ಪುತ್ತೂರು: ಸಮಾಜ ಕಲ್ಯಾಣ ಸಂಸ್ಥೆ ಹಾಗೂ ವಿಶ್ವ ಕನ್ನಡ ಜಾನಪದ ಪರಿಷತ್ ಬೆಂಗಳೂರು ಇದರ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ ನೀಡುವ ರಾಷ್ಟ್ರೀಯ ವೀರವನಿತೆ ಯಕ್ಷಗಾನ ನೃತ್ಯ ಕಲಾ ರತ್ನ ಪ್ರಶಸ್ತಿಗೆ ತುಳು ಹಾಗೂ ಕನ್ನಡ ಭಾಷೆಯ ಯಕ್ಷಗಾನ ಕಲಾವಿದೆ ಹಾಗೂ ತಾಳಮದ್ದಳೆಯಲ್ಲಿಯೂ ಸಾಧನೆ ಮಾಡಿದ ಬಲ್ನಾಡಿನ ಶ್ರುತಿ ವಿಸ್ಮಿತ್ ಆಯ್ಕೆಯಾಗಿದ್ದಾರೆ. ಎ.೬ರಂದು ಬೆಂಗಳೂರಿನ ಅಕ್ಕಮಹಾದೇವಿ ಸಭಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಇವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಬಲ್ನಾಡಿನ ಪದವು ವಿಸ್ಮಿತ್ ಗೌಡರವರ ಪತ್ನಿಯಾಗಿರುವ ಶ್ರುತಿಯವರು, ೫ನೇ ತರಗತಿಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ವೇಳೆಯೇ ದಕ್ಷ ಯಜ್ಞ ಪ್ರಸಂಗದಲ್ಲಿ ದಕ್ಷನಾಗಿ ಪ್ರಥಮ ವೇಷ ಹಾಕಿದವರು. ನಂತರ ಘೋರ, ಶೂರ್ಪನಖಿ, ವ್ಯಾಘ್ರಾಸುರ, ಮಹಿಷಾಸುರ, ದೇವಿ, ಕೃಷ್ಣ, ಸುದರ್ಶನ, ಚಂಡ ಮುಂಡರು, ಮದು ಕೈಟಭ, ಅಂಗದ, ದೇವೇಂದ್ರ, ಭ್ರಮರ ಶಕುಂತಳ, ಶುಭಾಣಗ, ದ್ರೌಪದಿ, ಗಿರಿಜೆ, ಹುಂಡ ಪುಂಡರು ಸೇರಿದಂತೆ ಹಲವಾರು ಪಾತ್ರಗಳಲ್ಲಿ ತನ್ನ ಕಲಾ ಪ್ರೌಡಿಮೆಯನ್ನು ತೋರಿಸಿದವರು.
ಮಹಿಳೆಯಾಗಿ ದೂತ, ವನಪಾಲಕ ಪಾತ್ರವನ್ನು ನಿರ್ವಹಿಸಿದರು. ತಾಳ ಮದ್ದಳೆಯಲ್ಲಿಯೂ ಸೈ ಎನಿಸಿಕೊಂಡಿರುವ ಇವರು ಶಾಂಭವಿ ವಿಳಾಸದಲ್ಲಿ ದೂಮ್ರಾಕ್ಷನಾಗಿ, ಸಮರ ಸೌಗಂಧಿಕದಲ್ಲಿ ವನಪಾಲಕನಾಗಿ, ಹರಿಶ್ಚಂದ್ರ-ಚಂದ್ರಮತಿಯಲ್ಲಿ ಚಂದ್ರಮತಿ ಸೇರಿದಂತೆ ಹಲವು ಪ್ರಸಂಗಳ ತಾಳೆಮದ್ದಳೆಯಲ್ಲಿಯೂ ಅರ್ಥದಾರಿಕೆ ಮಾಡಿದವರು. ಇವರ ಯಕ್ಷಗಾನ ಕ್ಷೇತ್ರದ ಸಾಧನೆಗೆ ರೋಟರಿ ಸ್ವರ್ಣ ಪ್ರಶಸ್ತಿ ನೀಡಿ ಗೌರವಿಸಿದೆ. ವಿನಾಯಕ ಫ್ರೆಂಡ್ಸ್ ಬಲ್ನಾಡು, ಕಟ್ಟೆ ಫ್ರೆಂಡ್ಸ್ ಬಲ್ನಾಡು, ಕಾಂಚನ ಕಲಾ ಪೋಷಕರು, ಸರ್ವೋದಯ ಪ್ರೌಢಶಾಲೆ ಸಹಿತ ಹಲವು ಸನ್ಮಾನ, ಪುರಸ್ಕಾರಗಳು ಲಭಿಸಿದೆ.
ಉಪ್ಪಿನಂಗಡಿ ಕಾಳಿಕಾಂಬಾ ಯಕ್ಷಗಾನ ಮಂಡಳಿಯ ಸದಸ್ಯೆಯಾಗಿ, ಯಕ್ಷನಂದನ ಕಲಾ ಸಂಘ ಗೋಕುಲ ನಗರ ಕೊಯಿಲ ಇದರ ಸಹ ತರಬೇತುದಾರರಾಗಿ, ಸಾಯಿ ಕಲಾ ಯಕ್ಷ ಬಳಗದ ಸದಸ್ಯೆಯಾಗಿರುವ ಇವರು ತೆಂಕುತಿಟ್ಟು ಹಾಗೂ ಬಡಗುತಿಟ್ಟುನಲ್ಲಿ ವೇಷಧಾರಿಯಾಗಿರುತ್ತಾರೆ.
ಉತ್ತರ ಕನ್ನಡ ಹೊನ್ನಾವರ, ಸಿದ್ದಾಪುರ, ಉಡುಪಿಯ ಅಲೆವೂರು ಮೊದಲಾದ ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿರುತ್ತಾರೆ. ಇವರು
ಪುತ್ತೂರು ಒಕ್ಕಲಿಗ ಸ್ವ ಸಹಾಯ ಸೇವಾ ಟ್ರಸ್ಟ್ನ ಪ್ರೇರಕಿಯಾಗಿರುತ್ತಾರೆ.