ಯೋಜನೆಗಳಿಗೆ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ಸಮಿತಿ ಮಾಡುತ್ತಿದೆ-ಉಮಾನಾಥ ಶೆಟ್ಟಿ
ಪುತ್ತೂರು: ಪಂಚಗ್ಯಾರಂಟಿ ಯೋಜನೆಗಳ ನೋಂದಾವಣೆಗೆ ಬಾಕಿ ಇರುವ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ ಹಾಗೂ ಯುವನಿಧಿ ವಿಶೇಷ ನೋಂದಣಿ ಅಭಿಯಾನ ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪುತ್ತೂರು ವತಿಯಿಂದ ಪಾಣಾಜೆ, ಬೆಟ್ಟಪಾಡಿ, ನಿಡ್ಪಳ್ಳಿ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಮಾ.11ರಂದು ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು. ಪಾಣಾಜೆ, ಬೆಟ್ಟಂಪಾಡಿ ಹಾಗೂ ನಿಡ್ಪಳ್ಳಿ ಗ್ರಾಮಗಳಲ್ಲಿ ನೋಂದಾವಣೆಗೆ ಬಾಕಿ ಇರುವ ಅರ್ಜಿಗಳ ವಿಲೇವಾರಿ ನಡೆಯಿತು.
ಪಂಚ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು, ಸಿಬಂದಿಗಳು ಮಾಹಿತಿ ಕೇಂದ್ರದ ಮೂಲಕ ನೋಂದಾವಣೆ ನಡೆಸಿದರು.
ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪುತ್ತೂರು ತಾಲೂಕಿನಲ್ಲಿ ಕಳೆದ ಎರಡು ತಿಂಗಳಿನಿಂದ ಇಂತಹ ಕಾರ್ಯಕ್ರಮ ಮಾಡುತ್ತಿದ್ದೇವೆ. ಐದು ಇಲಾಖೆಗಳ ಯೋಜನೆಗಳಿಗೆ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ಮಾಡಲಾಗುತ್ತಿದೆ. ಮಹಿಳೆಯರ ಸಬಲೀಕರಣಕ್ಕೆ ಗೃಹಲಕ್ಷ್ಮೀ ಯೋಜನೆ ಕಾರಣವಾಗುತ್ತಿದೆ. ಮಹಿಳೆಯರ ಜೀವನಮಟ್ಟ ಸುಧಾರಿಸಿದೆ. ಪುತ್ತೂರು ತಾಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯಲ್ಲಿ ಸುಮಾರು 38ಸಾವಿರಕ್ಕೂ ಹೆಚ್ಚಿನ ಫಲಾನುಭವಿಗಳಿಗೆ 108 ಕೋಟಿ ರೂ. ಪಾವತಿಯಾಗಿದೆ ಎಂದರು. ಶಕ್ತಿ ಯೋಜನೆ ಕೂಡ ಮಹಿಳೆಯರಿಗೆ ಶಕ್ತಿ ನೀಡಿದೆ. ತಾಲೂಕಿನಲ್ಲಿ 1 ಕೋಟಿಗಿಂತಲೂ ಅಧಿಕ ಮಂದಿ ಈ ಯೋಜನೆಯಲ್ಲಿ ಪ್ರಯಾಣ ಮಾಡಿದ್ದಾರೆ. ಗೃಹಜ್ಯೋತಿ ಯೋಜನೆಯಲ್ಲಿ ಬಡವರು ಕೂಡ ವಿದ್ಯುತ್ ಬಳಸುವಂತಾಗಿದೆ. ಈ ಯೋಜನೆಯಲ್ಲಿ 28 ಕೋಟಿ ರೂ. ಬಳಕೆಯಾಗಿದೆ ಎಂದರು.
ಅನ್ನಭಾಗ್ಯದ ಯೋಜನೆಯಲ್ಲಿ ಒಬ್ಬ ವ್ಯಕ್ತಿಗೆ 10 ಕೆ.ಜಿ. ಅಕ್ಕಿ ನೀಡಲಾಗುತ್ತಿದೆ. ಬಡವ ಕೂಡ ಹೊಟ್ಟೆ ತುಂಬಾ ಊಟಮಾಡಬೇಕೆಂಬ ಉದ್ಧೇಶ ಸರಕಾರದ್ದಾಗಿದೆ. ಯುವಕರಿಗೆ ಕೊಟ್ಟಂತಹ ಯುವನಿಧಿ ಯೋಜನೆಯಲ್ಲಿ ಕಳೆದ ವರ್ಷ 427 ಮಂದಿ ನೋಂದಾವಣೆ ಮಾಡಿದ್ದು 372 ಅರ್ಹ ಫಲಾನುಭವಿಗಳ ಖಾತೆಗೆ ಸುಮಾರು 98 ಲಕ್ಷ ರೂ. ಪಾವತಿ ಮಾಡಲಾಗಿದೆ. ಈ ವರ್ಷ 158 ಫಲಾನುಭವಿಗಳ ನೋಂದಾವಣೆಯಾಗಿದೆ. ಇವರ ಪರಿಶೀಲನೆ ಮಾಡಿ ಪಾವತಿ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದ ಅವರು ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಸಮಿತಿ ಪ್ರಾಮಾಣಿಕ ಕೆಲಸ ಮಾಡುತ್ತಿದೆ. ಎಲ್ಲರೂ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ ಎಂದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮಾತನಾಡಿ, ಕಾಂಗ್ರೆಸ್ ಸರಕಾರ ಪಂಚಗ್ಯಾರಂಟಿ ಯೋಜನೆಯನ್ನು ರೂಪಿಸಿದೆ. ಸರಕಾರದ ಉತ್ತಮ ಯೋಜನೆಗಳನ್ನು ಅಧಿಕಾರಿಗಳ ಮೂಲಕ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ಯೋಜನೆಗಳಿಗೆ ಸಂಬಂಧಿಸಿ ಸಮಿತಿಗಳನ್ನು ಮಾಡಿ ಜನರಿಗೆ ತಲುಪಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಈ ಸಮಿತಿ ಮತ್ತು ಅಧಿಕಾರಿಗಳು ಗ್ರಾಮಮಟ್ಟಕ್ಕೆ ಹೋಗಿ ಯೋಜನೆಗಳನ್ನು ಪ್ರತಿಯೊಬ್ಬ ಫಲಾನುಭವಿಗೂ ಸಿಗುವಂತೆ ಮಾಡುತ್ತಿದ್ದಾರೆ ಇದಕ್ಕೆ ನಾಗರಿಕರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿ, ಯೋಜನೆಗಳನ್ನು ಸದುಪಯೋಗಪಡಿಸುವಂತೆ ಹೇಳಿದರು.
ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೈಮುನತ್ತುಲ್ ಮೆಹ್ರಾ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆ ಎಲ್ಲರಿಗೂ ತಲುಪಬೇಕೆಂಬ ನಿಟ್ಟಿನಲ್ಲಿ 5ನೇಯ ಶಿಬಿರ ಆಯೋಜಿಸಲಾಗಿದೆ. ಪಕ್ಷ ಭೇದವಿಲ್ಲದೆ ಮೂರು ಗ್ರಾಮಗಳ ಎಲ್ಲರಿಗೂ ಇದರ ಸೌಲಭ್ಯ ಸಿಗಬೇಕು. ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಿ ಎಂದರು.
ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟರಮಣ ಬೋರ್ಕರ್ ಮಾತನಾಡಿ, ಸರಕಾರ ಒಳ್ಳೆಯ ಉದ್ದೇಶವಿಟುಕೊಂಡು ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಆದರೆ ಆ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೆ ಸಿಗುವಲ್ಲಿ ವಿಳಂಬವಾಗುತ್ತದೆ ಎಂದರು. ಗ್ರಾಮ ಪಂಚಾಯತ್ ಮಟ್ಟದಲ್ಲಿ ಯೋಜನೆಗಳು ಸರಿಯಾಗಿ ಈಡೇರಬೇಕು. ಆದುದರಿಂದ ಸರಕಾರದ ಪಂಚಗ್ಯಾರಂಟಿ ಯೋಜನೆಗಳು ಸರಿಯಾಗಿ ಅನುಷ್ಠಾನ ಆಗಬೇಕೆಂಬ ಉದ್ಧೇಶದಿಂದ ಈ ಕಾರ್ಯಕ್ರಮ ನಡೆಸಲಾಗಿದೆ. ಗ್ರಾಮಸಭೆಗಳಲ್ಲಿ ಕೂಡ ಯೋಜನೆಯ ಅನುಷ್ಠಾನ ಸಮಿತಿಯ ಅಽಕಾರಿಗಳು ಭಾಗವಹಿಸಬೇಕು. ಸರಕಾರದ ಎಲ್ಲಾ ಕಾರ್ಯಕ್ರಮಗಳು ಅರ್ಹರಿಗೆ ತಲುಪಿದರೆ ಅದರ ಉದ್ಧೇಶ ಈಡೇರುತ್ತದೆ ಎಂದರು.

ಮೆಸ್ಕಾಂ ಕುಂಬ್ರ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಿವಶಂಕರ್ ಮಾತನಾಡಿ, ಸರಕಾರ ಮಹತ್ವಾಕಾಂಕ್ಷೆ ಯೋಜನೆಯಲ್ಲಿ ಗೃಹಜ್ಯೋತಿ ನಮ್ಮ ಇಲಾಖೆಗೆ ಸಂಬಂಽಸಿದ್ದಾಗಿದೆ. ಪುತ್ತೂರು ತಾಲೂಕಿನಲ್ಲಿ ಈವರೆಗೆ ಸುಮಾರು 59ಸಾವಿರ ಬಳಕೆದಾರರಿಗೆ ಯೋಜನೆ ಅನುಷ್ಠಾನವಾಗಿದೆ. ಗೃಹಜ್ಯೋತಿ ಯೋಜನೆಯಲ್ಲಿ ನೋಂದಾವಣೆಗೆ ಬಾಕಿ ಇರುವವರು ಇಂದು ನೋಂದಾವಣೆ ಮಾಡಿಕೊಳ್ಳಬಹುದು. ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವವರಿಗೂ ಇದರ ಪ್ರಯೋಜನ ಸಿಗುತ್ತದೆ ಎಂದರು.
ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರುಗಳಾದ ವಿಶ್ವಜಿತ್ ಪೂಜಾರಿ ಅಮ್ಮುಂಜ, ತಾರಾನಾಥ್ ನುಳಿಯಾಲು, ಅಬ್ಬು ನವಗ್ರಾಮ, ಸಂತೋಷ್ ಭಂಡಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಂದನ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿ ಸರಸ್ವತಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಅಧಿಕಾರಿ ದಯಾನಂದ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಹಾಯಕ ಸಂಚಾರ ಅಧಿಕ್ಷಕ ಈಶ್ವರ್, ಪಾಣಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂಧ್ಯಾಲಕ್ಷ್ಮಿ ಸ್ವಾಗತಿಸಿ, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಽಕಾರಿ ಸೌಮ್ಯ ವಂದಿಸಿದರು. ಮಾಹಿತಿ ಶಿಕ್ಷಣ ಸಂವಹನ ಸಂಯೋಜಕ ಭರತ್ ರಾಜ್ ಕಾರ್ಯಕ್ರಮ ನಿರೂಪಿಸಿದರು. ಸಿಬಂದಿಗಳು ಸಹಕರಿಸಿದರು.
ಮಾಹಿತಿ ಕೇಂದ್ರದ ಮೂಲಕ 98 ಅರ್ಜಿ ಸ್ವೀಕಾರ
ಪಂಚ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಇಲಾಖೆಯಿಂದ ಮಾಹಿತಿ ಕೇಂದ್ರ ತೆರೆಯಲಾಗಿದ್ದು ಇಲಾಖಾಧಿಕಾರಿಗಳು ಈ ಕೇಂದ್ರದ ಮೂಲಕ ಅರ್ಜಿ ವಿಲೇವಾರಿ ನಡೆಸಿದರು. ಪಾಣಾಜೆ, ಬೆಟ್ಟಂಪಾಡಿ ಹಾಗೂ ನಿಡ್ಪಳ್ಳಿ ಗ್ರಾಮದ ಸಾರ್ವಜನಿಕರಿಂದ ಗೃಹಲಕ್ಷ್ಮಿ ಯೋಜನೆಯಡಿ 57, ಗೃಹಜ್ಯೋತಿ 16, ಅನ್ನಭಾಗ್ಯ 12 ಹಾಗೂ ಯುವನಿಽ ಯೋಜನೆಯಲ್ಲಿ 13 ಅರ್ಜಿಗಳನ್ನು ಸ್ವೀಕರಿಸಲಾಯಿತು.