ಕೆರೆಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ -ನೀರಿನಿಂದ ತುಂಬಿರುವ ಒಳಮೊಗ್ರು ಗ್ರಾಮದ ಅಜಲಡ್ಕ ಕೆರೆ

0

ಪುತ್ತೂರು: ಬಿಸಿಲ ತಾಪ ಜಾಸ್ತಿಯಾಗುತ್ತಿದ್ದಂತೆ ಕೆರೆ, ಬಾವಿ, ನದಿಗಳಲ್ಲಿನ ನೀರಿನ ಮಟ್ಟ ಕೂಡ ದಿನದಿಂದ ದಿನಕ್ಕೆ ಇಳಿಯುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಾರ್ಚ್ ತಿಂಗಳಲ್ಲೇ ಅಂತರ್ಜಲ ಕುಸಿತದ ಭೀತಿಯಲ್ಲಿದೆ. ಈಗಾಗಲೇ ಗ್ರಾಮಾಂತರ ಪ್ರದೇಶದ ಬಾವಿ,ಕೆರೆಗಳಲ್ಲಿ ನೀರು ತಳ ಮಟ್ಟ ತಲುಪಿದೆ.ಎಪ್ರಿಲ್ ತಿಂಗಳಾಂತ್ಯಕ್ಕೆ ಮಳೆ ಬರದೇ ಇದ್ದರೆ ಬಾವಿ, ಕೆರೆಗಳಲ್ಲಿ ನೀರು ಬತ್ತಿ ಹೋಗುವ ಸಂಭವವಿದೆ. ಈ ನಿಟ್ಟಿನಲ್ಲಿ ನೀರು ಇಂಗಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕಿದೆ. ಓಡುವ ನೀರನ್ನು ತಡೆದು ಭೂಮಿಯೊಳಗೆ ಮತ್ತೆ ಇಂಗಿಸದಿದ್ದರೆ ಮುಂದಿನ ದಿನಗಳಲ್ಲಿ ಜಲಕ್ಷಾಮ ಕಟ್ಟಿಟ್ಟ ಬುತ್ತಿಯಾಗಿದೆ. ನೀರಿಂಗಿಸುವಲ್ಲಿ ಕೆರೆಗಳ ಪಾತ್ರ ಬಹಳ ಮಹತ್ವದ್ದು ಆಗಿದ್ದು ಈ ನಿಟ್ಟಿನಲ್ಲಿ ಕೆರೆಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕಿದೆ. ಕೆರೆಗಳು ಭದ್ರವಾಗಿದ್ದರೆ ಮಾತ್ರ ನೀರನ್ನು ಸಂರಕ್ಷಿಸಿಕೊಳ್ಳಲು ಸಾಧ್ಯ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ.


ಗ್ರಾಮಾಭಿವೃದ್ದಿ ಯೋಜನೆಯ ನಮ್ಮೂರ ನಮ್ಮ ಕೆರೆ
ಕೆರೆಗಳ ಸಂರಕ್ಷಣೆಯ ದೃಷ್ಟಿಯಲ್ಲಿ ಈಗಾಗಲೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪ್ರಯತ್ನ ಪಡುತ್ತಿದ್ದು ‘ನಮ್ಮೂರ ನಮ್ಮ ಕೆರೆ’ ಯೋಜನೆಯಡಿ ಈಗಾಗಲೇ ರಾಜ್ಯದಲ್ಲಿ ೮೦೪ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಪುತ್ತೂರು ತಾಲೂಕಿನಲ್ಲಿ ಒಟ್ಟು ೪ ಕೆರೆಗಳನ್ನು ಅಭಿವೃದ್ದಿ ಪಡಿಸಲಾಗಿದೆ. ಅವುಗಳೆಂದರೆ ಅಜಲಡ್ಕ, ಕೌಡಿಚ್ಚಾರು, ಸೇಡಿಯಾಪು ಮತ್ತು ಉಪ್ಪಿನಂಗಡಿಯಲ್ಲಿರುವ ಕೆರೆಗಳನ್ನು ಅಭಿವೃದ್ದಿ ಪಡಿಸಲಾಗಿದೆ. ಪುರಾತನವಾದ ಕೆರೆಗಳನ್ನು ಉಳಿಸಿಕೊಳ್ಳಬೇಕು ಅವುಗಳ ಮೂಲಕ ಪ್ರಾಣಿ ಪಕ್ಷಿಗಳಿಗೆ ಹಾಗೇ ಸ್ಥಳೀಯ ರೈತಾಪಿ ಜನರಿಗೆ ನೀರಿನ ಅನುಕೂಲವಾಗಬೇಕು ಎಂಬ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆರ್ಥಿಕ ಸಹಕಾರ ಹಾಗೇ ಸ್ಥಳೀಯ ಪಂಚಾಯತ್ ಮತ್ತು ಆ ಭಾಗದ ರೈತಾಪಿ ಜನರ ಸಹಕಾರ ಪಡೆದುಕೊಂಡು ಕೆರೆಗಳನ್ನು ಪುನಶ್ಚೇತನಗೊಳಿಸಲಾಗುತ್ತಿದೆ.


ನೀರಿನಿಂದ ತುಂಬಿರುವ ಅಜಲಡ್ಕದ ಕೆರೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆರ್ಥಿಕ ಸಹಕಾರದೊಂದಿಗೆ ಒಳಮೊಗ್ರು ಗ್ರಾಮ ಪಂಚಾಯತ್ ಮತ್ತು ಅಜಲಡ್ಕ ಕೆರೆ ಸಮಿತಿ, ಅಭಿವೃದ್ಧಿ ಸಮಿತಿ ಇವರ ಸಹಕಾರದೊಂದಿಗೆ ಒಳಮೊಗ್ರು ಗ್ರಾಪಂ ವ್ಯಾಪ್ತಿಯ ಅಜಲಡ್ಕದಲ್ಲಿ ಅಭಿವೃದ್ದಿ ಪಡಿಸಿದ ೫೪೧ ನೇ ನಮ್ಮೂರ ನಮ್ಮ ಕೆರೆ ಈ ಮಾರ್ಚ್ ತಿಂಗಳಿನಲ್ಲೂ ನೀರಿನಿಂದ ತುಂಬಿಕೊಂಡಿದೆ. ಸುಮಾರು ೪,೪೦ ಲಕ್ಷ ರೂ.ವೆಚ್ಚದಲ್ಲಿ ಈ ಕೆರೆ ನಿರ್ಮಾಣಗೊಂಡಿದ್ದು ಯೋಜನೆಯಿಂದ ೩,೨೦ ಲಕ್ಷ ರೂ ಮತ್ತು ಗ್ರಾಪಂನಿಂದ ೧,೨೦ ಲಕ್ಷ ರೂ. ವಿನಿಯೋಗಿಸಲಾಗಿದೆ.
ನೀರಿಂಗಿಸುವಲ್ಲಿ ಕೆರೆಗಳ ಪಾತ್ರ ಮಹತ್ವದ್ದಾಗಿದೆ.


ಹರಿದು ಹೋಗುವ ಮಳೆ ನೀರನ್ನು ಭೂಮಿಯೊಳಗೆ ಇಂಗಿಸುವಲ್ಲಿ ಕೆರೆಗಳ ಪಾತ್ರ ಬಹಳ ಮಹತ್ವದ್ದಾಗಿದೆ. ಕೆರೆಗಳ ರಕ್ಷಣೆಯಿಂದ ಮಾತ್ರ ಮನುಕುಲದ ಉಳಿವು ಎಂಬಂತೆ ನಮ್ಮ ಜಮೀನು, ತೋಟಗಳಲ್ಲಿರುವ ಕೆರೆಗಳನ್ನು ರಕ್ಷಣೆ ಮಾಡಬೇಕಾಗಿದೆ. ನಾವು ಕೊಳವೆಬಾವಿಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತೇವೆ. ಆದರೆ ತೋಟದಲ್ಲಿನ ಕೆರೆ, ಬಾವಿಗಳ ಸಂರಕ್ಷಣೆಗೆ ಹೋಗುತ್ತಿಲ್ಲ. ಕೆರೆ ಬಾವಿಗಳು ಮಾತ್ರ ನಮ್ಮ ಜಲಮೂಲವನ್ನು ಅಂತರ್ಜಲವನ್ನು ಹೆಚ್ಚಿಸಬಲ್ಲವು ಎಂಬುದನ್ನು ನಾವು ಮರೆತು ಬಿಟ್ಟಿದ್ದೇವೆ. ಹೀಗೆ ಮುಂದುವರಿದರೆ ಮುಂದೊಂದು ದಿನ ಸಮುದ್ರದ ಉಪ್ಪು ನೀರನ್ನು ಶುದ್ದಿಕರಿಸಿ ಕುಡಿಯಬೇಕಾದ ದಿನ ದೂರವಿಲ್ಲ ಎನ್ನುವುದು ಬಲ್ಲವರ ಮಾತಾಗಿದೆ.


541ನೇ ನಮ್ಮೂರ ನಮ್ಮ ಕೆರೆ
ಗ್ರಾಮಾಭಿವೃದ್ದಿ ಯೋಜನೆಯಿಂದ 2023ರಲ್ಲಿ ಅಜಲಡ್ಕದಲ್ಲಿ ಪುನಶ್ಚೇತನಗೊಳಿಸಲಾಗಿರುವ ಕೆರೆಯು 541ನೇ ನಮ್ಮೂರ ನಮ್ಮ ಕೆರೆಯಾಗಿದೆ. ಈ ಕೆರೆಯು ಸುಮಾರು ೧.೭೧ ಎಕರೆ ವಿಸ್ತೀರ್ಣವಿರುವ ಬೃಹತ್ ಕೆರೆಯಾಗಿದೆ.ಮಳೆಗಾಲದಲ್ಲಿ ಕೆರೆ ಪೂರ್ತಿ ನೀರು ತುಂಬುತ್ತಿದ್ದು ವರ್ಷ ಪೂರ್ತಿ ಕೆರೆಯಲ್ಲಿ ನೀರು ತುಂಬಿಕೊಂಡಿರುತ್ತದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರ ನಮ್ಮ ಕೆರೆ ಯೋಜನೆಯಡಿ ಆಯಾ ಪಂಚಾಯತ್ ಮತ್ತು ಸ್ಥಳೀಯ ರೈತಾಪಿ ಜನರ ಸಹಕಾರ ಪಡೆದುಕೊಂಡು ಈಗಗಾಲೇ ತಾಲೂಕಿನಲ್ಲಿ ೪ ಕೆರೆಗಳ ಅಭಿವೃದ್ಧಿ ಪಡಿಸಲಾಗಿದೆ. ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವುದು, ಮಳೆಗಾಲದಲ್ಲಿ ನೀರು ಇಂಗಿಸುವ ಮೂಲಕ ಅಂತರ್ಜಲ ಹೆಚ್ಚಿಸುವುದು ಇವು ಯೋಜನೆಯ ಮುಖ್ಯ ಉದ್ದೇಶವಾಗಿದ್ದು ಈ ನಿಟ್ಟಿನಲ್ಲಿ ಕೆರೆಗಳ ಅಭಿವೃದ್ದಿ ಮಾಡಲಾಗುತ್ತಿದೆ. ಕೆರೆಗಳನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕಿದೆ.
ಶಶಿಧರ್ ಎಂ. ಯೋಜನಾಧಿಕಾರಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು

ನೀರು ಉಳಿಸುವ ನಿಟ್ಟಿನಲ್ಲಿ ಕೆರೆಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು ಅಜಲಡ್ಕ ಕೆರೆ ಸಂರಕ್ಷಣೆ ಜವಬ್ದಾರಿ ಪಂಚಾಯತ್‌ಗೆ ಸೇರಿದ್ದು ಅಗತ್ಯ ಬಿದ್ದಲ್ಲಿ ಮುಂದಿನ ದಿನಗಳಲ್ಲಿ ಹೂಳೆತ್ತುವುದು, ತಡೆಗೋಡೆ ರಚನೆ, ಕೆರೆ ಸುತ್ತ ಗಿಡ ನಾಟಿ ಇತ್ಯಾದಿಗಳಿಗೆ ಅವಕಾಶವಿದೆ. ಸದ್ಯಕ್ಕೆ ಕೆರೆಯು ವ್ಯವಸ್ಥಿತ ರೀತಿಯಲ್ಲಿದೆ. ಕೆರೆ,ಬಾವಿಗಳ ಸಂರಕ್ಷಣೆಯ ವಿಷಯದಲ್ಲಿ ಗ್ರಾಮಸ್ಥರು ಕೂಡ ಜವಬ್ದಾರಿ ತೆಗೆದುಕೊಳ್ಳುವುದು ಅತೀ ಅಗತ್ಯ.
ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಮ ಪಂಚಾಯತ್

✍️ ಸಿಶೇ ಕಜೆಮಾರ್

LEAVE A REPLY

Please enter your comment!
Please enter your name here