ಸುಬ್ರಹ್ಮಣ್ಯ ಕಾಲೇಜು ವಿದ್ಯಾರ್ಥಿಗಳಿಂದ ಬಸ್ಸಿನ ಅವ್ಯವಸ್ಥೆ ಬಗ್ಗೆ ಅಕ್ರೋಶ- ಪ್ರತಿಭಟನೆ

0

ಕಡಬ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸುಬ್ರಹ್ಮಣ್ಯ ಬಸ್ ನಿಲ್ದಾಣದಿಂದ ಬೆಳಿಗ್ಗೆ ಹಾಗೂ ಸಂಜೆಯ ಸಮಯ ಬಸ್ಸಿನ ವ್ಯವಸ್ಥೆ ಸರಿಯಾಗಿ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಬಸ್ಸಿನ ವ್ಯವಸ್ಥೆ ಸರಿಪಡಿಸಬೇಕಾಗಿ ಕೆ ಎಸ್ ಎಸ್ ಕಾಲೇಜಿನ ವಿದ್ಯಾರ್ಥಿಗಳು ಗುರುವಾರ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.


ಬೆಳಿಗ್ಗೆ ಕೆ ಎಸ್ ಎಸ್ ಕಾಲೇಜಿನಿಂದ ಕಾಲ್ನಡಿಗೆ ಮೂಲಕ ಹೊರಟ ವಿದ್ಯಾರ್ಥಿಗಳ ಜಾಥವು ಮುಖ್ಯ ರಸ್ತೆಯಲ್ಲಿ ಘೋಷಣೆಗಳನ್ನು ಕೂಗುತ್ತಾ ಕೆಎಸ್ಆರ್ ಟಿ ಸಿ ನಿಲ್ದಾಣದವರೆಗೆ ಆಗಮಿಸಿ ಪ್ರತಿಭಟನೆಯಲ್ಲಿ ತೊಡಗಿದರು. ಅಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಎಬಿವಿಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಮಾತನಾಡಿದರು. ಅಷ್ಟೊತ್ತಿಗೆ ಅಲ್ಲಿಗೆ ಆಗಮಿಸಿದ ಸುಬ್ರಹ್ಮಣ್ಯ ಬಸ್ ನಿಲ್ದಾಣದ ಸಂಚಾರ ನಿಯಂತ್ರಣ ಅಧಿಕಾರಿಗಳಾದ ಬಾಬು ಹಾಗೂ ರಾಮಚಂದ್ರರವರು ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು. ಆರಂಭದಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಬಂದು ಹೋಗಲು ಇದ್ದಂತ ಬಸ್ಸಿನ ಅವ್ಯವಸ್ಥೆ ಬಗ್ಗೆ ವಿವರಿಸಿದರು. ಅಲ್ಲದೆ ಈ ಹಿಂದೆ ಎಷ್ಟೇ ಮನವಿ ಸಲ್ಲಿಸಿದರೂ ಏನು ಪ್ರಯೋಜನ ಆಗಿಲ್ಲ. ಬೆಳಗ್ಗೆ ಕಾಲೇಜಿಗೆ ತೆರಳಲು ಮತ್ತು ಹಿಂದಿರುಗಲು ತುಂಬಾ ತೊಂದರೆ ಆಗುತ್ತಿದೆ. ಅಲ್ಲದೆ ಬಸ್ ಡ್ರೈವರ್ ಗಳು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಸ್ಸನ್ನು ಕೂಡ ಸರಿಯಾಗಿ ನಿಲ್ಲಿಸುತ್ತಿಲ್ಲ ಎಂದು ದೂರಿದರು. ಇದು ಹೀಗೆ ಮುಂದುವರೆದರೆ ನಾವು ಸುಮ್ಮನಿರುವುದಿಲ್ಲ, ನಮಗೆ ಒಂದು ವಾರದ ಒಳಗೆ ಬಸ್ಸಿನ ವ್ಯವಸ್ಥೆ ಸರಿ ಪಡಿಸಬೇಕು. ಇಲ್ಲದಿದ್ದಲ್ಲಿ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿ ಸುಳ್ಯ ಡಿಪೋ ಮ್ಯಾನೇಜರ್ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಸುಬ್ರಮಣ್ಯ ಬಸ್ ನಿಲ್ದಾಣದ ಸಂಚಾರ ನಿಯಂತ್ರಣ ಅಧಿಕಾರಿ ಬಾಬು ಅವರು ಈ ಕೂಡಲೇ ಶಿಫಾರಸ್ಸಿನೊಂದಿಗೆ ಹಾಗೂ ಉನ್ನತ ಅಧಿಕಾರಿಗಳಿಗೆ ವಿದ್ಯಾರ್ಥಿಗಳ ಬಸ್ಸಿನ ಸಮಸ್ಯೆಯನ್ನು ಮನವರಿಕೆ ಮಾಡಿ ಎರಡು ವಾರಗಳ ಒಳಗೆ ಸರಿಪಡಿಸುವುದಾಗಿ ಭರವಸೆ ನೀಡಿದರು. ತದನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂತೆಗೆದರು. ಪ್ರತಿಭಟನೆಗೆ ನೇತೃತ್ವವನ್ನು ಕಾಲೇಜಿನ ವಿದ್ಯಾರ್ಥಿ ನಾಯಕರು ಹಾಗೂ ಎಬಿವಿಪಿ ಪದಾಧಿಕಾರಿಗಳಾದ ಶ್ರೀಜಿತ್, ನಂದಕುಮಾರ್, ದಿಶಾಂತ್, ಕಾರ್ತಿಕ್, ಹೇಮಂತ್, ಹಾಗೂ ಪ್ರೀತೇಶ್ ವಹಿಸಿದ್ದರು.

LEAVE A REPLY

Please enter your comment!
Please enter your name here