ಪುತ್ತೂರು: ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಉದಯಗಿರಿಯಲ್ಲಿ ನಡೆಯುವ ಊರ ಜಾತ್ರೆ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.14 ರಂದು ವಿಜೃಂಭಣೆಯಿಂದ ಜರಗಿತು. ಬೆಳಿಗ್ಗೆ ಗಣಹೋಮ, ಕಲಶ ಪ್ರತಿಷ್ಠೆ ನಡೆದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಆರಂಭಗೊಂಡು ಮಧ್ಯಾಹ್ನ ಮಹಾಪೂಜೆ ನಡೆದು ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ಸಂಜೆ ಬಾಯಂಬಾಡಿ ಮಣ್ಣಾಪು ಶ್ರೀ ವಿಷ್ಣುಮೂರ್ತಿ ದೈವಸ್ಥಾನದಿಂದ ಭಂಡಾರವು ಸಿಆರ್.ಸಿ ಕಾಲೋನಿಯ ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನಕ್ಕೆ ಬಂದು ಅಲ್ಲಿಂದ ದರುಶನದಿಂದ ಉದಯಗಿರಿಗೆ ತೆರಳುವ ಕಾರ್ಯಕ್ರಮ ನಡೆಯಿತು.
ರಾತ್ರಿ ಮೇಲೇರಿಗೆ ಅಗ್ನಿಸ್ಪರ್ಶ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಕುಳಿಚಟ್ಟು ದೈವದ ನರ್ತನ ಸೇವೆ ನಡೆದು ಮಾ.15 ರ ಪ್ರಾತಃಕಾಲ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ, ಮಾರಿ ಕಲಕ್ಕೆ ಹೋಗುವ ಕಾರ್ಯಕ್ರಮ ನಡೆದು ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಬಳಿಕ ಗುಳಿಗ ದೈವದ ನೇಮ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮಾ.14 ರಂದು ಸಂಜೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿಧ್ಯ, ರಾತ್ರಿ ಸರಸ್ವತಿ ಕಲಾ ಡ್ಯಾನ್ಸ್ ಸ್ಟುಡಿಯೋ ನೇರಳಕಟ್ಟೆ ಪಡುಬಿದ್ರೆ ಮತ್ತು ಜನ್ಯ ಡ್ಯಾನ್ಸ್ ಅಕಾಡೆಮಿ ಮುರ ಪುತ್ತೂರು ಇವರಿಂದ ನೃತ್ಯ ವೈವಿಧ್ಯ ಹಾಗೇ ‘ಕುಸಲ್ದ ಮಸಾಲೆ’ ಸಂಗೀತ ರಸಸಂಜೆ ನಡೆಯಿತು.
ಊರ ಪರವೂರ ನೂರಾರು ಭಕ್ತಾಧಿಗಳು ಆಗಮಿಸಿ ಶ್ರೀ ದೈವದ ಗಂಧ ಪ್ರಸಾದ ಸ್ವೀಕರಿಸಿದರು. ಆಡಳಿತ ಸಮಿತಿಯ ಅಧ್ಯಕ್ಷ ತಾರಾಪ್ರಸಾದ್ ರಾಮಕಜೆ, ಪ್ರ.ಕಾರ್ಯದರ್ಶಿ ಗಿರೀಶ್ ಪಾದೆಕಲ್ಲು, ಜೀರ್ಣೋದ್ಧಾರ ಸಮಿತಿ ಗೌರವ ಅಧ್ಯಕ್ಷ ಗಿರೀಶ್ ಮಳಿ ಹಾಗೂ ಸರ್ವ ಸದಸ್ಯರು ಮತ್ತು ಊರಿನ ಸಮಸ್ತರು ಉಪಸ್ಥಿತರಿದ್ದರು.