✍🏻ದಾಮೋದರ್ ದೊಂಡೋಲೆ
ಕೊಕ್ಕಡ: ಸೌತಡ್ಕ ಮಹಾಗಣಪತಿ ಕ್ಷೇತ್ರದಲ್ಲಿ ಒಂದು ಕಡೆ ಗಂಟೆ ಹಗರಣ ಸದ್ದು ಮಾಡುತ್ತಿದ್ದರೆ. ಮತ್ತೊಂದು ಕಡೆ ವ್ಯವಸ್ಥಾಪನಾ ಸಮಿತಿ ಸದಸ್ಯರ ಆರೋಪ ಪ್ರತ್ಯಾರೋಪ ಮೇಳೈಸುತ್ತಿದೆ. ಟ್ರಸ್ಟ್ ಕಾರ್ಯ ನಿರ್ವಹಣೆಯ ಬಗ್ಗೆ ಗೊಂದಲಗಳು ಏರ್ಪಟ್ಟಿರುವ ಮಧ್ಯೆ ಹೊಸ ವ್ಯವಸ್ಥಾಪನಾ ಸಮಿತಿ ರಚನೆ, ಹೊಸ ಸದಸ್ಯರ ಸೇರ್ಪಡೆ ಗೊಂದಲ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದು ಮುಂದೇನಾಗಬಹುದು ಎಂಬ ಕುತೂಹಲಕ್ಕೆಡೆ ಮಾಡಿದೆ. ಇವೆಲ್ಲದರ ನಡುವೆ ಶ್ರೀ ಕ್ಷೇತ್ರ ಸೌತಡ್ಕದಲ್ಲಿ ದೇವರ ಕಟ್ಟೆಯ ಮೇಲೆ ನಾಗರ ಹಾವು ಬಂದಿರುವುದು ಹಲವು ರೀತಿಯ ಚರ್ಚೆಗೆ ಕಾರಣವಾಗಿದೆ.
ಕಟ್ಟೆಯೇರಿದ ನಾಗಪ್ಪ:
ಕುಕ್ಕೆ ಸುಬ್ರಹ್ಮಣ್ಯದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯರವರು ಮಾರ್ಚ್ ೯ರಂದು ಗಣಪನ ಸನ್ನಿಧಿಯಲ್ಲಿ ಮೂಡಪ್ಪ ಸೇವೆ ಸಲ್ಲಿಸುತ್ತಿದ್ದರು. ಈ ವೇಳೆ ದೇವರ ಕಟ್ಟೆಯ ಮುಂಭಾಗದ ಮೆಟ್ಟಿಲಿನಲ್ಲಿ ನಾಗರ ಹಾವು ಕಾಣಿಸಿಕೊಂಡಿದ್ದು, ಭಕ್ತರಲ್ಲಿ ಆಶ್ಚರ್ಯಮೂಡಿಸಿತ್ತು.
ವಿವಿಧ ಚರ್ಚೆ:
ಸೌತಡ್ಕ ಮಹಾಗಣಪತಿಯ ಕ್ಷೇತ್ರ ಹಲವು ವಿವಾದ, ಗೊಂದಲಗಳಿಂದ ಚರ್ಚೆಯಲ್ಲಿದೆ. ವ್ಯವಸ್ಥಾಪನಾ ಸಮಿತಿ ರಚನೆ ರಾಜಕೀಯವೂ ಭಕ್ತರ ಬೇಸರಕ್ಕೆ ಕಾರಣವಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ನಾಗರ ಹಾವು ಕಾಣಿಸಿಕೊಂಡಿರುವುದು, ವಿವಿಧ ರೀತಿಯ ಚರ್ಚೆಗೆ ಗ್ರಾಸವಾಗಿದೆ.
೩ ತಿಂಗಳಿಂದ ನಾಗರಾಜ ಓಡಾಟ:
ಸೌತಡ್ಕ ಮಹಾಗಣಪತಿ ಕ್ಷೇತ್ರದ ಆವರಣದಲ್ಲಿ ನಾಗರಾಜನ ಓಡಾಟ ಬಲು ಅಪರೂಪವಾಗಿತ್ತು. ಆದರೆ ಕಳೆದ ಎರಡು-ಮೂರು ತಿಂಗಳುಗಳಿಂದ ಕ್ಷೇತ್ರದ ಆವರಣದಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ, ಇದು ಯಾವುದರ ಸಂಕೇತ ಎಂದು ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಬಿರು ಬೇಸಿಗೆ ತಡೆಯಲಾರದೇ ನೀರನ್ನು ಬಯಸಿ ನಾಗರ ಹಾವು ಬಂದಿರಬಹುದು, ಏನಾದರೂ ತೊಂದರೆಗಳು ಉಂಟಾಗಿದೆಯೇ, ಇದೊಂದು ಧನಾತ್ಮಕ ಸೂಚನೆಯೂ ಆಗಿರಬಹುದು ಎಂಬೆಲ್ಲಾ ವಿಶ್ಲೇಷಣೆಗಳಾಗುತ್ತಿವೆ.
ಮಾಯವಾಗುವ ಸರ್ಪ:
ಸೌತಡ್ಕದ ಆವರಣದಲ್ಲಿ ಬಹುದಿನಗಳಿಂದ ನಾಗರಹಾವಿನ ಓಡಾಟ ಕಂಡು ಬಂದ ಹಿನ್ನಲೆಯಲ್ಲಿ ಎರಡರಿಂದ ಮೂರು ಬಾರಿ ಹಾವು ಹಿಡಿಯುವವರನ್ನು ಕರೆಸಲಾಯಿತು. ಅವರು ಬಂದಾಗ ಹಾವು ಕಾಣಸಿಗುವುದೇ ಇಲ್ಲ. ಅಲ್ಲದೇ, ಈಗ ಇತ್ತು ಎಂದು ಹೇಳುವವರಿಗೂ ಕೂಡ ಕಾಣಿಸದಿರುವುದು ಅಚ್ಚರಿಗೆ ಕಾರಣವಾಗಿದೆ. ಕೆಲ ಹುತ್ತದಂತಹ ಮಾಂಟೆಗಳನ್ನು ಶೋಧಿಸಿದರೂ ಕೂಡ ಹಾವಿನ ಸುಳಿವು ಕಂಡುಬಂದಿಲ್ಲ. ಇಷ್ಟೆಲ್ಲ ಆದ ಬಳಿಕ ಮತ್ತೆ ಹಾವು ದೇವರ ಕಟ್ಟೆಯೇರಿ ಸದ್ದು ಮಾಡಿದೆ. ಒಟ್ಟಿನಲ್ಲಿ ಸೌತಡ್ಕ ಕ್ಷೇತ್ರದಲ್ಲಿನ ನಾಗ ಸಂಚಾರ ಹೊಸ ಸಂಚಲನ ಹುಟ್ಟಿಸಿದೆ.
“ನಾನು ಸುಮಾರು ೨೦ ವರ್ಷಗಳಿಂದ ಇಲ್ಲಿ ಅರ್ಚಕನಾಗಿದ್ದೇನೆ. ಹಾವು ವರ್ಷದಲ್ಲಿ ಒಂದೆರಡು ಬಾರಿ ಕಾಣಿಸಿಕೊಳ್ಳುತ್ತದೆ. ಆದರೆ ಈ ಬಾರಿ ಕಳೆದ ಮೂರು ತಿಂಗಳಿನಿಂದ ಹಾವು ಕಾಣಿಸಿಕೊಳ್ಳುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಹಾವು ಹಿಡಿಯುವವರನ್ನು ಕರೆಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಹಾವು ಬರುತ್ತಿರುವ ಹಿನ್ನಲೆಯೇನು ಎನ್ನುವುದನ್ನು ತಿಳಿಯಬೇಕಾದರೆ ಹೊಸ ವ್ಯವಸ್ಥಾಪನಾ ಸಮಿತಿಯವರು ಬರಬೇಕು. ನಂತರ ತೀರ್ಮಾನ ಕೈಗೊಳ್ಳಬೇಕಾಗಿದೆ”
ಸತ್ಯಪ್ರಿಯ ಕಲ್ಲೂರಾಯ, ಪ್ರಧಾನ ಅರ್ಚಕರು, ಶ್ರೀ ಕ್ಷೇತ್ರ ಸೌತಡ್ಕ