ಪುತ್ತೂರು: ಪ್ರಕೃತಿ ರಮಣೀಯವಾದ ಸುಂದರವಾದ ಬೆಟ್ಟಗುಡ್ಡಗಳಿಂದಾವೃತವಾದ ಹಸಿರುಸಿರಿ ಮೆತ್ತಿಕೊಂಡಿರುವ ವನಗಳಿಂದ ಕಂಗೊಳಿಸುತ್ತಿರುವ ಪ್ರಶಾಂತ ಪರಿಸರವೇ ಮುಗೇರು ಶ್ರೀ ಮಹಾವಿಷ್ಣುಮೂರ್ತಿಯು ನೆಲೆನಿಂತ ಪುಣ್ಯಕ್ಷೇತ್ರ. ಸವಣೂರು ಗ್ರಾಮದ ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಹಸ್ರ ವರುಷಗಳ ಇತಿಹಾಸವಿದೆ. ವಿಜಯನಗರ ದೊರೆಗಳ ಸಾಮಂತರಾದ ಪುತ್ತೂರು ಸೀಮೆಯ ಜೈನ ಬಲ್ಲಾಳ ಅರಸರು, ಸುಮಾರು ಕ್ರಿ.ಶ. 14 -15 ನೇ ಶತಮಾನದಲ್ಲಿ ಕಟ್ಟಿಸಿದ ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಾಲಯವು ರಾಜರ ಪಲ್ಲಕ್ಕಿ ಹೊರುತ್ತಿದ್ದ ರಾಜರ ಓಲೆಕಾರರಾಗಿ ಕಾರ್ಯನಿರ್ವಹಿಸುತ್ತಿದ್ದ, ಶ್ರೀ ದೇವರ ರಥ ಎಳೆಯುತ್ತಿದ್ದ ಬೋವಿ ಜನಾಂಗದ ಸುರ್ಪದಿಗೆ ಒಳಪಟ್ಟಿತ್ತು. ಈ ಹಿಂದೆ ಮುಗೇರುಗುತ್ತು ಮನೆತನದವರ ಆಡಳಿತಕ್ಕೆ ಒಳಪಟ್ಟಿತ್ತು. ಇದೀಗ ಸರಕಾರದ ಮುಜರಾಯಿ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸುಂದರ ದೇಗುಲ :
ಶ್ರೀ ಮಹಾವಿಷ್ಣುಮೂರ್ತಿ ಶಿಥಿಲಗೊಂಡ ಆಲಯವನ್ನು ಪುನರ್ ನಿರ್ಮಾಣ ಮಾಡುವ ಸಂಕಲ್ಪಕ್ಕೆ ಊರಿನವರು ಒಟ್ಟಾಗಿ ಸಂಕಲ್ಪ ಮಾಡಿದರು. ಉದ್ಯಮಿ ಸವಣೂರು ಕೆ. ಸೀತಾರಾಮ ರೈ ಅಧ್ಯಕ್ಷತೆಯಲ್ಲಿ ಹಾಗೂ ಯುವ ಉದ್ಯಮಿ ಎನ್. ಶಿವಪ್ರಸಾದ್ ಶೆಟ್ಟಿ ಕಿನಾರರವರ ಕಾರ್ಯದರ್ಶಿತನದಲ್ಲಿ ಮತ್ತು ಎಂ. ಮುರಳಿಮೋಹನ್ ಶೆಟ್ಟಿರವರ ಗೌರವಾಧ್ಯಕ್ಷತೆಯಲ್ಲಿ ಜೀರ್ಣೋದ್ಧಾರ ಸಮಿತಿ ರಚನೆಗೊಂಡು, ಜೀರ್ಣೋದ್ಧಾರ ಪುಣ್ಯಕಾರ್ಯ ಆರಂಭಗೊಂಡು, ಸುಮಾರು 1.50 ಕೋಟಿ ರೂ, ವೆಚ್ಚದಲ್ಲಿ ಸುಂದರ ದೇಗುಲ ನಿರ್ಮಾಣಗೊಂಡಿತು. 2014 ಮಾರ್ಚ್ 26 ರಂದು ದೇವಾಲಯದ ಬ್ರಹ್ಮಕಲಶೋತ್ಸವ ನಡೆಯಿತು.
2025 ಮಾ. 25 ಮತ್ತು 26 ರಂದು ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಾಲಯದಲ್ಲಿ 11 ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಬ್ರಹ್ಮಶ್ರೀ ನೀಲೇಶ್ವರ ಆರೋತ್ ಪದ್ಮನಾಭ ತಂತ್ರಿಗಳ ದಿವ್ಯ ನೇತೃತ್ವದಲ್ಲಿ ಸಂಭ್ರಮದಿಂದ ನಡೆಯಲಿದೆ. ದೇವಾಲಯದ ಅರ್ಚಕರಾಗಿ ಪದ್ಮನಾಭ ಕುಂಜತ್ತಾಯ, ಪವಿತ್ರಪಾಣಿಯಾಗಿ ರತ್ನಾಕರ ಕುಂಜತ್ತಾಯರಾಗಿರುತ್ತಾರೆ. ಜಾತ್ರಾ ಮಹೋತ್ಸವ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯ ಅಧ್ಯಕ್ಷರಾಗಿ ಕೆ.ಸೀತಾರಾಮ ರೈ ಸವಣೂರು, ಕಾರ್ಯದರ್ಶಿಯಾಗಿ ಶಿವಪ್ರಸಾದ್ ಶೆಟ್ಟಿ ಕಿನಾರ, ಸದಸ್ಯರುಗಳಾಗಿ ನವೀನ್ ಕುಮಾರ್ ಶೆಟ್ಟಿ ಮುಗೇರುಗುತ್ತು, ಆಶಾ ಪ್ರವೀಣ್ ಕಂಪ, ಶಿವರಾಮ ಗೌಡ ಮೆದು, ಮೋನಪ್ಪ ಗೌಡ ಆರೇಲ್ತಡಿ, ರಾಕೇಶ್ ರೈ ಕೆಡೆಂಜಿ ಹಾಗೂ ಪ್ರೇಮ ಪುಟ್ಟಣ ನಾಯ್ಕ ಆರೇಲ್ತಡಿ ಹಾಗೂ ಊರ ಭಕ್ತಾಧಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ಮಾ. 25-26 : ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜಾತ್ರೋತ್ಸವ
ಸವಣೂರು ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಾ. 25 ಮತ್ತು 26 ರಂದು 11 ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ ಹಾಗೂ ಭಜನಾ ಸಂಭ್ರಮ ( ಅರ್ಧ ಏಕಾಹ ಹಾಗೂ ಕುಣಿತ ಭಜನೆ) ನಡೆಯಲಿದೆ. ಮಾ. 25 ರಂದು ಬೆಳಿಗ್ಗೆ 6.30 ಕ್ಕೆ ಅರ್ಧ ಏಕಾಹ ಭಜನೆ ಪ್ರಾರಂಭ, ಬೆಳಿಗ್ಗೆ 10 ಕ್ಕೆ ಊರ ಭಕ್ತಾಧಿಗಳಿಂದ ಹೊರೆಕಾಣಿಕೆ ಸಮರ್ಪಣೆ, ಸಂಜೆ ತಂತ್ರಿಗಳ ಆಗಮನ, ವೈದಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 6.30 ಕ್ಕೆ ಅರ್ಧ ಏಕಾಹ ಭಜನೆ ಸಮಾರೋಪ, ಬಳಿಕ ಕುಣಿತ ಭಜನೆ ನಡೆಯಲಿದೆ. ರಾತ್ರಿ 8 ರಿಂದ ಅನ್ನಸಂತರ್ಪಣೆ, ಮಾ. 26 ರಂದು ಬೆಳಿಗ್ಗೆ 6 ರಿಂದ ಮಹಾಗಣಪತಿ ಹೋಮ, ನಾಗ ತಂಬಿಲ, ಕಲಶಾಭಿಷೇಕ ಸಹಿತ ವೈದಿಕ ಕಾರ್ಯಕ್ರಮ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ 8 ರಿಂದ ಶ್ರೀ ದೇವರ ಬಲಿ ಹೊರಟು ಉತ್ಸವ, ಶ್ರೀ ಭೂತ ಬಲಿ, ವಸಂತ ಕಟ್ಟೆ ಪೂಜೆ, ಸುಡುಮದ್ದು ಪ್ರದರ್ಶನ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯದ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈ, ಕಾರ್ಯದರ್ಶಿ ಎನ್.ಶಿವಪ್ರಸಾದ್ ಶೆಟ್ಟಿ ಕಿನಾರ ಹಾಗೂ ಜಾತ್ರಾ ಮಹೋತ್ಸವ ಸಮಿತಿಯ ಸದಸ್ಯರುಗಳು ತಿಳಿಸಿದ್ದಾರೆ.