ಮದರಸಕ್ಕೆ ತೆರಳುತ್ತಿದ್ದ ಬಾಲಕರ ಮೇಲೆ ಹೋಳಿ ಬಣ್ಣ – ಬಿಹಾರ ಕಾರ್ಮಿಕರ ಮೇಲೆ ಗುಂಪು ದಾಳಿ: ನಾಪತ್ತೆಯಾಗಿರುವ ಕಾರ್ಮಿಕರು

0

ಉಪ್ಪಿನಂಗಡಿ: ಹೋಳಿ ಹಬ್ಬವನ್ನಾಚರಿಸುತ್ತಿದ್ದ ಬಿಹಾರ ಮೂಲದ ಕಾರ್ಮಿಕರು ಮದರಸಕ್ಕೆ ತೆರಳುತ್ತಿದ್ದ ಬಾಲಕರ ಮೇಲೆ ಬಣ್ಣ ಹಚ್ಚಿದ್ದಾರೆಂದು ಆರೋಪಿಸಿ 34 ನೆಕ್ಕಿಲಾಡಿಯಲ್ಲಿ ಗುಂಪೊಂದು ಕಾರ್ಮಿಕರ ಮೇಲೆ ದಾಳಿ ನಡೆಸಿದ ಬಳಿಕ ಕಾರ್ಮಿಕರು ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪುತ್ತೂರು ತಾಲೂಕಿನ 34ನೇ ನೆಕ್ಕಿಲಾಡಿ ಗ್ರಾಮದ ವಸತಿಯೊಂದರಲ್ಲಿ ವಾಸ್ತವ್ಯ ಹೊಂದಿದ್ದ ಸುಮಾರು 40ಕ್ಕೂ ಮಿಕ್ಕಿದ ಬಿಹಾರ ಮೂಲದ ಕಾರ್ಮಿಕರು ಕಳೆದ ಶುಕ್ರವಾರದಂದು ಹೋಳಿ ಹಬ್ಬವನ್ನು ಆಚರಿಸುತ್ತಿದ್ದ ವೇಳೆ ಗುಂಪಿನಲ್ಲಿದ್ದ ಕೆಲ ಮಂದಿ ಮದರಸಕ್ಕೆ ಹೋಗಿದ್ದ ಬಾಲಕರಿಬ್ಬರಿಗೆ ಬಣ್ಣ ಹಚ್ಚಿದ್ದಾರೆಂದು ಆರೋಪಿಸಿ ಗುಂಪೊಂದು ಕಾರ್ಮಿಕರು ವಾಸ್ತವವನ್ನು ಹೊಂದಿದ್ದ ವಸತಿಗೆ ದಾಳಿ ನಡೆಸಿ ಅಲ್ಲಿ ಹೋಳಿ ಹಬ್ಬದ ಸಂಭ್ರಮದಲ್ಲಿದ್ದವರ ಮೇಲೆ ಯದ್ವಾ ತದ್ವ ಹಲ್ಲೆ ನಡೆಸಿದ್ದಾರೆಂದೂ, ಹಲ್ಲೆಗೀಡಾದ ಕಾರ್ಮಿಕರು ಓಡಿ ಹೋದವರು ಈವರೆಗೂ ಪತ್ತೆಯಾಗಲಿಲ್ಲವೆಂದು ತಿಳಿಸಲಾಗಿದೆ.

ಇದಕ್ಕೆಪೂರಕವೆಂಬಂತೆ ಕಾರ್ಮಿಕರು ತಮ್ಮ ವಸತಿಯಲ್ಲಿ ಹಬ್ಬದೂಟಕ್ಕೆಂದು ಸಿದ್ದಪಡಿಸಿದ ಭಕ್ಷಗಳೆಲ್ಲವೂ ಘಟನೆಗೆ ಸಾಕ್ಷಿ ಎಂಬಂತೆ ಅನಾಥವಾಗಿದ್ದು, ಹಬ್ಬದೂಟವನ್ನು ಸವಿಯಲೂ ಬಿಡದೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗಿತ್ತು ಎಂದು ದೂರಲಾಗಿದೆ.

ಘಟನೆಗೆ ಸಂಬಂಧಿಸಿ ಯಾವುದೇ ದೂರು ಬಂದಿಲ್ಲ: ಎಸೈ
ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಹೋಳಿ ಹಬ್ಬವನ್ನು ಆಚರಿಸುತ್ತಿದ್ದ ಹೊರ ರಾಜ್ಯದ ಕಾರ್ಮಿಕರು ಮದ್ಯ ಸೇವಿಸಿ ಪರಸ್ಪರ ಜಗಳವಾಡುತ್ತಿದ್ದ ಕಾರಣಕ್ಕೆ ನಿಗಾವಿರಿಸಲಾಗಿತ್ತು. ಈ ಮಧ್ಯೆ ನೆಕ್ಕಿಲಾಡಿಯಲ್ಲಿ ಸ್ಥಳೀಯ ಬಾಲಕರಿಬ್ಬರಿಗೆ ಬಣ್ಣ ಹಚ್ಚಿದ ಕಾರಣಕ್ಕೆ ಪ್ರಶ್ನಿಸಲು ಹೋದ ವ್ಯಕ್ತಿಗಳ ಮೇಲೆ ಕಾರ್ಮಿಕರ ಪೈಕಿ ಒಂದಿಬ್ಬರು ಹಲ್ಲೆಗೆ ಮುಂದಾದರೆಂದೂ, ಇದರಿಂದ ಕೆರಳಿದ ಸ್ಥಳೀಯರು ಗುಂಪುಗೂಡಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾರೆಂದು ಮಾಹಿತಿ ಬಂದಿತ್ತು. ತಕ್ಷಣವೇ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದಾಗ ಗುಂಪು ಚದುರಿದ್ದು, ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಲು ಸೂಚಿಸಲಾಗಿತ್ತು. ಆದರೆ ಈವರೆಗೆ ಯಾರೂ ದೂರು ಸಲ್ಲಿಸಿಲ್ಲ. ಪೊಲೀಸ್ ತನಿಖೆಗೆ ಒಳಗಾಗಬಹುದೆಂಬ ಭೀತಿಯಿಂದ ಕಾರ್ಮಿಕರು ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ಅವಿನಾಶ್ ಗೌಡ ಅವರು ಪತ್ರಿಕೆಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here