ಮಾ.17: ನಾರಾಯಣ ಆರ್ಕೇಡ್ ಶುಭಾರಂಭ

0

ಉಪ್ಪಿನಂಗಡಿ: ಅರ್ಧ ಶತಮಾನಗಳಿಂದ ಪರಿಸರದ ನಾಲ್ಕೈದು ತಾಲೂಕುಗಳ ಜನಮಾನಸದಲ್ಲಿ ಮನೆ ಮಾತಾಗಿರುವ ಎಂ.ಎಸ್. ನಾರಾಯಣ ಜುವೆಲ್ಲರ್ಸ್ ತನ್ನ ಸ್ವರ್ಣ ಮಹೋತ್ಸವ ವರ್ಷ ಆಚರಿಸುತ್ತಿರುವ ಈ ಕಾಲಘಟ್ಟದಲ್ಲಿ ಸ್ಮರಣೀಯವಾಗಿ ಸಂಗಮ ಕ್ಷೇತ್ರವೆನಿಸಿದ ಉಪ್ಪಿನಂಗಡಿಗೆ ಸಮರ್ಪಿಸ ಬಯಸಿರುವ ಬಹು ಉಪಯೋಗಿ ವಿಶಾಲ ವಾಣಿಜ್ಯ ಸಂಕೀರ್ಣ ಮಳಿಗೆ ನಾರಾಯಣ ಆರ್ಕೇಡ್ ಇದರ ಉದ್ಘಾಟನೆಯು ಮಾರ್ಚ್ 17 ರಂದು ಸಂಜೆ 5ಕ್ಕೆ ನಡೆಯಲಿದೆ.

ರಾಮಕುಂಜ ಗ್ರಾಮದ ಕೂವೆಚ್ಚಾರು ದಿವಂಗತ ಎಂ.ಎಸ್. ನಾರಾಯಣ ರವರು 1975ರಲ್ಲಿ ಉಪ್ಪಿನಂಗಡಿಯಲ್ಲಿ ಎಂ.ಎಸ್. ನಾರಾಯಣ ಜ್ಯುವೆಲ್ಲರ್ಸ್ ಆರಂಭಿಸಿದರು. ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಕಡಬ ಹೀಗೆ ಹಲವು ತಾಲೂಕುಗಳ ನಗರ ಹಾಗೂ ಗ್ರಾಮೀಣ ಭಾಗದ ಜನರ ನಂಬಿಕಸ್ಥ ಚಿನ್ನಾಭರಣ ವ್ಯಾಪಾರದ ಕಟ್ಟೆಯಾಗಿ ಚಿಕ್ಕ ಕೊಠಡಿಯಲ್ಲಿ ವ್ಯಾಪಾರ ನಡೆಸಿದರೂ ದೊಡ್ಡ ಮಟ್ಟದ ಹೆಸರು ಸಂಪಾದಿಸಿ ಈ ಸಂಸ್ಥೆ ಎಲ್ಲರಿಗೂ ಚಿರಪರಿಚಿತವಾಯಿತು.

ತನ್ನ ಸಂಸ್ಥೆಯ ಸುವರ್ಣ ಮಹೋತ್ಸವ ವರ್ಷದ ನೆನಪಿಗಾಗಿ ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ವಿಶಾಲ ಪ್ರದರ್ಶನ ಹಾಗೂ ಮಾರಾಟ ಮಳಿಗೆ ಆರಂಭಿಸುವ ಕನಸು ಕಂಡವರು ಎಂ.ಎಸ್. ನಾರಾಯಣ ಇವರ ಮಗ ಕೃಷ್ಣ ಎಂ.ಎನ್. ತನ್ನ ತಂದೆಯ ಜೊತೆ ಸುಮಾರು 40 ವರ್ಷಗಳ ವ್ಯಾಪಾರ ಅನುಭವ ಹೊಂದಿರುವ ಇವರು ತೀರ್ಥರೂಪರ ಹೆಸರು ಜನ ಮಾನಸದಲ್ಲಿ ನೆಲೆಸುವಂತಿರಲೆಂದು ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲಿ ನಾರಾಯಣ ಆರ್ಕೆಡ್ ಎಂಬ ವಾಣಿಜ್ಯ ಸಂಕೀರ್ಣ ಸ್ಥಾಪಿಸಿದರು. ಇದು 300 ಆಸನಗಳ ಸಾಮರ್ಥ್ಯವುಳ್ಳ ಮದುವೆ ಮುಂತಾದ ಶುಭ ಸಮಾರಂಭಗಳಿಗೆ ಯೋಗ್ಯವಾದ ಹವಾನಿಯಂತ್ರಿತ ಸಭಾಗೃಹ, 14 ಹವಾನಿಯಂತ್ರಿತ ಡಬಲ್ ಬೆಡ್ ರೂಮ್ ವಸತಿಗೃಹ, ಮಹಡಿಯ ಮೇಲೆರಲು ಲಿಫ್ಟ್, ತಳ ಅಂತಸ್ತಿನಲ್ಲಿ ವಿಶಾಲ ಪಾಕಿಂಗ್ ಹಾಗೂ ಇನ್ನಿತರ ಸೌಲಭ್ಯಗಳನ್ನು ಹೊಂದಿದೆ. ಇಂತಹ ಸೌಲಭ್ಯಗಳುಳ್ಳ ವಾಣಿಜ್ಯ ಸಂಕೀರ್ಣವೊಂದು ಉಪ್ಪಿನಂಗಡಿಯಲ್ಲಿ ಪ್ರಪ್ರಥಮ ಬಾರಿಗೆ ನಿರ್ಮಾಣಗೊಂಡಿದೆ. ಈ ಮೂಲಕ ಪ್ರವಾಸೋದ್ಯಮದ ನೆಲೆಗಟ್ಟಿನಲ್ಲಿ ಅಭಿವೃದ್ಧಿಯ ಯೋಜನೆಗೆ ಒಳಗಾಗಿರುವ ಉಪ್ಪಿನಂಗಡಿಗೆ ಪೂರಕ ಸೌಲಭ್ಯವನ್ನು ಒದಗಿಸಿದಂತಾಗಿದೆ.

ಎಡನೀರು ಮಠದ ಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳಿಂದ ಲೋಕಾರ್ಪಣೆಗೊಳ್ಳಲಿರುವ ಈ ಸಂಕೀರ್ಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪುತ್ತೂರು ಜಿ.ಎಲ್. ಆಚಾರ್ಯ ಸಮೂಹ ಸಂಸ್ಥೆಗಳ ಜಿ.ಎಲ್. ಬಲರಾಮ ಆಚಾರ್ಯ ಇವರು ಸಭಾಧ್ಯಕ್ಷತೆ ವಹಿಸಲಿರುವರು. ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ ರೈ ಅವರು ಶ್ರೀ ಕೃಷ್ಣವಾಸ್ಯಂ ವಸತಿಗೃಹದ ಉದ್ಘಾಟನೆ ನಡೆಸುವರು. ಉಪ್ಪಿನಂಗಡಿಯ ಹಿರಿಯ ವೈದ್ಯರಾದ ಡಾ. ಕೆ.ಜಿ. ಭಟ್ ಅವರು ʼಸುಧರ್ಮಾಸಭಾಗೃಹಮ್ ʼ ಇದರ ಉದ್ಘಾಟನೆ ಮಾಡಲಿರುವರು. ಮುಖ್ಯ ಅಭ್ಯಾಗತರಾಗಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ, ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾೖಕ್, ಉಪ್ಪಿನಂಗಡಿ ಪೊಲೀಸ್ ವೃತ್ತ ನಿರೀಕ್ಷಕ ಬಿ.ಎಸ್. ರವಿ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಭಾಗವಹಿಸಲಿರುವರು. ಶಿಕ್ಷಣ ತಜ್ಞ, ಲೇಖಕ ಟಿ. ನಾರಾಯಣ ಭಟ್ ರಾಮಕುಂಜ ಸಭಾ ಕಾರ್ಯಕ್ರಮದ ನಿರ್ವಹಣೆ ಮಾಡಲಿರುವರು ಎಂದು ಸಂಸ್ಥೆಯ ಪಾಲುದಾರರಾದ ಸುನಂದಾ ನಾರಾಯಣ, ಕೃಷ್ಣ ಎಂ ಎನ್, ವಾಣಿ ಕೃಷ್ಣ, ಸುಧನ್ವ ಕೆ ಎಂ , ಸುಮೇಧ ಕೆ ಎಂ, ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

LEAVE A REPLY

Please enter your comment!
Please enter your name here