





ಪುತ್ತೂರು: ಸ್ವಚ್ಛತೆ ಎಂಬುದು ಕೇವಲ ಭಾಷಣ, ಮಾತಿಗಷ್ಟೇ ಸೀಮಿತವಾಗಬಾರದು ಅದು ನಮ್ಮ ಕರ್ತವ್ಯದಲ್ಲೂ ಇರಬೇಕು, ಕಾಯಕದ ಪರಿಕಲ್ಪನೆಯ ಸ್ವಚ್ಛತೆ ನಮ್ಮಲ್ಲಿ ಬರಬೇಕು ಎಂಬ ನಿಟ್ಟಿನಲ್ಲಿ ಒಳಮೊಗ್ರು ಗ್ರಾಪಂ ಸ್ವಚ್ಚತೆಯ ವಿಷಯದಲ್ಲಿ ಬಹಳಷ್ಟು ಕಾಳಜಿ ವಹಿಸುತ್ತಿದ್ದು ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿರುವ ತ್ರಿವೇಣಿ ಪಲ್ಲತ್ತಾರು ಹಾಗೂ ವಾರ್ಡ್ ಸದಸ್ಯೆ ರೇಖಾ ಯತೀಶ್ರವರು ಸ್ವತಃ ತಾವೇ ಸ್ವಚ್ಚತಾ ಕೆಲಸದಲ್ಲಿ ಕೈ ಜೋಡಿಸುವ ಮೂಲಕ ಸ್ವಚ್ಚತೆಯ ಅರಿವು ಮೂಡಿಸಿದ್ದಾರೆ.



ಗ್ರಾಮದ ಕೈಕಾರದಲ್ಲಿರುವ ಸ್ವಚ್ಚ ಸಂಕೀರ್ಣದ ಹೊರ ಭಾಗದಲ್ಲಿ ರಾಶಿ ಹಾಕಲಾಗಿದ್ದ ಒಣ ಕಸವು ಇತ್ತೀಚಿಗೆ ಸುರಿದ ಮಳೆಯಿಂದಾಗಿ ಒದ್ದೆಯಾಗಿರುವುದನ್ನು ಗಮನಿಸಿದ ಅಧ್ಯಕ್ಷರು ಸ್ವಚ್ಛತಾ ಸೇನಾನಿಗಳೊಂದಿಗೆ ಮಾತುಕತೆ ನಡೆಸಿ ತಾನು ಕೈ ಜೋಡಿಸಿ ಕಸವನ್ನು ಗೋಣಿ ಚೀಲದಲ್ಲಿ ತುಂಬಿಸುವ ಕೆಲಸವನ್ನು ಮಾಡಿದ್ದಾರೆ. ಇವರೊಂದಿಗೆ ವಾರ್ಡ್ ಸದಸ್ಯೆ ರೇಖಾ ಯತೀಶ್ ಕೂಡ ಕೈ ಜೋಡಿಸಿದ್ದಾರೆ. ಮಧ್ಯಾಹ್ನದಿಂದ ಸಂಜೆ ತನಕ ಎಲ್ಲರೂ ಸೇರಿಕೊಂಡು ಘಟಕದ ಸುತ್ತ ಸಂಪೂರ್ಣ ಸ್ವಚ್ಚತೆಯನ್ನು ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.





ಸ್ವಚ್ಚತಾ ಸೇನಾನಿಗಳ ಜೊತೆ ಸ್ವತಃ ಗ್ರಾಪಂ ಅಧ್ಯಕ್ಷರೂ, ವಾರ್ಡ್ ಸದಸ್ಯೆ ಕೂಡ ಸ್ವಚ್ಚತಾ ಕಾರ್ಯ ಮಾಡಿರುವುದು ಸ್ವಚ್ಛತೆ ಎಂಬುದು ಪ್ರತಿಯೊಬ್ಬರ ಕರ್ತವ್ಯ ಎಂಬುದನ್ನು ಎತ್ತಿ ತೋರಿಸಿದೆ. ಈ ಸ್ವಚ್ಛತಾ ಕಾರ್ಯದಲ್ಲಿ ಗ್ರಾಪಂ ಸ್ವಚ್ಛತಾ ಸೇನಾನಿಗಳಾದ ಕಮಲಾಕ್ಷಿ, ಕವಿತಾ, ಕವಿತಾ ಕುಂಬ್ರ ಮತ್ತು ಎಂಬಿಕೆ ಚಂದ್ರಿಕಾ ಸಹಕರಿಸಿದ್ದರು. ಸ್ವಚ್ಚ ಸಂಕೀರ್ಣದಿಂದ ವಾರಕ್ಕೊಮ್ಮೆ ಕಸವು ಕೆದಂಬಾಡಿಯಲ್ಲಿರುವ ಎಂಆರ್ಪಿಎಲ್ ಘಟಕಕ್ಕೆ ರವಾನೆಯಾಗುತ್ತಿದೆ.










