





ಪುತ್ತೂರು: ಮಾಣಿ – ಸಂಪಾಜೆ 06. ಹೆದ್ದಾರಿ 257 ರ ಹೈವೇ ಬದಿಯಲ್ಲಿರುವ ತಳ್ಳು ಗಾಡಿ, ಪೆಟ್ಟಿಯಂಗಡಿಯನ್ನು ಯಾವುದೇ ಕಾರಣಕ್ಕೂ ತೆರವು ಮಾಡುವುದು ಬೇಡ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಅವರು ಹೈವೇ ಮತ್ತು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದ್ದಾರೆ.


ಹೈವೇ ಬದಿಯಲ್ಲಿರುವ ಈ ಸಣ್ಣ ಅಂಗಡಿಗಳನ್ನು ತೆರವು ಮಾಡುವಂತೆ ಕೆಲವರು ಇಲಾಖೆಗೆ ಮನವಿ ಮಾಡಿದ್ದರು. ಈ ವಿಚಾರವನ್ನು ಅಧಿಕಾರಿಗಳು ಶಾಸಕರ ಗಮನಕ್ಕೆ ತಂದಿದ್ದರು. ತಾಲೂಕು ತ್ರೈಮಾಸಿಕ ಸಭೆಯ ಬಳಿಕ ನಡೆದ ಅಧಿಕಾರಿಗಳ ಸಭೆಯಲ್ಲಿ ಶಾಸಕರು ಈ ವಿಚಾರವನ್ನು ಪ್ರಸ್ತಾಪಿಸಿ ಯಾವುದೇ ಕಾರಣಕ್ಕೂ ಅಂಗಡಿಗಳನ್ನು ತೆರವು ಮಾಡುವುದು ಬೇಡ’ ಎಂದು ಸೂಚಿಸಿದ್ದಾರೆ.





ಈಗಾಗಲೇ ಪುತ್ತೂರಿನಿಂದ ಅಮ್ಮಿನಡ್ಕ ತನಕ ರಸ್ತೆ ಬದಿಯಲ್ಲಿ ಅಲ್ಲಲ್ಲಿ ಸಣ್ಣ ಪೆಟ್ಟಿಯಂಗಡಿ ಇಟ್ಟು ವ್ಯಾಪಾರ ಮಾಡುತ್ತಿದ್ದಾರೆ. ಈ ಅಂಗಡಿಯಿಂದ ಯಾವುದೇ ತೊಂದರೆಯಾಗಿಲ್ಲ, ತೊಂದರೆಯಾಗುವುದೂ ಇಲ್ಲ. ಹೆದ್ದಾರಿ ಅಗಲೀಕರಣ ಕಾಮಗಾರಿ ವೇಳೆ ಅವರೆ ಆ ಅಂಗಡಿಯನ್ನು ಸ್ವ ಇಚ್ಛೆಯಿಂದ ತೆರವು ಮಾಡುತ್ತಾರೆ.
ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ಅಡಚಣೆಯಾಗುವ ರೀತಿಯಲ್ಲಿ ಅಂಗಡಿ ಇಡದಂತೆ ಸೂಚನೆಯನ್ನು ನೀಡಲಾಗಿದೆ. ಯಾವುದೇ ಕಾರಣಕ್ಕೂ ಬಡವರ ಹೊಟ್ಟೆಯ ಮೇಲೆ ಹೊಡೆಯುವುದಕ್ಕೆ ಬಿಡುವುದಿಲ್ಲ ಎಂದು ಶಾಸಕ ಅಶೋಕ್ ರೈ ತಿಳಿಸಿದರು.
ಹೈವೇ ಬದಿಯಲ್ಲಿ ಸಣ್ಣ ಅಂಗಡಿ ಇಟ್ಟು ಸಣ್ಣಪುಟ್ಟ ವ್ಯಾಪಾರ ಮಾಡುವವರು ಮಾಡಲಿ, ಆದರೆ ಸಾರ್ವಜನಿಕರಿಗೆ ಅಥವಾ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಸಣ್ಣ ಸಣ್ಣ ಅಂಗಡಿ ಇನ್ನು ಅದರಲ್ಲಿ ಬರುವ ಲಾಭದಿಂದ ಅನೇಕ ಕುಟುಂಬಗಳು ದಿನದೂಡುತ್ತಿವೆ. ರಾಜಕೀಯ ಪ್ರೇರಿತವಾಗಿ ಕೆಲವರು ಇದರ ಬಗ್ಗೆ ದೂರು ನೀಡಿದ್ದಾರೆ. ಯಾವುದೇ ಅಂಗಡಿಯನ್ನು ತೆರವು ಮಾಡದಂತೆ ಇಲಾಖೆಗಳಿಗೆ ಸೂಚನೆ ನೀಡಿದ್ದೇನೆ.
ಅಶೋಕ್ ರೈ, ಶಾಸಕರು ಪುತ್ತೂರು









