ಪಟ್ಟೆ ಬಡಗನ್ನೂರು: ಪಟ್ಟೆ ವಿದ್ಯಾ ಸಮಿತಿಯಿಂದ ನಡೆಸಲ್ಪಡುತ್ತಿದ್ದ ಪ್ರತಿಭಾ ಪ್ರೌಢಶಾಲೆ ಪಟ್ಟೆ ಹಾಗೂ ಶ್ರೀ ಕೃಷ್ಣ ವಿದ್ಯಾ ಸಮಿತಿಯಿಂದ ನಡೆಸಲ್ಪಡುತ್ತಿದ್ದ ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆ ಇದರ ಆಡಳಿತ ಹಸ್ತಾಂತರ ಕಾರ್ಯಕ್ರಮವು ಮಾ.19ರಂದು ಪಟ್ಟೆ ವಿದ್ಯಾ ಸಂಸ್ಥೆಗಳ ಆವರಣದಲ್ಲಿ ಜರುಗಿತು.
ಪಟ್ಟೆ ವಿದ್ಯಾ ಸಂಸ್ಥೆಗಳ ನೂತನ ಆಡಳಿತ ಮಂಡಳಿಯಾಗಿ ಪುತ್ತೂರಿನ ಖ್ಯಾತ ನಿರ್ಮಾಣ ಸಂಸ್ಥೆಯಾದ ದ್ವಾರಕಾ ಕಾರ್ಪೋರೇಶನ್ ಪ್ರೈವೇಟ್ ಲಿಮಿಟೆಡ್‌ನ ಅಂಗ ಸಂಸ್ಥೆಯಾದ ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಇವರು ಅಧಿಕಾರ ವಹಿಸಿಕೊಂಡರು.
ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯಶಿಕ್ಷಕಿ ಕೆ ಶಂಕರಿ ಇವರು ಸಂಸ್ಥೆಯ ಕುರಿತು ಮಾತನಾಡಿ, ಶುಭ ಹಾರೈಸಿದರು.ವಿದ್ಯಾ ಸಂಸ್ಥೆಗಳ ನೂತನ ಸಂಚಾಲಕ ವಿಘ್ನೇಶ್ ಹಿರಣ್ಯ ಇವರು ಮಾತನಾಡಿ, ದ್ವಾರಕಾ ಸಂಸ್ಥೆಯ ಧ್ಯೇಯೋದ್ದೇಶಗಳು ಹಾಗೂ ಶೈಕ್ಷಣಿಕ ರೂಪುರೇಶೆಗಳ ವಿವರಣೆಯನ್ನು ನೀಡಿದರು. ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಮಾತನಾಡಿ, ಪಟ್ಟೆ ವಿದ್ಯಾಸಂಸ್ಥೆಗಳ ಹಿರಿಮೆಯನ್ನು ಸ್ಮರಿಸಿ, ಮುಂದಿನ ದಿನಗಳಲ್ಲಿ ವಿದ್ಯಾಲಯವು ಶೈಕ್ಷಣಿಕವಾಗಿ ಇನ್ನಷ್ಟು ವಿಸ್ತಾರವನ್ನು ಕಾಣಲಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿಕಟಪೂರ್ವ ಆಡಳಿತ ಮಂಡಳಿಯ ಸದಸ್ಯರನ್ನು ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದದವರನ್ನು ದ್ವಾರಕಾ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ, ನಿಕಟಪೂರ್ವ ಆಡಳಿತ ಮಂಡಳಿಯ ಅಧ್ಯಕ್ಷ ವೇಣುಗೋಪಾಲ್ ಭಟ್ ಪಟ್ಟೆ, ಸಂಚಾಲಕ ನಾರಾಯಣ ಭಟ್ ಪಟ್ಟೆ ಹಾಗೂ ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಗೋಪಾಲಕೃಷ್ಣ ಭಟ್, ಉಪಾಧ್ಯಕ್ಷ ಅಮೃತಕೃಷ್ಣ ಎನ್, ಸಂಚಾಲಕ ವಿಘ್ನೇಶ್ ಹಿರಣ್ಯ, ಸದಸ್ಯ ಗಣರಾಜ ಕುಂಬ್ಳೆ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ನೂತನ ಆಡಳಿತ ಮಂಡಳಿಯ ಸದಸ್ಯರಾದ ಅಶ್ವಿನಿ ಎನ್, ಅಮೃತಾ ಎಸ್ ಶಾನ್‌ಭಾಗ್, ಪರಮೇಶ್ವರ ಭಟ್, ವೆಂಕಟಕೃಷ್ಣ ಶರ್ಮ ಹಾಗೂ ನಿಕಟ ಪೂರ್ವ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು, ಸಂಸ್ಥೆಯ ಹಿತೈಷಿಗಳು, ಪೋಷಕರು, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಿಕಟಪೂರ್ವ ಆಡಳಿತ ಮಂಡಳಿಯ ಅಧ್ಯಕ್ಷ ವೇಣುಗೋಪಾಲ್ ಭಟ್ ಪಟ್ಟೆ ಇವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ರಾಜಗೋಪಾಲ್ ನಿರೂಪಿಸಿ, ಪ್ರತಿಭಾ ಪ್ರೌಢ ಶಾಲೆಯ ಮುಖ್ಯಶಿಕ್ಷಕಿ ಸುಮನ ವಂದಿಸಿದರು.