೆಸಿ ಕೈಗೊಂಡ ಹಾಗೂ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಚರ್ಚಿಸಬೇಕು. ಈ ಬಾರಿಯೂ ಕಂಬಳದೊಂದಿಗೆ ಸಸ್ಯ ಮೇಳ, ಆಹಾರ ಮೇಳ, ಯಂತ್ರೋಪಕರಣಗಳ ಮೇಳ ಹಾಗೂ ನೇತ್ರಾವತಿ ನದಿಯ ಹಿನ್ನೀರಿನಲ್ಲಿ ಬೋಟಿಂಗ್ ವ್ಯವಸ್ಥೆಗಳನ್ನು ಜೋಡಣೆ ಮಾಡಲಾಗುವುದು. ಸರ್ವ ಧರ್ಮೀಯರು ಭಾಗವಹಿಸುವ, ಎಲ್ಲಾ ವಯೋಮಾನದವರು ಮನೋರಂಜನೆ ಪಡೆಯುವ ಕಂಬಳವಾಗಿ ವಿಜೃಂಭಣೆಯಿಂದ ನಡೆಸಬೇಕು ಎಂದರು.
ಸಭೆಯಲ್ಲಿ ಪುತ್ತೂರು ಕೋಟಿ- ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಉಪ್ಪಿನಂಗಡಿ ವಿಜಯ- ವಿಕ್ರಮ ಕಂಬಳ ಸಮಿತಿಯ ಗೌರವಾಧ್ಯಕ್ಷ ನಂದಾವರ ಉಮೇಶ ಶೆಣೈ, ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಉಪಾಧ್ಯಕ್ಷರಾದ ರಾಮಚಂದ್ರ ಮಣಿಯಾಣಿ, ಮುರಳೀಧರ ರೈ ಮಠಂತಬೆಟ್ಟು, ಉಮಾನಾಥ ಶೆಟ್ಟಿ ಪೆರ್ನೆ, ವಾರಿಸೇನ ಜೈನ್, ಮೋನಪ್ಪ ಗೌಡ ಪಮ್ಮನಮಜಲು, ಗೌರವ ಸಲಹೆಗಾರ ನಿರಂಜನ್ ರೈ ಮಠಂತಬೆಟ್ಟು, ಸಂಘಟನಾ ಕಾರ್ಯದರ್ಶಿ ಯೋಗೀಶ್ ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು, ಜೊತೆ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಕಂಗ್ವೆ, ಸಹ ಸಂಚಾಲಕರಾದ ಜಯಪ್ರಕಾಶ್ ಬದಿನಾರು, ರಾಜೇಶ್ ಶೆಟ್ಟಿ, ಕುಮಾರನಾಥ ಪಲ್ಲತ್ತಾರು, ಪದಾಧಿಕಾರಿಗಳಾದ ಕೃಷ್ಣಪ್ಪ, ರಾಘವೇಂದ್ರ ನಾಯಕ್ ನಟ್ಟಿಬೈಲು, ಗಣೇಶ್ ರಾಜ್, ಕಬೀರ್ ಕರ್ವೇಲು, ಅಬ್ದುಲ್ ಖಾದರ್, ಶಿವರಾಮ ಶೆಟ್ಟಿ ಗೋಳ್ತಮಜಲು, ಜಗದೀಶ್ ಪರಕಜೆ, ಸತೀಶ ಮಡಿವಾಳ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಶೌಕತ್ ಕೆಮ್ಮಾರ ಮತ್ತಿತರರು ಉಪಸ್ಥಿತರಿದ್ದರು.