ದ.ಕ.ಜಿಲ್ಲೆ ಜನರು ಪ್ರಕೃತಿ ಆರಾಧಾಕರು- ಉಪವಲಯ ಅರಣ್ಯಾಧಿಕಾರಿ ಮದನ್
ನಿಡ್ಪಳ್ಳಿ: ಪ್ರತಿಯೊಬ್ಬರೂ ಅರಣ್ಯವನ್ನು ಅವಲಂಬಿತರಾಗಿರುತ್ತಾರೆ. ಆದುದರಿಂದ ಅರಣ್ಯವನ್ನು ನಾಶ ಮಾಡದೆ ಉಳಿಸಿ ಬೆಳೆಸಬೇಕು. ಅದರಲ್ಲೂ ದ.ಕ. ಜಿಲ್ಲೆಯವರು ಪ್ರಕೃತಿ ಆರಾಧಕರು ಎಂದು ಪುತ್ತೂರು ಉಪವಲಯ ಅರಣ್ಯಾಧಿಕಾರಿ ಮದನ್ ಹೇಳಿದರು.
ಅವರು ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವತಿಯಿಂದ ನಡೆದ ಮಹಿಳಾ ಮತ್ತು ಹೆಣ್ಣು ಮಕ್ಕಳ ಸ್ನೇಹಿ ಕಾರ್ಯಕ್ರಮದ ಅಂಗವಾಗಿ ನಡೆದ ರಾಷ್ಟ್ರೀಯ ಅರಣ್ಯ ದಿನ ಪ್ರಯುಕ್ತ ಅರಿವು ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕಿ ಉದ್ಘಾಟಿಸಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕಾಡು ನಾಶವಾದರೆ ಪ್ರಾಣಿ ಪಕ್ಷಿಗಳು ನಾಶವಾಗುತ್ತವೆ. ಕೆಲವು ಪ್ರಾಣಿ ಪಕ್ಷಿಗಳು ಹೆಚ್ಚಿನ ದೇವರಿಗೆ ವಾಹನಗಳಾಗಿದ್ದವು ಎಂಬುದನ್ನು ನಾವು ಕಥೆಗಳಲ್ಲಿ ತಿಳಿದಿದ್ದೇವೆ. ನಾಗ ದೇವರಿಗೆ ಹಿಂದೆ ನಾಗಬನಗಳು ಇತ್ತು. ಆದಕ್ಕೆ ಅದರದೆ ಆದ ವೈಜ್ಞಾನಿಕ ಕಾರಣಗಳು ಇರುತ್ತದೆ. ಹಿಂದಿನ ಪದ್ದತಿ, ಆಚರಣೆಗಳು ಬಹಳ ಮಹತ್ವ ಪಡೆದಿದ್ದು ಅಂತಹ ವಿಚಾರಗಳನ್ನು ನಾವು ತಲೆಯಲ್ಲಿ ಇಟ್ಟುಕೊಂಡು ನಾವು ಪರಿಸರ ರಕ್ಷಣೆ ಮಾಡುವುದರೊಂದಿಗೆ ಅರಣ್ಯವನ್ನು ಉಳಿಸಿ ಬೆಳೆಸುವಂತೆ ಮಾಹಿತಿ ನೀಡಿದರು. ಅಲ್ಲದೆ ಹೆಚ್ಚಿನ ಪ್ರಾಣಿಗಳ ಗುಣಲಕ್ಷಣಗಳ ಬಗ್ಗೆ ತಿಳಿಸಿದರು. ಅರಣ್ಯ ಬೆಳೆಸಲು ಅರಣ್ಯ ಇಲಾಖೆ ಸಹಕಾರ ನೀಡುವ ಬಗ್ಗೆ ಭರವಸೆ ನೀಡಿದರು.
ಪಂಚಾಯತ್ ಸದಸ್ಯ ವಿನೋದ್ ರೈ ಗುತ್ತು ಮಾತನಾಡಿ, ಪರಿಸರದ ಸಮತೋಲನ ಕಾಪಾಡಲು ನಾವು ಕಾಡು ಬೆಳೆಸ ಬೇಕು. ಅರಣ್ಯ ಬೆಳೆಸಿದರೆ ಮಾತ್ರ ನಮ್ಮ ಪರಿಸರ ರಕ್ಷಣೆ ಮಾಡಲು ಸಾಧ್ಯ. ಪ್ರತಿಯೊಬ್ಬರೂ ಸಸಿ ನೆಡುವ ಮೂಲಕ ಅರಣ್ಯ ಸಂಪತ್ತನ್ನು ಹೆಚ್ಚಿಸಲು ಸಹಾಯ ಆಗುತ್ತದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀ ಸರಳಿಕಾನ ಮಾತನಾಡಿ, ಅರಣ್ಯದ ಉಳಿವು ಮತ್ತು ಪರಿಸರ ರಕ್ಷಣೆ ಮಾಡಲು ಅರಿವು ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಪಂಚಾಯತ್ ಹಮ್ಮಿಕೊಂಡಿದೆ. ಬೇಸಿಗೆ ಕಾಲದಲ್ಲಿ ಪಕ್ಷಿಗಳಿಗೆ ನೀರು ಸಿಗುವಂತಾಗಲು ಮನೆಯ ಸುತ್ತ ಮುತ್ತ ಪಾತ್ರೆಗಳಲ್ಲಿ ಅಥವಾ ತೆಂಗಿನ ಗೆರಸೆ ನೇತಾಡಿಸಿ ಅದರಲ್ಲಿ ನೀರು ಇಡ ಬಹುದು. ಈ ರೀತಿಯ ಕಾರ್ಯಕ್ರಮವನ್ನು ನಾವು ಹಮ್ಮಿಕೊಳ್ಳಬೇಕು. ಮರಗಳನ್ನು ಬೆಳೆಸುವ ಮೂಲಕ ನಾವು ಅರಣ್ಯ ಸಂಪತ್ತನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಸಹಕಾರ ನೀಡುವಂತೆ ಹೇಳಿದರು.
ಪಂಚಾಯತ್ ಸದಸ್ಯರಾದ ಮೊಯಿದುಕುಂಞ, ಮಹಾಲಿಂಗ ನಾಯ್ಕ, ಸುಮಲತಾ, ಉಮಾವತಿ, ಪಂಚಾಯತ್ ಸಿಬ್ಬಂದಿಗಳಾದ ಸಂದೀಪ್, ಚಂದ್ರಾವತಿ, ಗ್ರಂಥಪಾಲಕಿ ಪ್ರೇಮಲತಾ, ಗ್ರಾಮ ಆಡಳಿತಾಧಿಕಾರಿ ಕಚೇರಿಯ ಸಿಬ್ಬಂದಿ ಕಾವ್ಯ, ಎಲ್.ಸಿ.ಅರ್.ಪಿ ಶಕುಂತಲಾ, ಎಲ್.ಸಿ.ಅರ್.ಪಿ ಲೋಲಾಕ್ಷಿ, ಕೃಷಿ ಸಖಿ ಸೌಮ್ಯ, ಪಶುಸಖಿ ಉಮಾವತಿ.ಯು, ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಸುನೀಶ್ ಬಾಬು, ಪ್ರಜ್ಞಾ.ಬಿ, ದೇವಪ್ಪ, ಸಂಜೀವಿನಿ ಒಕ್ಕೂಟದ ಚೈತ್ರಾ ಹಾಗೂ ಪದಾಧಿಕಾರಿಗಳು, ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಭಾಗವಹಿಸಿದರು.
ಪಂಚಾಯತ್ ಕಾರ್ಯದರ್ಶಿ ಬಾಬು ನಾಯ್ಕ ಸ್ವಾಗತಿಸಿ ವಂದಿಸಿದರು.