ಪುತ್ತೂರು: ಜಿಲ್ಲಾ ಧಾರ್ಮಿಕ ಪರಿಷತ್ ಇತ್ತೀಚೆಗೆ ಮಾಡ್ನೂರು ಗ್ರಾಮದ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರನ್ನಾಗಿ ಅರ್ಚಕರಾಗಿ ಶಿವಪ್ರಸಾದ್ ಕಡಮಣ್ಣಾಯ, ಪರಿಶಿಷ್ಟ ಜಾತಿ ಸ್ಥಾನದಲ್ಲಿ ಅಂಬೋಡಿ, ಮಹಿಳಾ ಸ್ಥಾನದಲ್ಲಿ ಸುಮಲತ, ನವೀನ ಕುಮಾರಿ, ಸಾಮಾನ್ಯ ಸ್ಥಾನದಿಂದ ರವಿರಾಜ್, ಅಮ್ಮು ರೈ, ರವೀಂದ್ರ ಪೂಜಾರಿ, ಚಂದ್ರಶೇಖರ್ ಬಲ್ಯಾಯ ಮತ್ತು ದಿವ್ಯನಾಥ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು.
ದೇವಸ್ಥಾನದ ಆಡಳಿತಾಧಿಕಾರಿ ಪುತ್ತೂರಿನ ಕಂದಾಯ ಅಧಿಕಾರಿಯಾಗಿರುವ ಗೋಪಾಲರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಎರಡನೇ ಬಾರಿಗೆ ಕಾವು ದಿವ್ಯನಾಥ ಶೆಟ್ಟಿಯವರನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ದಿವ್ಯನಾಥ ಶೆಟ್ಟರವರ ಅವಧಿಯಲ್ಲಿ ದೇವಸ್ಥಾನದ ಸುತ್ತ ಪೌಳಿಗೆ ಶೀಟಿನಮಾಡು, ದೇವಸ್ಥಾನದ ಆದಾಯದ ಉದ್ದೇಶದಿಂದ ಅಡಿಕೆ ತೋಟ ಮಾಡಿದ್ದರು. ಅಲ್ಲದೇ ದೇವರ ನಿತ್ಯ ಪೂಜೆಗೆ ಬೇಕಾದ ಹಾಲಿಗಾಗಿ ಸ್ವದೇಶಿ ತಳಿ ದನವನ್ನು ತಾನೇ ಸಾಕುತ್ತಿದ್ದರು.
ಇವರು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ್ ಶೆಟ್ಟಿಯವರ ಕಿರಿಯ ಸಹೋದರ, ಅರಿಯಡ್ಕ ಗ್ರಾಮ ಪಂಚಾಯತಿ ಸದಸ್ಯ, ಹೈನುಗಾರಿಕೆಯಲ್ಲಿ ಎರಡು ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಪಡೆದವರು, ತಾಳೆಹಟ್ಟೆ ಉದ್ಯಮಿ, ಅಲ್ಲದೇ ದನದ ಆಹಾರ ತಯಾರಿಕಾ ಘಟಕ, ಸ್ಲರ್ರೀ ಸಪ್ಲೈಯರ್ ಆಗಿ ಊರಿನ ಸರ್ವ ಜನರ ಪ್ರೀತಿಗೆ ಪಾತ್ರರಾದವರಾಗಿದ್ದಾರೆ. ಇದೇ ಸಂದರ್ಭದಲ್ಲಿ ಆಡಳಿತಾಧಿಕಾರಿ ಗೋಪಾಲರಿಗೆ ಶಾಲು ತೊಡಿಸಿ ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಲಾಯಿತು.