ಪುತ್ತೂರು: ಗೆಜ್ಜೆಗಿರಿ ಕ್ಷೇತ್ರದ ಆನುವಂಶಿಕ ಮೊಕ್ತೇಸರರಾದ, ಹಿರಿಯ ನಾಟಿ ವೈದ್ಯೆ ಲೀಲಾವತಿ ಪೂಜಾರಿ ಅವರಿಗೆ ಕರ್ನಾಟಕ ಸರಕಾರದ ಜಾನಪದ ಅಕಾಡೆಮಿ ನೀಡುವ 2023ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಮಾ.15ರಂದು ಪ್ರದಾನ ಮಾಡಲಾಯಿತು. ಬೀದರ್‌ನ ಶ್ರೀ ಚೆನ್ನಬಸಪ್ಪ ಪಟ್ಟದೇವರು ರಂಗಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಸದಸ್ಯ ಸಂಚಾಲಕ ವಿಜಯ ಕುಮಾರ ಸೋನಾರೆ, ರಿಜಿಸ್ಟ್ರಾರ್ ಎನ್.ನಮ್ರತ ಹಾಗೂ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯದ 30 ಜಿಲ್ಲೆಗಳಿಂದ ತಲಾ ಒಬ್ಬರನ್ನು ಆರಿಸಿ 2023ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿಯನ್ನು ನೀಡಲಾಗಿದೆ.
ಲೀಲಾವತಿ ಪೂಜಾರಿಯವರ ಪರಿಚಯ
ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಪಡುಮಲೆ ವ್ಯಾಪ್ತಿಯ ಗೆಜ್ಜೆಗಿರಿ ನಂದನ ಬಿತ್ತಿಲ್ ಕ್ಷೇತ್ರದ ಆನುವಂಶಿಕ ಮೊಕ್ತೇಸರರಾದ ಲೀಲಾವತಿ ಪೂಜಾರಿ (77)ಯವರು ಕಳೆದ 55 ವರ್ಷಗಳಿಂದ ನಾಟಿ ವೈದ್ಯಕೀಯ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಸಾವಿರಾರು ಜನರಿಗೆ ಗಿಡಮೂಲಿಕೆ ಔಷಧದ ಮೂಲಕ ಮಾರಣಾಂತಿಕ ರೋಗಗಳನ್ನೂ ಗುಣಪಡಿಸಿದ್ದಾರೆ.
ಮುಖ್ಯವಾಗಿ ಸರ್ಪಸುತ್ತು, ಕೆಂಪು, ಬೆಸುರ್ಪು, ದೃಷ್ಟಿ, ಸೋರಿಯಾಸಿಸ್ ಚರ್ಮರೋಗ, ಮಕ್ಕಳ ಚಿಕಿತ್ಸೆ, ಸಂಧಿವಾತ ಇತ್ಯಾದಿ ಸಮಸ್ಯೆಗಳಲ್ಲದೆ, ಬೆಂಕಿ ಅವಘಡದಿಂದಾಗುವ ಉರಿ ತೆಗೆಯುವುದರಲ್ಲೂ ಇವರು ಎತ್ತಿದ ಕೈ. ಪಾರಂಪರಿಕ ಮಂತ್ರ ವಿದ್ಯೆಯನ್ನೂ ಹೊಂದಿರುವ ಇವರು ದೃಷ್ಟಿದೋಷ ನಿವಾರಣೆಗೆ ನೂಲು ಕಟ್ಟುವ ಮೂಲಕ ಆರೋಗ್ಯಯುತ ಜೀವನಕ್ಕೆ ಕೊಡುಗೆ ನೀಡುತ್ತಾ ಬಂದಿದ್ದಾರೆ. ತಮ್ಮ 15ನೇ ವರ್ಷ ವಯಸ್ಸಿನಲ್ಲೇ ನಾಟಿ ಔಷಧ ವಿದ್ಯೆಯನ್ನು ಕಲಿತುಕೊಂಡ ಇವರು, ಗೆಜ್ಜೆಗಿರಿ ಕ್ಷೇತ್ರದ ಆದಿ ದೈವ ಧೂಮಾವತಿ ಮತ್ತು ಇಲ್ಲಿ ಕಾರಣಿಕ ಮಾತೆ ದೇಯಿ ಬೈದ್ಯೆತಿಯ ಸ್ಮರಣೆಯಲ್ಲಿ ಔಷಧ ನೀಡುತ್ತಾರೆ. ಜತೆಗೆ ಮನೆಯಲ್ಲಿ ಕಲ್ಲುರ್ಟಿ, ಕೊರತಿ ದೈವವನ್ನು ನಂಬುತ್ತಾರೆ.
500 ವರ್ಷಗಳ ಹಿಂದೆ ತುಳುನಾಡಿನಲ್ಲಿ ಕಾರಣಿಕ ಪುರುಷರಾಗಿ ಅವತಾರ ತಾಳಿದ ಕೋಟಿ ಚೆನ್ನಯರ ಮನೆ ಗೆಜ್ಜೆಗಿರಿಯಾಗಿದ್ದು, ಅವರು ಕಾಂತಣ್ಣ ಬೈದ್ಯ ಮತ್ತು ದೇಯಿ ಬೈದ್ಯೆತಿ ದಂಪತಿಗಳ ಅವಳಿ ಮಕ್ಕಳಾಗಿ ಜನಿಸಿದರು. ಊರಿನ ಅರಸನಾದ ಕುಜುಂಬದ ಮುದ್ಯ (ಪೆರುಮಳ ಬಲ್ಲಾಳ) ಅವರ ಕಾಲಿನ ಮಾರಣಾಂತಿಕ ನೋವಿಗೆ ನಾಟಿ ವೈದ್ಯಕೀಯ ಔಷಧಿ ನೀಡಿ ಗುಣಪಡಿಸುವ ಮೂಲಕ ದೇಯಿ ಬೈದ್ಯೆತಿ ಪ್ರಸಿದ್ಧಿ ಪಡೆದರು. ಅವರ ಔಷಧ ಶಕ್ತಿ ಆಗ ಹತ್ತೂರುಗಳಲ್ಲಿ ಕೀರ್ತಿ ಪಡೆದಿತ್ತು. ಕೋಟಿ ಚೆನ್ನಯರಂಥ ವೀರ ಪುಂಗವರಿಗೆ ಜನ್ಮ ನಿಡುವ ಮೂಲಕ ಮಹಾಮಾತೆ ಎನಿಸಿಕೊಂಡರು.
ದೇಯಿ ಬೈದ್ಯೆತಿಯ ಔಷಧೀಯ ಶಕ್ತಿಯಿಂದಲೇ ಗೆಜ್ಜೆಗಿರಿ ನಂದನ ಬಿತ್ತಿಲು ಕಾರಣಿಕತೆ ಪಡೆದುಕೊಂಡಿದೆ. ಇಲ್ಲಿರುವ ತೀರ್ಥ ಬಾವಿಯು ಸ್ವತಃ ದೇಯಿ ಬೈದ್ಯೆತಿಯ ಮಂತ್ರ ಶಕ್ತಿಯಿಂದ ಚೈತನ್ಯ ಪಡೆದುಕೊಂಡಿದೆ. ದೇಯಿ ಬೈದ್ಯೆತಿ ಬಳಸುತ್ತಿದ್ದ ಸಂಜೀವಿನಿ ಪಾತ್ರೆ ಈಗಲೂ ಕ್ಷೇತ್ರದಲ್ಲಿದೆ. ದೇಯಿ ಬೈದ್ಯೆತಿಯ ಅವತಾರ ಮುಗಿದ ಬಳಿಕವೂ ಈ ಮಣ್ಣಿನಲ್ಲಿ ಔಷಧೀಯ ಪರಂಪರೆ ಮುಂದುವರಿದಿತ್ತು. 65 ವರ್ಷಗಳ ಹಿಂದೆ ಗೆಜ್ಜೆಗಿರಿಯ ಸೊಸೆಯಾಗಿ ಬಂದ ಲೀಲಾವತಿ ಪೂಜಾರಿ ಅವರು ತಮ್ಮ ಗಂಡ ದಿ.ದೂಮಣ್ಣ ಪೂಜಾರಿ ಮತ್ತು ಅತ್ತೆ ದಿ.ಮದನು ಪೂಜಾರಿ ಅವರಿಂದ ನಾಟಿ ವೈದ್ಯಕೀಯದ ವಿದ್ಯೆ ಕಲಿತುಕೊಂಡರು. ತಂದೆ ದಿ. ಅಮನ ಪೂಜಾರಿ ಸೇರಿದಂತೆ ತವರು ಮನೆಯಲ್ಲೂ ಒಂದಷ್ಟು ಔಷಧೀಯ ವಿದ್ಯೆ ಕಲಿತುಕೊಂಡಿದ್ದರು. ಗೆಜ್ಜೆಗಿರಿಯಲ್ಲಿ ದೇಯಿ ಬೈದ್ಯೆತಿ ಸ್ಮರಣೆಯಲ್ಲಿ, ಧೂಮಾವತಿ ದೈವದ ಅನುಗ್ರಹದ ನೆರಳಲ್ಲಿ ಔಷಧ ನೀಡಲಾರಂಭಿಸಿದ ಬಳಿಕ ಸಾವಿರಾರು ಜನರಿಗೆ ಇದು ಸಂಜೀವಿನಿಯಾಗಿ ಪರಿಣಮಿಸತೊಡಗಿತು. ಈಗಲೂ ಇವರು ತಮ್ಮ ಪುತ್ರ, ಗೆಜ್ಜೆಗಿರಿ ಕ್ಷೇತ್ರದ ಆನುವಂಶಿಕ ಮೊಕ್ತೇಸರರಾದ ಶ್ರೀಧರ ಪೂಜಾರಿ ಅವರ ಜತೆ ಸೇರಿಕೊಂಡು ಕೇಶ ತೈಲ, ನೋವಿನ ಎಣ್ಣೆ ತಯಾರಿಸುತ್ತಾರೆ. ಮೂಲ್ಕಿ ಬಿಲ್ಲವ ಸಂಘದಲ್ಲಿ ನಡೆದ ಮಹಿಳಾ ಸಮಾಗಮ, ಮಂಗಳೂರಿನಲ್ಲಿ ನಡೆದ ಬಿಲ್ಲವ ಮಹಿಳಾ ಸಮಾವೇಶ ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನಾನಾ ಕಡೆ ಲೀಲಾವತಿ ಪೂಜಾರಿ ಅವರನ್ನು ಸನ್ಮಾನಿಸಲಾಗಿದೆ.