ಕುಂಬ್ರ ಅರ್ಚನಾ ಕಾಂಪ್ಲೆಕ್ಸ್ ಮಾಲಕ ಬಾಬು ಪೂಜಾರಿ ಬಡಕ್ಕೋಡಿ ಹೃದಯಾಘಾತದಿಂದ ನಿಧನ

0

ಪುತ್ತೂರು: ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಮಾಜಿ ಅಧ್ಯಕ್ಷ, ಕುಂಬ್ರ ಅರ್ಚನಾ ಕಾಂಪ್ಲೆಕ್ಸ್ ಮಾಲಕ ಬಾಬು ಪೂಜಾರಿ ಬಡಕ್ಕೋಡಿ (67ವ)ರವರು ಹೃದಯಾಘಾತದಿಂದ ಮಾ.16 ರಂದು ಬೆಳಿಗ್ಗೆ ನಿಧನರಾದರು.

ಕುಂಬ್ರ ವರ್ತಕರ ಸಂಘದ ಪದಾಧಿಕಾರಿಯಾಗಿ, ಸಕ್ರೀಯ ಸದಸ್ಯರಾಗಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ, ಕುಂಬ್ರ ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾಗಿ, ಕುಂಬ್ರ ವಿಶ್ವ ಯುವಕ ಮಂಡಲದ ಸದಸ್ಯರಾಗಿ, ಒಳಮೊಗ್ರು ಗ್ರಾಮದ ಬಿಜೆಪಿ ಹಿರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದರು. ಕುಂಬ್ರದಲ್ಲಿ ಕಳೆದ 30 ವರ್ಷಗಳಿಂದಲೂ ಹೆಚ್ಚು ಕಾಲ ಕಬ್ಬಿನ ಜ್ಯೂಸ್ ಅಂಗಡಿ ಇಟ್ಟುಕೊಂಡಿದ್ದ ಇವರು “ ಜ್ಯೂಸ್ ಬಾಬಣ್ಣ” ಎಂದೇ ಚಿರಪರಿಚಿತರಾಗಿದ್ದರು. ಓರ್ವ ನಾಟಕ ಕಲಾವಿದರೂ ಆಗಿದ್ದ ಇವರು ಹಲವಾರು ನಾಟಕಗಳಲ್ಲಿ ಹಾಸ್ಯ ಕಲಾವಿದರಾಗಿ ಬಣ್ಣ ಹಚ್ಚಿದ್ದರು.


ಮೃತರು ಪತ್ನಿ ಸೀತಮ್ಮ, ಪುತ್ರರಾದ ಅಶೋಕ್ ಕುಮಾರ್, ಅನಿಲ್ ಕುಮಾರ್, ಪುತ್ರಿ ಅರ್ಚನಾ, ಸೊಸೆಯಂದಿರಾದ ಅರಿಯಡ್ಕ ಗ್ರಾಪಂ ಮಾಜಿ ಅಧ್ಯಕ್ಷೆ ಸವಿತಾ, ಶಶಿ ಹಾಗು ಅಳಿಯ ಉಮೇಶ್ ಸೇರಿದಂತೆ ಅಪಾರ ಕುಟುಂಬಸ್ಥರನ್ನು, ಬಂಧು ಬಳಗದವರನ್ನು ಅಗಲಿದ್ದಾರೆ.


ಕುಂಬ್ರ ಜಂಕ್ಷನ್‌ನಲ್ಲಿ ಅಂತಿಮ ನಮನ
ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದ ಬಾಬು ಪೂಜಾರಿಯವರ ಮೃತ ದೇಹವನ್ನು ಅವರ ನಿವಾಸಕ್ಕೆ ತರುವ ವೇಳೆ ಕುಂಬ್ರ ಜಂಕ್ಷನ್‌ನಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಹಲವು ಮಂದಿ ಆಗಮಿಸಿ ಮಾಲಾರ್ಪಣೆ ಮಾಡುವ ಮೂಲಕ ಅಂತಿಮ ನಮನ ಸಲ್ಲಿಸಿದರು. ಕುಂಬ್ರ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳರವರು ನುಡಿ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಮಹಮ್ಮದ್ ಪಿ.ಕೆ ಕೂಡುರಸ್ತೆ, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ನಿತೀಶ್ ಕುಮಾರ್ ಶಾಂತಿವನ, ಸ್ಪಂದನಾ ಸೇವಾ ಬಳಗದ ಉಪಾಧ್ಯಕ್ಷ ರಾಜೇಶ್ ರೈ ಪರ್ಪುಂಜ, ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ,ವರ್ತಕರ ಸಂಘದ ಉಪಾಧ್ಯಕ್ಷ ಸದಾಶಿವ ಕುಂಬ್ರ, ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ, ಕುಂಬ್ರ ವರ್ತಕರ ಸಂಘದ ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ, ಒಳಮೊಗ್ರು ಗ್ರಾಪಂ ಸದಸ್ಯ ಶೀನಪ್ಪ ನಾಯ್ಕ ಸೇರಿದಂತೆ ಹಲವು ಮಂದಿ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಮೃತರ ಸ್ವ ನಿವಾಸ ಒಳಮೊಗ್ರು ಗ್ರಾಮದ ಬಡಕ್ಕೋಡಿಯಲ್ಲಿ ಮೃತರ ಅಂತ್ಯ ಸಂಸ್ಕಾರ ನಡೆಯಿತು. ಈ ಸಂದರ್ಭದಲ್ಲೂ ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಹಲವು ಮಂದಿ ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

LEAVE A REPLY

Please enter your comment!
Please enter your name here