ಪುತ್ತೂರು: ಗ್ರಾಮ ಪಂಚಾಯತ್‌ಗಳಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಪುನರ್ವಸತಿ ಕಾರ್ಯಕರ್ತರ ಸೇವೆ ಖಾಯಂಮಾತಿ, ವೇತನ ಹೆಚ್ಚಳ ಸೇರಿದಂತೆ ಅವರ ವಿವಿಧ ಬೇಡಿಕೆ ಈಡೇರಿಸುವಂತೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿರುವುದಕ್ಕೆ ಪುನರ್ವಸತಿ ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ.
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಕಳೆದ 17 ವರ್ಷಗಳಿಂದ ತಾಲೂಕು ಮಟ್ಟದಲ್ಲಿ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು (ಎಂ.ಆರ್.ಡಬ್ಲ್ಯೂ), ಗ್ರಾಮೀಣ ಪ್ರದೇಶದಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು (ವಿ.ಆರ್.ಡಬ್ಲ್ಯೂ) ಹಾಗೂ ನಗರ/ಪಟ್ಟಣ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರ ಪುನರ್ವಸತಿ ಕಾರ್ಯಕರ್ತರು (ಯೂ.ಆರ್.ಡಬ್ಲ್ಯೂ) ಕರ್ತವ್ಯ ನಿರ್ವಹಿಸುತ್ತಿದ್ದು, ತಮ್ಮ ವ್ಯಾಪ್ತಿಯಲ್ಲಿನ ವಿಕಲಚೇತನರ ಮನೆಗಳಿಗೆ ಭೇಟಿಯಾಗಿ ಅವರ ಮನೆ ಬಾಗಿಲಿಗೆ ಸರಕಾರದ ಎಲ್ಲಾ ಯೋಜನೆಗಳನ್ನು ಮುಟ್ಟಿಸುವ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದೇವೆ. ಹುದ್ದೆ ಖಾಯಂಮಾತಿಗೆ ಒತ್ತಾಯಿಸಿ ಕಳೆದ 10-15 ವರ್ಷಗಳಿಂದ ಪ್ರತಿಭಟನೆ ನಡೆಸಿಕೊಂಡು ಬರುತ್ತಿದ್ದೇವೆ. ಆದರೆ ಯಾವುದೇ ಸರಕಾರವು ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ. ಈ ಹಿನ್ನಲೆಯಲ್ಲಿ ಬೆಳ್ತಂಗಡಿ ತಾಲೂಕು ವಿಕಲಚೇತನರ ತಾಲೂಕು ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತ (ಎಂ.ಆರ್.ಡಬ್ಲ್ಯೂ) ಜೋನ್ ಬ್ಯಾಫ್ಟಿಸ್ಟ್ ಡಿಸೋಜರವರು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಪುನರ್ವಸತಿ ಕಾರ್ಯಕರ್ತರ ಹುದ್ದೆಯನ್ನು ಕನಿಷ್ಠ ವೇತನಕ್ಕೆ ತರಬೇಕು ಎಂದು ವಿಧಾನಸಭೆಯಲ್ಲಿ ಒತ್ತಾಯಿಸುವಂತೆ ಮನವಿ ಮಾಡಿದ್ದರು. ಅಲ್ಲದೇ ಪೆರಾಬೆ ಗ್ರಾ.ಪಂ.ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಮುತ್ತಪ್ಪ ಬಿ., ಆಲಂಕಾರು ಗ್ರಾ.ಪಂ.ನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಮೋನಪ್ಪ ಬಿ.,ಅವರು ಶಾಸಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.
ಇದಕ್ಕೆ ಸ್ಪಂದಿಸಿರುವ ಶಾಸಕಿ ಭಾಗೀರಥಿ ಮುರುಳ್ಯ ಅವರು, ಮಾ.18ರಂದು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದು, ಈಗಿನ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದ ವೇಳೆ ಆಗ ಪ್ರತಿಭಟನಾ ನಿರತರಾಗಿದ್ದ ಪುನರ್ವಸತಿ ಕಾರ್ಯಕರ್ತರನ್ನು ಭೇಟಿ ಮಾಡಿ, ಮುಂದಿನ ಅವಧಿಯಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದಲ್ಲಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ ಈ ಭಾರಿಯ ಬಜೆಟ್‌ನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ವಿಕಲಚೇತನರಿಗೆ ವೇತನ ಹೆಚ್ಚಳ ಸೇರಿದಂತೆ ಅವರ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದ್ದರು. ವಿಕಲಚೇತನರ ಪರವಾಗಿ ಶಾಸಕಿ ಭಾಗೀರಥಿ ಮುರುಳ್ಯ ಅವರು ವಿಧಾನಸಭೆಯಲ್ಲಿ ಧ್ವನಿ ಎತ್ತಿರುವುದಕ್ಕೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದು ಶಾಸಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.