ಮಣಿಕ್ಕರ: ರೂ 1ಕೋಟಿ ಕಾಮಗಾರಿಗೆ ಶಿಲಾನ್ಯಾಸ, ಉದ್ಘಾಟನೆ

0

ಕಾಂಗ್ರೆಸ್ ಸರಕಾರ ಇದ್ದಾಗ ಮಾತ್ರ ಬಡವರ ಮನೆಯಲ್ಲಿ ನೆಮ್ಮದಿ: ಅಶೋಕ್ ರೈ


ಪುತ್ತೂರು: ಕೇಂದ್ರದಲ್ಲಾಗಲಿ, ರಾಜ್ಯದಲ್ಲಾಗಲಿ ಕಾಂಗ್ರೆಸ್ ಸರಕಾರ ಇದ್ದಾಗ ಮಾತ್ರ ಬಡವರ ಮನೆಯಲ್ಲಿ ನೆಮ್ಮದಿ ಕಾಣಲು ಸಾಧ್ಯವಿದ್ದು, ಕಾಂಗ್ರೆಸ್ ಎಂದೂ ಬಡವರ ಪರ ಇರುವ ಪಕ್ಷವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಅವರು ಕೊಳ್ತಿಗೆ ಗ್ರಾಮದ ಮಣಿಕ್ಕರ ವಾರ್ಡಿನಲ್ಲಿ ಸುಮಾರು 1.2 ಕೋಟಿ ರೂಗಳ ಕಾಮಗಾರಿ ಶಿಲಾನ್ಯಾಸ ಮತ್ತು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.


ಕೊಳ್ತಿಗೆ ಗ್ರಾಮದ ಮಣಿಕ್ಕರ ವಾರ್ಡಿಗೆ ಶಾಸಕರು ಸುಮಾರು 1.2 ಕೋಟಿ ರೂ ಅನುದಾನವನ್ನು ನೀಡಿದ್ದು, ಈ ಅನುದಾನದಲ್ಲಿ ಕೆಲವೊಂದು ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗೆ ಶಾಸಕರು ಶಿಲಾನ್ಯಾಸ ನೆರವೇರಿಸಿದರು. ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸರಕಾರದ ಬೆಲೆ ಏರಿಕೆಯಿಂದ ಜನತೆ ತತ್ತರಿಸಿದ್ದರೂ ಪಂಚ ಗ್ಯಾರಂಟಿಯಿಂದಾಗಿ ಕರ್ನಾಟಕದ ಜನತೆ ನೆಮ್ಮದಿಯಿಂದ ಬಾಳುವಂತಾಗಿದೆ. ಬಡಜನರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಸರಕಾರ ನೀಡಿದೆ. ಬಡವರ ಬಗ್ಗೆ ಇಷ್ಟೊಂದು ಕಾಳಜಿ ಇರುವ ಸರಕಾರ ಈ ಹಿಂದೆ ಬಂದೇ ಇಲ್ಲ ಇನ್ನು ಬರುವುದೂ ಇಲ್ಲ, ಕರ್ನಾಟಕದ ಜನತೆ ಸಿದ್ದರಾಮಯ್ಯ ಸರಕಾರವನ್ನು ಎಂದೂ ಮರೆಯಬಾರದು ಎಂದು ಹೇಳಿದರು.

ಮಣಿಕ್ಕರಕ್ಕೆ ಯಾಕೆ ಅನುದಾನ ನೀಡಿಲ್ಲ?
ಕೊಳ್ತಿಗೆ ಗ್ರಾಮದ ಮಣಿಕ್ಕರ ವಾರ್ಡನ್ನು ಕಡೆಗಣಿಸಲಾಗಿತ್ತು. ಇಲ್ಲಿ ಅಗತ್ಯವಾಗಿ ಆಗಬೇಕಾದ ಯಾವುದೇ ಅಭಿವೃದ್ದಿ ಕೆಲಸಗಳನ್ನು ಮಾಡಿಲ್ಲ. ನಾನು ಶಾಸಕನಾದ ಬಳಿಕ ಒಂದೇ ವಾರ್ಡಿಗೆ 1 ಕೋಟಿ ಚಿಲ್ಲರೆ ಅನುದಾನವನ್ನು ಇಡುವ ಮೂಲಕ ಜನತೆಯ ಬೇಡಿಕೆ ಈಡೆರಿಸಿದ್ದೇನೆ ಇದನ್ನು ಗ್ರಾಮಸ್ಥರು ಮರೆಯಬಾರದು ಎಂದು ಹೇಳಿದರು. ಇಲ್ಲಿನ ದೇವಸ್ಥಾನ, ದೈವಸ್ಥಾನಗಳು ಸರಕಾರಿ ಜಾಗದಲ್ಲಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ ಅದನ್ನು ದೇವರ ಹೆಸರಿನಲ್ಲಿ ಮಾಡಿಕೊಡುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.

ಜೈಕಾರ ಹಾಕಿದರೆ ಸಾಲದು ಮತವಾಗಿ ಪರಿವರ್ತನೆ ಆಗಬೇಕು: ಕೆ ಪಿ ಆಳ್ವ
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮಾತನಾಡಿ ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರತೀ ಗ್ರಾಮಕ್ಕೂ ಯಾವುದೇ ತಾರತಮ್ಯ ಮಾಡದೆ ಅನುದಾನವನ್ನು ನೀಡುತ್ತಿದ್ದಾರೆ. ಎಷ್ಟೋ ವರ್ಷದಿಂದ ಆಗದ ಕೆಲಸಗಳು ಈಗ ಆಗುತ್ತಿದೆ. ಅಶೋಕ್ ರೈ ಶಾಸಕರಾದ ಬಳಿಕ ಕೆಲಸಗಳು ಆಗುತ್ತಿದೆ ಎಂಬ ನಂಬಿಕೆ ಜನರಲ್ಲಿ ಮೂಡಿಬಂದಿದೆ. ಅಭಿವೃದ್ದಿ ಕೆಲಸಗಳಲ್ಲಿ ರಾಜಕೀಯ ಮಾಡದೆ ರಾಜಧರ್ಮವನ್ನು ಪಾಲನೆ ಮಾಡುತ್ತಿದ್ದು ಅವರು ಎಂದೂ ಬಿಜೆಪಿ , ಕಾಂಗ್ರೆಸ್ ರಾಜಕೀಯ ಮಾಡದ ಕಾರಣ ಎಲ್ಲರೂ ಅವರನ್ನು ಗೌರವದಿಂದ ಕಾಣುವಂತಾಗಿದೆ. ಶಾಸಕರು ಹೋದಲ್ಲೆಲ್ಲಾ ಜನರು ಅವರು ಭೇಟಿಯಾಗಲು ಬರುತ್ತಾರೆ. ಜೈಕಾರವನ್ನು ಹಾಕುತ್ತಾರೆ. ಈ ಜೈಕಾರಗಳು ಮತವಾಗಿ ಪರಿವರ್ತನೆಯಾಗುವತ್ತ ಕಾರ್ಯಕರ್ತರು ಶ್ರಮವಹಿಸಬೇಕು ಎಂದು ಹೇಳಿದರು. ಮುಂದಿನ ಗ್ರಾಪಂ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಶಾಸಕರಿಗೆ , ಸರಕಾರಕ್ಕೆ ಕೃತಜ್ಞತೆ ಸಲ್ಲಿಸುವ ಕೆಲಸವಾಗಬೇಕು ಎಂದು ಹೇಳಿದರು.


ಮಣಿಕ್ಕರದಲ್ಲಿ ಶಾಸಕರು ಭಾಷಣ ಮಾಡುತ್ತಿದ್ದಂತೆಯೇ ಅಲ್ಲಿಗೆ ಬಂದ ವೃದ್ದ ಪಕೀರ ಎಂಬವರು ‘ನನಗೆ ಕಣ್ಣು ಕಾಣುವುದಿಲ್ಲ, ನನ್ನ ಮನೆ ಬೀಳುವ ಸ್ಥಿತಿಯಲ್ಲಿತ್ತು. ಅದನ್ನು ದುರಸ್ಥಿ ಮಾಡಿ ಕೊಟ್ಟಿದ್ದಾರೆ. ಅವರನ್ನು ಕಾಣುವ ಭಾಗ್ಯ ನನಗೆ ದೇವರು ಕೊಟ್ಟಿಲ್ಲ. ಅವರ ಶಬ್ದವನ್ನು ಕೇಳಲು ಇಲ್ಲಿಗೆ ಬಂದಿದ್ದೇನೆ. ನಾನು ಕಷ್ಟದಲ್ಲಿದ್ದಾಗ ನೆರವು ನೀಡಿ ನಮ್ಮ ಜೀವ ಉಳಿಸಿದ ದೇವರು ಅಶೋಕ್ ರೈ’ ಎಂದು ಆ ವ್ಯಕ್ತಿ ಹೇಳಿದಾಗ ಎದುರಿನಲ್ಲೇ ಇದ್ದ ಶಾಸಕರು ಭಾವುಕರಾದರು. ಆ ವ್ಯಕ್ತಿಗೆ ಶಾಸಕರು ಕೆಲವು ವರ್ಷಗಳ ಹಿಂದೆ ನೆರವು ನೀಡಿದ್ದರು.


ಕಾರ್ಯಕ್ರಮದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಭಾವ ಬಾಬು ರವರು ಪಾಲ್ಗೊಂಡು ಶಾಸಕ ಅಶೋಕ್ ರೈ ಅವರಿಂದ ಗೌರವಾರ್ಪಣೆ ಸ್ವೀಕರಿಸಿದರು.

ಕಾಮಗಾರಿಗೆ ಬಿಡುಗಡೆಯಾದ ಮೊತ್ತ
ನಳೀಲು ದೇವಸ್ಥಾನ ಸಂಪರ್ಕ ರಸ್ತೆ ಕಾಂಕ್ರಿಟೀಕರಣ 20 ಲಕ್ಷ, ಸ್ವಾಮಿ ಕೊರಗಜ್ಜ ದೇವಸ್ಥಾನ ಪಾಲ್ತಾಡು 5 ಲಕ್ಷ, ಮಣಿಕ್ಕಾರ ವಿಷ್ಣುಮೂರ್ತಿ ದೇವಸ್ಥಾನದ ಸಂಪರ್ಕ ಸೇತುವೆ 40 ಲಕ್ಷ, ಮಣಿಕ್ಕಾರ ಶಾಲೆ ಮೈದಾನ ವಿಸ್ತರಣೆ 5 ಲಕ್ಷ, ಪಾಲ್ತಾಡು ಬಾಕಿಜಾಲು ನಿವೇಶನ ಸಮತಟ್ಟಿಗೆ 5 ಲಕ್ಷ, ಮಣಿಕ್ಕರ ಸ ಹಿ ಪ್ರಾ ಶಾಲಾ ಭೋಜನ ಶಾಲೆಗೆ 5 ಲಕ್ಷ, ಪೆಲ್ಲತ್ತಡ್ಕ ಸಂಪರ್ಕ ರಸ್ತೆ ಅಭಿವೃದ್ದಿ 10 ಲಕ್ಷ, ತಾರಿಪಡ್ಪು ಕಾಪಿನಕಾಡು ಸಂಪರ್ಕ ರಸ್ತೆ ಅಭಿವೃದ್ದಿ 5 ಲಕ್ಷ, ವಿಷ್ಣುನಗರ ಅಲ್ಪಸಂಖ್ಯಾತರ ಕಾಲನಿ ರಸ್ತೆ ಅಭಿವೃದ್ದಿ 5 ಲಕ್ಷ, ಮಣಿಕ್ಕಾರ ಶಾಲೆ ಮೇಲ್ಛಾವಣಿ ನಿರ್ಮಾಣ 2 ಲಕ್ಷ ಅನುದಾನವನ್ನು ಶಾಸಕರು ಒದಗಿಸಿದ್ದಾರೆ.


ಕಾರ್ಯಕ್ರಮದಲ್ಲಿ ಕೊಳ್ತಿಗೆ ಗ್ರಾಪಂ ಅಧ್ಯಕ್ಷೆ ಅಕ್ಕಮ್ಮ, ಉಪಾಧ್ಯಕ್ಷ ಪ್ರಮೋದ್ ಕೆಎಸ್, ಗ್ರಾ.ಪಂ. ಸದಸ್ಯರಾದ ಶುಭಲತಾ ಜೆ ರೈ, ಸುಂದರ ಪಿ ಬಿ, ಮಣಿಕ್ಕಾರ ಬೂತ್ ಅಧ್ಯಕ್ಷ ಜಗನ್ನಾಥ ರೈ ಮಣಿಕ್ಕಾರ, ಶ್ಯಾಂ ಸುಂದರ್ ರೈ ಕೊಳ್ತಿಗೆ, ವಲಯ ಅಧ್ಯಕ್ಷ ಪವನ್, ವಸಂತ ಕುಮಾರ್ ರೈ, ಗಫೂರ್ ಸಾಹೇಬ್, ಇಸಾಕ್ ಸಾಹೇಬ್, ಎ ಕೆ ಜಯರಾಮ ರೈ ಕೆಯ್ಯೂರು, ಗ್ರಾಪಂ ಸದಸ್ಯ ಅಬ್ದುಲ್ ಖಾದರ್ ಮೇರ್ಲ, ವೆಂಕಪ್ಪ ಗೌಡ ನಾರ್‍ಕೋಡು, ನವೀನ್ ರೈ, ಸಂತೋಷ್ ಕುಮಾರ್ ನಳೀಲು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here