ಪುತ್ತೂರು: ನಗರ ಸಭಾ ವ್ಯಾಪ್ತಿಯ ತಾರಿಗುಡ್ಡೆಯಿಂದ ಕೇಪುಳು, ಊರಮಾಲ್ ಸಂಪರ್ಕ ರಸ್ತೆಯಲ್ಲಿ ನಿಯಮ ಬಾಹಿರವಾಗಿ ಚರಂಡಿ ಕಾಮಗಾರಿ ನಡೆಯತ್ತಿರುವುದನ್ನು ವಿರೋಧಿಸಿ ಮಾ.22ರಂದು ಸ್ಥಳೀಯ ಸಾರ್ವಜನಿಕರು ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿದರು.
ಕೃಷ್ಣಪ್ರಸಾದ್ ಕೆರಮೂಲೆ ಮಾತನಾಡಿ, ಕೆರೆಮೂಲೆಯಿಂದ ಕೇಪುಳು ಮುಖ್ಯರಸ್ತೆಗೆ ಸಂಪರ್ಕವಿರುವ ರಸ್ತೆಯಾಗಿದ್ದು ರಸ್ತೆ ಬ್ಲಾಕ್ ಆದಾಗ ಪೇಟೆ ಸಂಪರ್ಕಿಸುವ ಈ ರಸ್ತೆಯು ಬಹಳಷ್ಟು ಅನುಕೂಲವಾಗಲಿರುವ ಈ ರಸ್ತೆಯಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದ್ದು ಅದನ್ನು ನಿಯಮ ಪ್ರಕಾರ ಮಾಡುತ್ತಿಲ್ಲ. ಏಳೂವರೆ ಮೀಟರ್ ಅಗಲದ ರಸ್ತೆ ಬಿಟ್ಟು ಚರಂಡಿ ಮಾಡಬೇಕು ಎಂಬ ನಿಯಮವಿದ್ದರೂ ಇಲ್ಲಿ ಐದು ಮೀಟರ್ ರಸ್ತೆ ಬಿಟ್ಟು ಚರಂಡಿ ಕಾಮಗಾರಿ ನಡೆಸುತ್ತಿದ್ದಾರೆ. ಇದರ ಬಗ್ಗೆ ಸೂಕ್ತ ಕ್ರಮವಹಿಸುವಂತೆ ನಗರ ಸಭಾ ಅಧ್ಯಕ್ಷರು, ಸ್ಥಳೀಯ ಸದಸ್ಯರು ಹಾಗೂ ಪೌರಾಯುಕ್ತರಿಗೆ ಮನವಿ ಮಾಡಲಾಗಿದೆ. ಆದರೆ ಇಲ್ಲಿ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯನ್ನು ಸ್ಥಗಿತಗೊಳಿಸಿ ನಿಯಮ ಪ್ರಕಾರ ಚರಂಡಿ ನಿರ್ಮಿಸಬೇಕು. ಐದು ಮೀಟರ್ ಅಂತರದಲ್ಲಿ ಚರಂಡಿ ನಿರ್ಮಿಸಿದರೆ ರಸ್ತೆಯು ಅಗಲ ಕಿರಿದಾಗಲಿದೆ. ಹೀಗಾಗಿ ಅಗೆಯುವಾಗಲೇ ನಗರ ಸಭೆಗೆ ಮನವಿ ಮಾಡಲಾಗಿದ್ದರೂ ಯಾವುದೇ ಕ್ರಮವಹಿಸಿಲ್ಲ. ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿದ್ದಾರೆ.
ಸ್ಥಳೀಯ ನಿವಾಸಿ ಉಷಾ ಗಂಗಾಧರ್ ಮಾತನಾಡಿ, ನಮ್ಮ ಮನೆ ಹಾಗೂ ತೋಟವೂ ಇಲ್ಲೇ ಇದ್ದು ರಾಸಾಯನಿಕಗೊಬ್ಬರಗಳನ್ನು ವಾಹನಗಳಲ್ಲಿ ಸಾಗಿಸಲು ಅಸಾಧ್ಯವಾಗುತ್ತಿದೆ. ರಸ್ತೆಯು ಅಗಲ ಕಿರಿದಾಗಿದ್ದು ಏಕ ಕಾಲಕ್ಕೆ ಎರಡು ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ರಸ್ತೆ ಬದಿ ವಾಹನ ನಿಲ್ಲಿಸಿ ಹೋದರೆ ಇನ್ನೊಂದು ವಾಹನ ಸಂಚಾರಕ್ಕೆ ತೊಂದರೆಯುಂಟಾಗುತ್ತಿದೆ. ಅಗಲ ಕಿರಿದಾದರೆ ತಿರುವಿನಲ್ಲಿ ವಾಹನ ತಿರುಗಿಸಲು ಕಷ್ಟವಾಗುತ್ತಿದೆ. ನಿಯಮದಂತೆ ಏಳೂವರೆ ಮೀಟರ್ ಅಗಲದ ರಸ್ತೆ ಬಿಟ್ಟು ನಂತರ ಚರಂಡಿ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಸ್ಥಳೀಯರಾದ ಜನಾರ್ದನ, ಉಷಾ ಗಂಗಾಧರ, ಮಂಜುಳಾ, ವೀಣಾ, ಸುಮಿತ್ರ, ಮಾನ್ಯ, ಮನೀಷ್, ಲಕ್ಷ್ಮೀಪ್ರಸಾದ್, ಮಾಣಿಕ್ಯ, ಯಮುನಾ, ಪ್ರತೀಕ್ಷಾ ಪ್ರವಣ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.