ಪುಣಚ: ಮಧೂರು ಕ್ಷೇತ್ರದ ಬ್ರಹ್ಮಕಲಶೋತ್ಸವ, ಪುಣಚ ದೇವಾಲಯದ ಜಾತ್ರೋತ್ಸವ- ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುಣಚ: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮಾ.27ರಿಂದ ಎ.6ರವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಹಾಗೂ ಪುಣಚ ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ಎ.7ರಿಂದ ಎ.11ವರೆಗೆ ನಡೆಯಲಿರುವ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಪುಣಚ ಮಹಿಷಮರ್ದಿನಿ ದೇವಸ್ಥಾನದ ಅನ್ನಪೂರ್ಣ ಸಭಾಭವನದಲ್ಲಿ ಮಾ.16ರಂದು ನಡೆಯಿತು.


ಬೆಳಿಗ್ಗೆ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಬನ್ನಿಂತಾಯರ ಪ್ರಾರ್ಥನೆಯೊಂದಿಗೆ ಪೂಜೆ ನಡೆಯಿತು. ಬಳಿಕ ಒಡಿಯೂರು ಸಂಸ್ಥಾನದ ಸಾಧ್ವಿ ಶ್ರೀಮಾತಾನಂದಮಯೀ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ನಮ್ಮ ಸನಾತನ ಧರ್ಮದ ರಕ್ಷಣೆ, ನಮ್ಮ ಧರ್ಮ ಸಂಸ್ಕೃತಿಯ ಮೇಲೆ ಶ್ರದ್ಧೆ ಇದ್ದ ಕಾರಣ ಸನಾತನ ಧರ್ಮವನ್ನು ನಾಶ ಮಾಡಲು ಸಾಧ್ಯವಿಲ್ಲ. ಸಮಾಜದಲ್ಲಿ ಆಧುನಿಕತೆಯೊಂದಿಗೆ ಆಧ್ಯಾತ್ಮದ ಸ್ಪರ್ಶತೆಯಲ್ಲಿ ಮುಂದುವರಿಯೋಣ. ಮುಂಬರುವ ಮಧೂರು ಕ್ಷೇತ್ರದ ಬ್ರಹ್ಮಕಲಶೋತ್ಸವ ಹಾಗೂ ಪುಣಚ ದೇವಿಯ ಜಾತ್ರೋತ್ಸವ ಯಶಸ್ವಿಯಾಗಿ ನಡೆಯಲಿ ಎಂದರು.


ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಎಸ್.ಆರ್. ರಂಗಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ ಮಧೂರು ಕ್ಷೇತ್ರದ ಬ್ರಹ್ಮಕಲಶೋತ್ಸವ ಹಾಗೂ ಪುಣಚ ದೇವಾಲಯದ ಜಾತ್ರೋತ್ಸವದಲ್ಲಿ ಎಲ್ಲರೂ ಪಾಲ್ಗೊಂಡು ಸಹಕಾರ ನೀಡಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಆಡಳಿತ ಸಮಿತಿ ಉಪಾಧ್ಯಕ್ಷ, ಬ್ರಹ್ಮಕಲಶೋತ್ಸವ ಪುಣಚ ಗ್ರಾಮ ಸಮಿತಿಯ ಅಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹರೀಶ್ ಪೂಜಾರಿ ಪವಿತ್ರ ದಂಪತಿಯವರು ಒಡಿಯೂರು ಸಾಧ್ವಿಯವರಿಗೆ ಫಲಪುಷ್ಪ ನೀಡಿ ಗೌರವಿಸಿದರು. ದೇವಿ ಭಜನಾ ಮಂಡಳಿಯ ಅಧ್ಯಕ್ಷ ಕಿರಣ್‌ಚಂದ್ರ ಪ್ರಾರ್ಥಿಸಿದರು. ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಶೆಟ್ಟಿ ದೇವರಗುಂಡಿ ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಪುಣಚ ಗ್ರಾಮ ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಂದ್ರ ಶೆಟ್ಟಿ ದೇವರಗುಂಡಿ ವಂದಿಸಿದರು. ಗಂಗಮ್ಮ ಪಿ. ಕಾರ್ಯಕ್ರಮ ನಿರೂಪಿಸಿದರು.

ಆರಂಭದಲ್ಲಿ ಪುಣಚ ಗ್ರಾಮದ 5 ವಾರ್ಡ್ ಸದಸ್ಯರಿಗೆ ಸಾಧ್ವಿಯವರು ಆಮಂತ್ರಣ ಪತ್ರಿಕೆ ನೀಡಿದರು. ಬಳಿಕ ಪುಣಚ ಗ್ರಾಮದ ಪ್ರತೀ ಮನೆಗಳಿಗೆ ಆಮಂತ್ರಣ ಪತ್ರಿಕೆ ತಲುಪಿಸುವ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ಆಡಳಿತ ಸಮಿತಿ ಪದಾಧಿಕಾರಿಗಳು, ಸದಸ್ಯರು, ಬ್ರಹ್ಮಕಲಶೋತ್ಸವ ಪುಣಚ ಗ್ರಾಮ ಸಮಿತಿ ಪದಾಧಿಕಾರಿಗಳು ಸದಸ್ಯರು, ಗ್ರಾಮಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here