ಶಾಲಾ ಯೂನಿಫಾರಂ ಸರಬರಾಜಿನಲ್ಲಿ ಭ್ರಷ್ಟಾಚಾರ…!? – ಬಿಇಓ ವಿರುದ್ಧ ಗ್ರಾಮಸ್ಥರಿಂದ ಆರೋಪ: ಪುಣಚ ಗ್ರಾಮಸಭೆ

0

ಪುತ್ತೂರು: ಶಾಲೆಗಳಿಗೆ ಯೂನಿಫಾರಂ ಸರಬರಾಜು ಮಾಡಲು ಸರಕಾರದಿಂದ ಶಿಕ್ಷಣ ಇಲಾಖೆಗೆ ರೂ.20 ಸಾವಿರ ಅನುದಾನವಿದ್ದರೂ ಶಾಲಾ ಮುಖ್ಯಸ್ಥರಿಂದಲೇ ಯೂನಿಫಾರಂಗಳನ್ನು ತೆಗೆದುಕೊಂಡು ಹೋಗಲು ಹೇಳುತ್ತಿರುವುದು ಕಂಡು ಬರುತ್ತಿದ್ದು ಹಾಗಾದರೆ ರೂ.20 ಸಾವಿರ ಅನುದಾನ ಎಲ್ಲಿಗೆ ಹೋಗುತ್ತಿದೆ. ಇದರಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯವರು ಭ್ರಷ್ಟಾಚಾರ ಮಾಡುತ್ತಿದ್ದಾರೆಯೇ ಎಂದು ಪುಣಚ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆರೋಪಿಸಿದರು. ಸಭೆಯು ಗ್ರಾಪಂ ಅಧ್ಯಕ್ಷೆ ಬೇಬಿ ಯಾನೆ ಯಶೋಧಾರವರ ಅಧ್ಯಕ್ಷತೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸುನೀತಾರವರ ಮಾರ್ಗದರ್ಶನದಲ್ಲಿ ಮಾ.20ರಂದು ಪುಣಚ ಗ್ರಾಪಂ ಸುವರ್ಣ ಸೌಧ ಸಭಾಂಗಣದಲ್ಲಿ ನಡೆಯಿತು. ವಿಷಯ ಪ್ರಸ್ತಾಪಿಸಿದ ಪುಣಚ ನಾಗರೀಕ ಹಿತರಕ್ಷಣ ವೇದಿಕೆಯ ವೆಂಕಟ್ರಮಣ ಪುಣಚರವರು, ಶಾಲೆಗಳಿಗೆ ಯೂನಿಫಾರಂ ಸರಬರಾಜು ಮಾಡಲು ಸರಕಾರದಿಂದ ಪ್ರತಿ ತಾಲೂಕು ಶಿಕ್ಷಣಾಧಿಕಾರಿಯವರ ಕಛೇರಿಗೆ ರೂ.20 ಸಾವಿರ ಅನುದಾನ ಬರುತ್ತಿದ್ದು ಶಿಕ್ಷಣ ಇಲಾಖಾ ಕಛೇರಿಯಿಂದಲೇ ಪ್ರತಿ ಶಾಲೆಗಳಿಗೂ ಯೂನಿಫಾರಂಗಳನ್ನು ತಲುಪಿಸಬೇಕಾಗಿದೆ. ಆದರೆ ಬಂಟ್ವಾಳ ತಾಲೂಕಿನ ಕೆಲವೊಂದು ಶಾಲೆಗಳಿಗೆ ಶಾಲಾ ಮುಖ್ಯಸ್ಥರೇ ಕಛೇರಿಗೆ ಹೋಗಿ ತಮ್ಮ ಹಣದಲ್ಲಿ ಯೂನಿಫಾರಂಗಳನ್ನು ಶಾಲೆಗಳಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಶಾಲಾ ಮುಖ್ಯಸ್ಥರೇ ಕಛೇರಿಗೆ ಹೋಗಿ ಯೂನಿಫಾರಂ ತರುವುದಾದರೆ ಬಿಇಒ ಯಾಕೆ ಇರುವುದು? ಈ ಬಗ್ಗೆ ನನಗೆ ಕ್ಷೇತ್ರ ಶಿಕ್ಷಣಾಧಿಕಾರಿಯವರು ಸರಿಯಾದ ಉತ್ತರವನ್ನು ನೀಡಬೇಕು ಎಂದು ಆಗ್ರಹಿಸಿದರು. ಬಿಇಓರವರ ಅನುಪಸ್ಥಿತಿಯಲ್ಲಿ ಸಿಆರ್‌ಪಿಯವರು ಇದಕ್ಕೆ ಉತ್ತರ ನೀಡಲು ಮುಂದಾದರೂ ಈ ವೇಳೆ ನನಗೆ ಬಿಇಒರವರೇ ಉತ್ತರ ನೀಡಬೇಕು, ಗ್ರಾಮಸಭೆಗೆ ಕ್ಷೇತ್ರ ಶಿಕ್ಷಣಾಧಿಕಾರಿಯವರು ಬರಬೇಕು ಎಂದು ದಿನಗಳ ಹಿಂದೆಯೇ ಪಂಚಾಯತ್‌ಗೆ ಪತ್ರ ಕೊಟ್ಟಿದ್ದೇನೆ ಎಂದು ತಿಳಿಸಿದರು. ಇದಕ್ಕೆ ಉತ್ತರಿಸಿದ ಪಿಡಿಓ ರವಿಯವರು, ನೀವು ನೀಡಿದ ಪತ್ರವನ್ನಿಟ್ಟುಕೊಂಡು ಬಿಇಓರವರಿಗೆ ಖುದ್ದಾಗಿ ಕಛೇರಿಗೆ ತೆರಳಿಯೇ ಪತ್ರ ನೀಡಿದ್ದೇವೆ ಎಂದು ತಿಳಿಸಿದರು. ಬಿಇಓರವರು ಭ್ರಷ್ಟಾಚಾರ ಮಾಡುತ್ತಿದ್ದಾರೆ ಈ ಬಗ್ಗೆ ನನ್ನ ಬಳಿ ದಾಖಲೆ ಇದೆ ಎಂದು ವೆಂಕಟ್ರಮಣರವರು ನೇರವಾಗಿ ಬಿಇಓಗೆ ಸಭೆಯಿಂದಲೇ ದೂರವಾಣಿ ಕರೆ ಮಾಡಿ ವಿಷಯ ಪ್ರಸ್ತಾಪಿಸಿ ‘ನಿಮ್ಮ ಕೇಸ್ ಹಾಕ್ತಾನೆ’ ಎಂದು ಫೋನ್‌ನಲ್ಲೇ ಗದರಿಸಿದ ಪ್ರಸಂಗವೂ ನಡೆಯಿತು. ಈ ಬಗ್ಗೆ ಕೆಲ ಹೊತ್ತು ಚರ್ಚೆ ನಡೆಯಿತು. ಈ ಬಗ್ಗೆ ನೋಡೆಲ್ ಅಧಿಕಾರಿಯವರು ಕೂಡ ಬಿಇಓಗೆ ಕರೆ ಮಾಡಿ ಗ್ರಾಮಸಭೆಗೆ ಬರದಿರುವ ಬಗ್ಗೆ ವಿಚಾರಿಸಿದರು. ಇದಕ್ಕೆ ಬಿಇಒರವರು ನಾನು ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ವಿಲೇವಾರಿಯಲ್ಲಿರುವ ಕಾರಣ ಸಭೆಗೆ ಬಂದಿಲ್ಲ, ಸಿಆರ್‌ಪಿಯನ್ನು ಕಳಿಸಿಕೊಟ್ಟಿದ್ದೇನೆ ಎಂದು ತಿಳಿಸಿದರು ಎಂದು ನೋಡೆಲ್ ಅಧಿಕಾರಿ ಸಭೆಗೆ ತಿಳಿಸಿದರು. ಇದಲ್ಲದೆ ಈ ಬಗ್ಗೆ ತಾಪಂ ಇಓಗೆ ಲಿಖಿತವಾಗಿ ಬರೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಶಾಲೆಗಳಲ್ಲಿ ಶಿಕ್ಷಕರ ಕೊರತೆ
ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು ಇದರಿಂದ ವಿದ್ಯಾರ್ಥಿಗಳ ಸಂಖ್ಯೆ ಕೂಡ ಕಡಿಮೆಯಾಗುತ್ತಿದೆ. ಹೀಗೆ ಆದರೆ ಮುಂದಿನ ದಿನಗಳಲ್ಲಿ ಸರಕಾರಿ ಶಾಲೆಗಳು ಮುಚ್ಚುವ ಭೀತಿ ಎದುರಾಗುತ್ತಿದೆ. ಇದಕ್ಕೆ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು, ಶಿಕ್ಷಕರ ಕೊರತೆಯನ್ನು ನೀಗಿಸುವ ಕೆಲಸ ಇಲಾಖೆಯಿಂದ ಆಗಬೇಕು ಎಂದು ವೆಂಕಟ್ರಮಣ ಪುಣಚರವರು ತಿಳಿಸಿದರು.

ಬಿಸಿಲಿನ ತಾಪ ಏರುತ್ತಿದೆ, ಮಕ್ಕಳ ಬಗ್ಗೆ ಜಾಗೃತೆ ಇರಲಿ
ದಿನದಿಂದ ದಿನಕ್ಕೆ ಬಿಸಿಲಿನ ತಾಪ ಏರಿಕೆಯಾಗುತ್ತಿದ್ದು ಮಕ್ಕಳು ಹಾಗೂ ವೃದ್ದರ ಬಗ್ಗೆ ಜಾಗೃತೆ ವಹಿಸುವಂತೆ ವೈದ್ಯಾಧಿಕಾರಿಯವರು ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ವೆಂಕಟ್ರಮಣ ಪುಣಚರವರು ಬಿಸಿಲಿದ್ದರೂ ಶಾಲಾ ಮಕ್ಕಳನ್ನು ಮಧ್ಯಾಹ್ನದ ವೇಳೆ ಶಾಲೆಯಿಂದ ಬಿಡಲಾಗುತ್ತಿದೆ ಇದು ಸರಿಯೇ ಎಂದು ಪ್ರಶ್ನಿಸಿದರು. ಬಿಸಿಲಿನ ತಾಪ ಜಾಸ್ತಿ ಇರುವ ದಿನ ರಜೆ ಅಥವಾ ಸಂಜೆ ತನಕ ಮಕ್ಕಳನ್ನು ಶಾಲೆಯಲ್ಲಿಯೇ ಇರಿಸಿಕೊಂಡು ಸಂಜೆ ಬಿಡಬೇಕು ಎಂಬ ನಿಯಮವಿದೆ ಮಧ್ಯಾಹ್ನದ ವೇಳೆ ಮಕ್ಕಳನ್ನು ಮನೆಗೆ ಬಿಡುವುದು ಸರಿಯಲ್ಲ ಎಂದು ತಿಳಿಸಿದರು. ಈ ಬಗ್ಗೆ ಶಿಕ್ಷಣ ಇಲಾಖೆಗೆ ಬರೆದುಕೊಳ್ಳುವುದು ಎಂದು ನಿರ್ಣಯಿಸಲಾಯಿತು.

ಶಾಲಾ ಮಕ್ಕಳಲ್ಲಿ ಕಸ ಹೆಕ್ಕಿಸುವುದು ಸರಿಯಲ್ಲ…!
ಶಾಲಾ ಮಕ್ಕಳ ಕೈಯಲ್ಲಿ ತಮ್ಮ ಶಾಲಾ ವಠಾರದಿಂದ ಹೊರಗಡೆ ಕಸ ಹೆಕ್ಕಿಸುವುದು ಸರಿಯಲ್ಲ. ಬೀದಿ ಬದಿ, ಅಂಗಡಿ ಸುತ್ತಮುತ್ತ ಯಾರೋ ತಿಂದು ಎಳೆದು ಬಿಸಾಡಿದ ಪಾನ್ ಮಸಾಲ ಇತ್ಯಾದಿಗಳ ಪ್ಯಾಕೆಟ್‌ಗಳನ್ನು ಕಸ ಕಡ್ಡಿಗಳನ್ನು ಮಕ್ಕಳ ಕೈಯಿಂದ ಹೆಕ್ಕಿಸುವುದು ಸರಿಯಲ್ಲ. ಶಾಲಾ ವಠಾರದಲ್ಲಿ ಬೇಕಾದರೆ ಕಸ ಹೆಕ್ಕಿಸಿ ಹೊರಗಡೆ ಹೆಕ್ಕಿಸಬೇಡಿ ಎಂದು ವೆಂಕಟ್ರಮಣ ಪುಣಚ ಮನವಿ ಮಾಡಿಕೊಂಡರು.

ಎಲ್ಲ ಕೆಲಸಕ್ಕೂ ಅಂಗನವಾಡಿ ಕಾರ್ಯಕರ್ತೆಯೇ ಕಾಣುತ್ತಾರೆ..?
ಸರಕಾರದ ಯಾವುದೇ ಕೆಲಸವಿರಲಿ ಮೊದಲು ಕಾಣುವುದು ಅಂಗನವಾಡಿ ಕಾರ್ಯಕರ್ತೆಯರು. ಈ ಬಿಸಿಲಿನ ನಡುವೆಯೂ ನಾವು ಫೀಲ್ಡ್ ವರ್ಕ್ ಮಾಡಬೇಕಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಸಭೆಗೆ ತಿಳಿಸಿದರು. ಬಿಎಲ್‌ಓ ಕೆಲಸ ನನ್ನಿಂದ ಸಾಧ್ಯವಾಗುತ್ತಿಲ್ಲ ಕಷ್ಟವಾಗುತ್ತಿದೆ ಎಂದು ಅಂಗನವಾಡಿ ಕಾರ್ಯಕರ್ತೆ ವೀಣಾ ಕುಮಾರಿ ತಿಳಿಸಿದರು.
ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬೈಲುಗುತ್ತು, ಸದಸ್ಯರುಗಳಾದ ಲಲಿತಾ, ಗಿರಿಜ, ಪ್ರತಿಭಾ ಜಗನ್ನಾಥ ಗೌಡ, ಗಂಗಮ್ಮ, ಹರೀಶ್ ಪೂಜಾರಿ, ರಾಮಕೃಷ್ಣ ಪೂಜಾರಿ, ಉದಯ ದಂಬೆ, ಸರೋಜಿನಿ, ಸುಜಾತ, ರೇಖಾ, ರೇಷ್ಮಾ, ತೀರ್ಥಾರಾಮ, ಅಶೋಕ್ ಕುಮಾರ್, ವಾಣಿಶ್ರೀ, ರಾಜೇಶ ನಾಯ್ಕ, ಶಾರದಾ ಉಪಸ್ಥಿತರಿದ್ದರು. ಗ್ರಂಥಪಾಲಕಿ ಜಯಲಕ್ಷ್ಮೀ ನಾಡಗೀತೆ ಹಾಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ ಸ್ವಾಗತಿಸಿ, ಪಂಚಾಯತ್ ಮಾಹಿತಿ ನೀಡಿದರು. ದ್ವಿತೀಯ ದರ್ಜೆ ಲೆಕ್ಕಸಹಾಯಕಿ ಪಾರ್ವತಿ ಹಾಗೂ ಡಾಟ ಆಪರೇಟರ್ ಕಂ ಕ್ಲರ್ಕ್ ಮಮತಾ ಕಜೆಮಾರ್ ವರದಿ ಮಂಡನೆ ಮಾಡಿದರು. ಸಿಬ್ಬಂದಿಗಳಾದ ಸತ್ಯಪ್ರಕಾಶ್, ಉಸ್ಮಾನ್, ಅಭಿಷೇಕ್, ರೇಷ್ಮಾ ಮತ್ತು ಪುನರ್‌ವಸತಿ ಕಾರ್ಯಕರ್ತ ಮುರಳೀಧರ ಸಹಕರಿಸಿದ್ದರು.


‘ಗ್ರಾಮ ಸಭೆಯಲ್ಲಿ ಬಂದ ಬೇಡಿಕೆ, ಸಲಹೆ ಸೂಚನೆಗಳನ್ನು ಮುಂದಿನ ಸಾಮಾನ್ಯ ಸಭೆಯಲ್ಲಿಟ್ಟು ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಪ್ರಯತ್ನಿಸುತ್ತೇವೆ. ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಅತೀ ಅಗತ್ಯ. ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ.’
ಬೇಬಿ ಯಾನೆ ಯಶೋಧಾ, ಅಧ್ಯಕ್ಷರು ಪುಣಚ ಗ್ರಾಪಂ

LEAVE A REPLY

Please enter your comment!
Please enter your name here