ತುಳುನಾಡ ಆಚಾರ- ವಿಚಾರ ಉಳಿಸುವ ಕಾರ್ಯವಾಗಬೇಕು: ನಟೇಶ್ ಪೂಜಾರಿ
ಉಪ್ಪಿನಂಗಡಿ: ಕಂಬಳವೆನ್ನುವುದು ರೈತಾಪಿ ವರ್ಗದ ಕ್ರೀಡೆಯಾಗಿದ್ದು, ನಮ್ಮ ತುಳುನಾಡ ನೆಲದ ಸಂಸ್ಕೃತಿಯಾಗಿದೆ. ದೈವಾರಾಧನೆ, ನಾಗಾರಾಧನೆಯಂತಹ ನಮ್ಮ ಆರಾಧನಾ ಸಂಪ್ರದಾಯಗಳಾದರೆ, ಕೋಳಿ ಅಂಕ, ಕಂಬಳ ಮುಂತಾದ ಜನಪದ ಕ್ರೀಡೆಗಳು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ವ್ಯವಸಾಯದೊಂದಿಗೆ ನಮ್ಮ ಆಚಾರ- ವಿಚಾರಗಳು ಬೆರೆತು ಹೋಗಿವೆ. ಆದರೆ ಗದ್ದೆಗಳು ಮರೆಯಾದಂತಹ ಈ ಕಾಲಘಟ್ಟದಲ್ಲಿಯೂ ನಮ್ಮ ಆಚಾರ- ವಿಚಾರ- ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಅದನ್ನು ಜಗದಗಲಕ್ಕೆ ಪಸರಿಸುವ ಕೆಲಸ ನಮ್ಮದಾಗಬೇಕು ಎಂದು ಬೆಂಗಳೂರಿನ ಉದ್ಯಮಿ, ಉಪ್ಪಿನಂಗಡಿ ವಿಜಯ- ವಿಕ್ರಮ ಕಂಬಳ ಸಮಿತಿಯ ಉಪಾಧ್ಯಕ್ಷರಾದ ನಟೇಶ್ ಪೂಜಾರಿ ತಿಳಿಸಿದರು.

ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ, ಶಾಸಕರೂ ಆದ ಅಶೋಕ್ ಕುಮಾರ್ ರೈ ಅವರ ಸಾರಥ್ಯದಲ್ಲಿ ಇಲ್ಲಿನ ಕೂಟೇಲುವಿನ ದಡ್ಡು ಬಳಿಯ ನೇತ್ರಾವತಿ ನದಿ ಕಿನಾರೆಯಲ್ಲಿ ಮಾ.೨೨ರಂದು ಚಾಲನೆಗೊಂಡ ‘ಉಬಾರ್ ಕಂಬಳೋತ್ಸವ’ದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ತುಳುವರ ಬದುಕಿನ ಜೀವನಾಡಿಯಾಗಿದ್ದ ಹಚ್ಚ ಹಸಿರಿನ ಗದ್ದೆಗಳು ಇಂದು ಮರೆಯಾಗಿ ಆ ಜಾಗದಲ್ಲಿ ಕಾಂಕ್ರೀಟ್ ಕಟ್ಟಡಗಳು ತಲೆಯೆತ್ತುತ್ತಿವೆ. ಪರಿಸ್ಥಿತಿಗೆ ತಕ್ಕಂತೆ ಕಾಲ ಬದಲಾದರೂ ತುಳುವರ ಮೂಲ ಸಂಸ್ಕೃತಿ, ಆಚಾರ- ವಿಚಾರಗಳು ಬದಲಾಗಬಾರದು. ತುಳು ಸೇವೆ ಅನ್ನುವುದು ಕೇವಲ ಭಾಷಣಗಷ್ಟೇ ಸೀಮಿತಗೊಳ್ಳದೆ ತುಳುವಿನ ಸಂಸ್ಕೃತಿ, ಜನಪದ ಕ್ರೀಡೆಗಳನ್ನು, ಆರಾಧನಾ ಪದ್ಧತಿಗಳನ್ನು ಉಳಿಸಿ ಬೆಳೆಸುವುದೇ ನಿಜವಾದ ತುಳು ಸೇವೆ. ಶಾಸಕರಾದ ಅಶೋಕ್ ಕುಮಾರ್ ರೈಯವರ ಮುಂದಾಳತ್ವದಲ್ಲಿ ನಡೆಯುವ ಈ ಕಂಬಳವು ಅವರ ದೂರದೃಷ್ಟಿತನದಿಂದ ಇಂದು ಕೇವಲ ಒಂದು ವರ್ಗಕ್ಕೆ ಮಾತ್ರ ಇವತ್ತು ಸೀಮಿತಗೊಂಡಿಲ್ಲ. ಇಲ್ಲಿ ಸಸ್ಯ ಮೇಳ, ಆಹಾರ ಮೇಳ ಸೇರಿದಂತೆ ಎಲ್ಲರಿಗೂ ಮನೋರಂಜನೆ ಪಡೆಯುವ ಅವಕಾಶವಿದ್ದು, ಉಪ್ಪಿನಂಗಡಿ ಕಂಬಳವು ಈಗ ಉಬಾರ್ ಕಂಬಳೋತ್ಸವವಾಗಿ ಬದಲಾಗಿದೆ. ಇನ್ನು ಮುಂದಕ್ಕೂ ನಾವೆಲ್ಲಾ ಒಂದೇ ತಾಯಿಯ ಮಕ್ಕಳಂತೆ ಒಂದಾಗಿ ನಮ್ಮ ಆಚಾರ ವಿಚಾರಗಳನ್ನು ಉಳಿಸುವ ಕೆಲಸ ಮಾಡಬೇಕು ಎಂದರು.
ರಾಜ್ಯ ಧಾರ್ಮಿಕ ಪರಿಷತ್‌ನ ಸದಸ್ಯರಾದ ಮಲ್ಲಿಕಾ ಶೆಟ್ಟಿ ಮಲಾರುಬೀಡು ಮಾತನಾಡಿ, ಹಿಂದಿನ ಕಾಲದಲ್ಲಿ ಕಂಬಳವೆನ್ನುವುದು ಪುರುಷರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಎಲ್ಲರಿಗೂ ಇದರಲ್ಲಿ ಪಾಲ್ಗೊಳ್ಳುವ ಅವಕಾಶ ಒದಗಿ ಬಂದಿದೆ. ಕರಾವಳಿಗೆ ಮಾತ್ರ ಸೀಮಿತವಾಗಿದ್ದ ಕಂಬಳ ಕ್ರೀಡೆಯನ್ನು ರಾಜ್ಯದ ರಾಜಧಾನಿಗೂ ಪರಿಚಯಿಸಿದ ಕೀರ್ತಿ ಅಶೋಕಣ್ಣನದ್ದು. ಕಂಬಳವು ನಿಲ್ಲುವ ಹಂತಕ್ಕೆ ಬಂದಿದ್ದಾಗ ಕಾನೂನು ಹೋರಾಟ ಮಾಡಿ ಮತ್ತೆ ಕಂಬಳವನ್ನು ಮತ್ತೆ ಆಗುವಂತೆ ಮಾಡಿದವರು ಕೂಡಾ ಅಶೋಕಣ್ಣನೇ. ಆಡು ಮುಟ್ಟದ ಸೊಪ್ಪಿಲ್ಲವೆಂಬಂತೆ ಎಲ್ಲಾ ಕ್ಷೇತ್ರಗಳಿಗೂ ಕೈ ಹಾಕಿ ಎಲ್ಲದ್ದರಲ್ಲೂ ಅವರು ಯಶಸ್ಸು ಸಾಧಿಸಿದ್ದಾರೆ. ಅವರ ಸಾರಥ್ಯದಲ್ಲಿ ನಡೆಯುವ ಉಪ್ಪಿನಂಗಡಿ ಈ ಕಂಬಳವು ಇನ್ನಷ್ಟು ಬೆಳೆಯಲಿ ಎಂದರು.
ಉದ್ಯಮಿ ಧನ್ಯಕುಮಾರ್ ರೈ ಬಿಳಿಯೂರುಗುತ್ತು ಮಾತನಾಡಿ, ಶಾಸಕರಾದ ಅಶೋಕ್ ಕುಮಾರ್ ರೈಯವರ ಯೋಜನೆ, ಯೋಚನೆಗಳು ಅದ್ಭುತ. ಅವರು ಒಂದು ಕೆಲಸ ಮಾಡುತ್ತೇನೆ ಎಂದು ಹೇಳಿದಾಗ ಮೊದಲಿಗೆ ಇದು ಸಾಧ್ಯನಾ ಅಂತ ನಾವೇ ಪ್ರಶ್ನಿಸಿಕೊಂಡದ್ದು ಇದೆ. ಆದರೆ ಹಠ ಬಿಡದ ಅವರು ಅಸಾಧ್ಯವಾದದನ್ನೆಲ್ಲಾ ಸಾಧಿಸಿ ತೋರಿಸಿದ್ದಾರೆ. ಎಲ್ಲಾ ಕ್ಷೇತ್ರದಲ್ಲೂ ಯಶಸ್ಸಿನ ಹೆಜ್ಜೆ ಇಡುತ್ತಿರುವ ಅವರಿಗೆ ಇನ್ನಷ್ಟು ಯಶಸ್ಸು, ಕೀರ್ತಿ ದೇವರು ದಯಪಾಲಿಸಲಿ ಎಂದರು.
ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ರವೀಂದ್ರ ಶೆಟ್ಟಿ ನುಳಿಯಾಲು ಮಾತನಾಡಿ, ಶಾಸಕರಾದ ಅಶೋಕ್ ಕುಮಾರ್ ರೈಯವರು ಎಲ್ಲಾ ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸಿದ್ದಾರೆ. ಅವರು ಮುಟ್ಟಿದ್ದೆಲ್ಲಾ ಬಂಗಾರವಾಗುತ್ತಿದೆ. ಎಂಎಲ್‌ಎ ಆದವರು ಅಶೋಕ್ ಕುಮಾರ್ ರೈಯವರನ್ನು ನೋಡಿ ಕಲಿಯಬೇಕು ಎಂದು ಜನರು ಮಾತನಾಡಿಕೊಳ್ಳುವಷ್ಟರ ಮಟ್ಟಿಗೆ ಆಗಿದೆ. ಇದಕ್ಕೆ ಕಾರಣ ಅವರ ಕಠಿಣ ಪರಿಶ್ರಮ ಮತ್ತು ಛಲ ಬಿಡದ ಬದುಕು. ತಾನು ಶಾಸಕನಾದ ಬಳಿಕ ಪ್ರಥಮ ವಿಧಾನ ಸಭಾ ಅಧಿವೇಶನದಲ್ಲೇ ೧೧ ಪ್ರಶ್ನೆಗಳನ್ನು ಕೇಳುವ ಮೂಲಕ ಸಭಾ ಕಂಪನವನ್ನೇ ಸೃಷ್ಟಿ ಮಾಡಿದ್ದಾರೆ. ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಅನ್ನು ತಂದ ಕೀರ್ತಿ ಕೂಡಾ ಅಶೋಕ್ ಕುಮಾರ್ ರೈ ಅವರದ್ದಾಗಿದೆ. ಒಬ್ಬ ಬೆಳೆಯುತ್ತಾನೆ ಎಂದಾಗ ಸಮಾಜದಲ್ಲಿ ಟೀಕೆಗಳು ಸಹಜ. ಆದರೆ ಅಭಿವೃದ್ಧಿಯಲ್ಲಿ ರಾಜಕೀಯವಿರಬಾರದು. ಸಮಾಜದ ಅಭಿವೃದ್ಧಿಗೆ ತಮ್ಮಿಂದ ಆಗದ ಕಾರ್ಯ ಇನ್ನೊಬ್ಬ ಮಾಡಿದಾಗ ಟೀಕೆಯ ಬದಲು ಅಭಿನಂದನೆಯ ಚಪ್ಪಾಳೆ ತಟ್ಟುವ ಮನಸ್ಸುಗಳು ನಮ್ಮದಾಗಬೇಕು ಎಂದರು.
ಕಂಬಳ ಸಮಿತಿಯ ಅಧ್ಯಕ್ಷ, ಶಾಸಕರೂ ಆಗಿರುವ ಅಶೋಕ್ ಕುಮಾರ್ ರೈಯವರು ಮಾತನಾಡಿ, ತುಳುನಾಡಿನಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು, ಆದರೆ ಅಲ್ಲಿ ಅಭಿವೃದ್ಧಿಯ ಕೊರತೆಯಿಂದ ಅಲ್ಲಿಗೆ ಜನರನ್ನು ಸೆಳೆಯಲು ಸಾಧ್ಯವಾಗುತ್ತಿಲ್ಲ. ಉಪ್ಪಿನಂಗಡಿಯ ಸಂಗಮ ಕ್ಷೇತ್ರವು ದಕ್ಷಿಣದ ಕಾಶಿಯಾಗಿದ್ದು, ಇದು ಉತ್ತರದ ಕಾಶಿಯಂತೆ ಪಾವಿತ್ರ್ಯತೆಯನ್ನು ಪಡೆದಿದೆ. ಶಾಸಕನಾಗಿ ಇಲ್ಲಿಯ ಅಭಿವೃದ್ಧಿಯ ಬಗ್ಗೆಯೂ ಚಿಂತನೆ ನಡೆಸಿದ್ದೇನೆ ಎಂದರಲ್ಲದೆ, ಈ ಬಾರಿ ಮಾತ್ರ ಅರಮನೆ ಮೈದಾನದ ಜಾಗದ ಬಗ್ಗೆ ವ್ಯತ್ಯಾಸ ಇರುವುದರಿಂದ ಬೆಂಗಳೂರಿನಲ್ಲಿ ಕಂಬಳ ನಡೆಸಲು ಸಾಧ್ಯವಾಗಿಲ್ಲ. ಇದೆಲ್ಲಾ ಸರಿಯಾದರೆ ಮುಂದಿನ ಬಾರಿಯ ಕಂಬಳ ಋತುವಿನಲ್ಲಿ ಮೊದಲು ಬೆಂಗಳೂರಿನಲ್ಲಿಯೇ ಕಂಬಳವನ್ನು ಆಯೋಜಿಸುತ್ತೇನೆ. ಪ್ರತಿ ಕಂಬಳಕ್ಕೆ ೫ ಲಕ್ಷ ರೂ. ಬರಲು ಬಾಕಿ ಇದ್ದು, ಈ ಬಗ್ಗೆ ಕೂಡಾ ಸಾಕಷ್ಟು ಬಾರಿ ಸಚಿವರು, ಅಧಿಕಾರಿಗಳೊಂದಿಗೆ ಗಲಾಟೆ ಮಾಡಿದ್ದೇನೆ. ಕಂಬಳಕ್ಕೆ ಕೇವಲ ಐದು ಲಕ್ಷವಲ್ಲ. ಐದು ಕೋಟಿಯನ್ನು ಮೀಸಲಿಡಬೇಕು. ಜಾತಿ, ಧರ್ಮಗಳ ನಡುವಿನ ಸಂಘರ್ಷ ಇಲ್ಲಿಗೆ ಎಂಬ ಹಣೆಪಟ್ಟಿಯನ್ನು ಬಿಟ್ಟರೆ, ತುಳುವರು ನಂಬಿಕಸ್ಥರಾಗಿದ್ದು, ಅವರಲ್ಲಿ ಮೋಸದ ಗುಣವಿಲ್ಲ. ಪ್ರಾಮಾಣಿಕತೆ, ವಿದ್ಯೆ ಅವರಲ್ಲಿದೆ. ಅವರಿಗೆ ಮೋಸದ ಗುಣವಿಲ್ಲ. ಆದರೆ ನಮ್ಮ ಶಕ್ತಿಯನ್ನು ಜಗತ್ತಿಗೆ ತೋರಿಸುವ ಪ್ರಯತ್ನ ಮಾತ್ರ ಆಗಿಲ್ಲ. ಅವರವರ ಧರ್ಮ ಅವರವರಿಗೆ ಶ್ರೇಷ್ಠವೇ. ಆದರೆ ಇನ್ನೊಂದು ಧರ್ಮವನ್ನು ಅಗೌರವದಿಂದ ನೋಡುವ ಮನೋಸ್ಥಿತಿ ನಮ್ಮದಾಗಿರಬಾರದು ಎಂದರು.
ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಉಪ್ಪಿನಂಗಡಿ ಪೊಲೀಸ್ ಉಪ ನಿರೀಕ್ಷಕ ಅವಿನಾಶ್ ಎಚ್. ಗೌಡ ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಲಲಿತಾ, ಪ್ರವೀಣ್ ಕುಮಾರ್ ಕದಿಕ್ಕಾರು ಬೀಡು, ರಾಜೇಶ್ ಶೆಟ್ಟಿ, ಶ್ರೀ ಮಹಿಷಮರ್ದಿನಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಸಂಕಪ್ಪ ಶೆಟ್ಟಿ, ಕಾಂಗ್ರೆಸ್‌ನ ನಗರಾಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಕಂಬಳ ಸಮಿತಿಯ ಗೌರವಾಧ್ಯಕ್ಷ ಎನ್. ಉಮೇಶ್ ಶೆಣೈ, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಉಪಾಧ್ಯಕ್ಷರಾದ ವಿದ್ಯಾಧರ ಜೈನ್ ಪದ್ಮವಿದ್ಯಾ, ಮುರಳೀಧರ ರೈ ಮಠಂತಬೆಟ್ಟು, ರಾಮಚಂದ್ರ ಮಣಿಯಾಣಿ, ಸುದೇಶ್ ಶೆಟ್ಟಿ ಶಾಂತಿನಗರ, ಜಗನ್ನಾಥ ಶೆಟ್ಟಿ ನಡುಮನೆ, ಮೋನಪ್ಪ ಗೌಡ ಪಮ್ಮನಮಜಲು, ಕಾರ್ಯದರ್ಶಿಗಳಾದ ಶಿವರಾಮ ಶೆಟ್ಟಿ ಕರಾಯ, ಚಂದ್ರಶೇಖರ ಮಡಿವಾಳ, ಜೊತೆ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಕಂಗ್ವೆ, ಸಂಘಟನಾ ಕಾರ್ಯದರ್ಶಿಗಳಾದ ಯೊಗೀಶ್ ಎಸ್. ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು, ಕೃಷ್ಣಪ್ರಸಾದ್ ಬೊಳ್ಳಾವು, ದಿಲೀಪ್ ಶೆಟ್ಟಿ ಕರಾಯ, ವಿಜಯ ಪೂಜಾರಿ, ಸಹ ಸಂಚಾಲಕರಾದ ಜಯಪ್ರಕಾಶ್ ಬದಿನಾರು, ಕುಮಾರನಾಥ ಪಲ್ಲತ್ತಾರು, ಪಶು ವೈದ್ಯಾಧಿಕಾರಿ ಡಾ. ಧರ್ಮಪಾಲ್, ಪ್ರಮುಖರಾದ ಅನಿ ಮಿನೇಜಸ್, ನಝೀರ್ ಮಠ, ವಿಕ್ರಂ ಶೆಟ್ಟಿ ಅಂತರ, ಕೃಷ್ಣ ಜಿ. ರಾವ್ ಆರ್ತಿಲ, ಸಂದೀಪ್ ಕುಪ್ಟೆಟ್ಟಿ, ರೂಪೇಶ್ ರೈ ಅಲಿಮಾರ್ ಮತ್ತಿತರರು ಉಪಸ್ಥಿತರಿದ್ದರು. ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು ಸ್ವಾಗತಿಸಿದರು. ನಿಹಾಲ್ ಶೆಟ್ಟಿ ವಂದಿಸಿದರು. ಕಂಬಳ ಸಮಿತಿಯ ಗೌರವ ಸಲಹೆಗಾರ ನಿರಂಜನ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು.
ಅಭಿವೃದ್ಧಿಯಲ್ಲಿ ಶಾಸಕರು ಬಹಳ ಸ್ಪೀಡ್: ರಾಧಾಕೃಷ್ಣ ನಾೖಕ್
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ನಡೆದ ಕಂಬಳದ ಮೆರವಣಿಗೆಗೆ ಚಾಲನೆ ನೀಡಿ ಹಾಗೂ ಕಂಬಳ ಕರೆಯಲ್ಲಿ ಕಂಬಳಕ್ಕೆ ಚಾಲನೆ ನೀಡಿ ಮಾತನಾಡಿದ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾೖಕ್ ಅವರು, ಈ ನೆಲದ ಮಣ್ಣಿನ ಕ್ರೀಡೆ ಕಂಬಳ ಬಹಳ ಹಿಂದೆ ಕಷ್ಟದಲ್ಲಿ ಯಾವುದೇ ಆಧುನಿಕ ವ್ಯವಸ್ಥೆಗಳು ಇಲ್ಲದೆ ನಡೆಯುತ್ತಿತ್ತು, ಇದೀಗ ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ. ಇದಕ್ಕೆಲ್ಲ ನಾಂದಿ ಹಾಡಿದವರು ಇಲ್ಲಿನ ಕಂಬಳ ಸಮಿತಿಯ ಅಧ್ಯಕ್ಷ, ಶಾಸಕರೂ ಆಗಿರುವ ಅಶೋಕ್ ಕುಮಾರ್ ರೈಯವರು, ಕಂಬಳದ ಬಗ್ಗೆ ಇದ್ದ ಅಪಸ್ವರದ ವಿರುದ್ಧ ಸುಪ್ರೀಂ ಕೋರ್ಟು ತನಕ ಹೋಗಿ ಗೆದ್ದು ಬಂದಿದ್ದಾರೆ. ಇದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮಗೆಲ್ಲರಿಗೂ ಇದೆ ಎಂದರಲ್ಲದೆ, ಅಶೋಕ್ ಕುಮಾರ್ ರೈಯವರು ೩೫೦ ಕೋ.ರೂ. ನಲ್ಲಿ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಿಧಿಯ ಅಭಿವೃದ್ಧಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅದಕ್ಕೆ ಮುಖ್ಯಮಂತ್ರಿಯವರ ಅಧಿಕೃತ ಅಂಕಿತ ಬಿದ್ದಿದೆ. ಇದಕ್ಕಾಗಿ ಶಾಸಕರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರಲ್ಲದೆ, ಪ್ರತಿಯೊಂದು ಕ್ಷೇತ್ರದಲ್ಲಿಯೂ ಯಶಸ್ಸು ಸಾಧಿಸಿರುವ ನಮ್ಮ ಶಾಸಕರ ಕೆಲಸಗಳು ಬಹಳ ಸ್ಪೀಡ್ ಆಗಿದ್ದು, ಆದ್ದರಿಂದ ಅವರ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳು ಬಹಳ ವೇಗವಾಗಿ, ಯೋಜನಾಬದ್ಧವಾಗಿ ನಡೆಯಲು ಸಾಧ್ಯವಾಗಿದೆ ಎಂದರು.
ಆಕರ್ಷಕ ಮೆರವಣಿಗೆ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದಿಂದ ರಥಬೀದಿ, ಬ್ಯಾಂಕ್ ರಸ್ತೆಯಾಗಿ, ರಾಷ್ಟ್ರೀಯ ಹೆದ್ದಾರಿಯಾಗಿ ಕೂಟೇಲುವಿನ ಕಂಬಳ ಕರೆಯವರೆಗೆ ಆಕರ್ಷಕ ಮೆರವಣಿಗೆ ನಡೆಯಿತು. ಕೊಂಬು ಕಹಳೆ, ಬ್ಯಾಂಡ್ ವಾದ್ಯಗಳಲ್ಲದೆ, ಕೀಲು ಕುದುರೆ, ತಟ್ಟಿರಾಯ, ಗೊಂಬೆ ಕುಣಿತಗಳು ಮೆರವಣಿಗೆಗೆ ಆಕರ್ಷಣೆ ಒದಗಿಸಿದವು. ಕಂಬಳಾಭಿಮಾನಿಗಳು ಮೆರವಣಿಗೆ ಪಾಲ್ಗೊಂಡರು.
ಸಸ್ಯ ಮೇಳ, ಆಹಾರ ಮೇಳ, ಬೋಟಿಂಗ್
ಕಂಬಳದ ಜೋಡುಕರೆಯಲ್ಲಿ ಕಂಬಳ ಕೋಣಗಳ ಓಟ ನಡೆಯುತ್ತಿದ್ದರೆ, ಇತ್ತ ಕಡೆ ನೇತ್ರಾವತಿ ನದಿ ಹಿನ್ನೀರಿನಲ್ಲಿ ಬೋಟಿಂಗ್, ದಡದಲ್ಲಿ ಸಸ್ಯ ಮೇಳ, ಆಹಾರ ಮೇಳ, ಮಕ್ಕಳ ಮನೋರಂಜನೆಗಾಗಿ ಪುಟಾಣಿ ರೈಲು, ಕೊಲಂಬಸ್ ನೌಕೆಗಳೂ ಕೂಡಾ ಇದ್ದು, ಕಂಬಳಕ್ಕೆ ಬಂದವರು ಜಾತ್ರೆಯ ಸವಿಯನ್ನು ಉಂಡರು.
ಸ್ವಚ್ಛತೆಗೆ ಆದ್ಯತೆ
ಕಂಬಳದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕಂಬಳ ನಡೆಯುವ ಜಾಗದ ಪ್ರವೇಶ ದ್ವಾರದ ಸಮೀಪವೇ ಲಾರಿಯಲ್ಲಿಯೇ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದು ತುಂಬಿದಾಗ ಅದನ್ನು ನೇರವಾಗಿ ಮಲ ತ್ಯಾಜ್ಯ ಘಟಕಕ್ಕೆ ಕೊಂಡೋಗುವ ವ್ಯವಸ್ಥೆ ಮಾಡಲಾಗಿದೆ. ಇನ್ನೊಂದೆಡೆ ಶುದ್ಧ ಕುಡಿಯುವ ನೀರಿಗೂ ವ್ಯವಸ್ಥೆ ಮಾಡಲಾಗಿದೆ.