ರಥೋತ್ಸವ ಸಂದರ್ಭ ಡ್ರೋನ್ ಹಾರಾಟ ಬೇಡ
ಮೊಬೈಲ್ ನೆಟ್ವರ್ಕ್ ಜಾಮ್ ಆಗದಂತೆ ಕ್ರಮ ವಹಿಸಿ
ಕಾನೂನು ಸುವ್ಯವಸ್ಥೆ, ಟ್ರಾಫಿಕ್ ಕಂಟ್ರೋಲ್, ಪಾರ್ಕಿಂಗ್, ಸ್ವಚ್ಚತೆ, ನಿರಂತರ ವಿದ್ಯುತ್ ಸರಬರಾಜು, ಬಸ್ ವ್ಯವಸ್ಥೆಗೆ ಸೂಚನೆ
ಪುತ್ತೂರು: ಎ.10ರಂದು ಧ್ವಜಾರೋಹಣಗೊಂಡು ಎ.20ರವರೆಗೆ ನಡೆಯಲಿರುವ ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಪೂರ್ವಭಾವಿಯಾಗಿ ಪ್ರಮುಖ ಇಲಾಖಾಧಿಕಾರಿಗಳ ಸಭೆಯು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಜಾತ್ರೋತ್ಸವವನ್ನು ಅಚ್ಚುಕಟ್ಟಾಗಿ ನಡೆಸಲು ಮಾಡಬೇಕಾದ ವ್ಯವಸ್ಥೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ನಗರ ಆರಕ್ಷಕ ಠಾಣೆ, ಮಹಿಳಾ ಠಾಣೆಯ ಅಧಿಕಾರಿಗಳು ಕಾನೂನು ಸುವ್ಯವಸ್ಥೆ, ಸೂಕ್ತ ಬಂದೋಬಸ್ತ್ನ ಬಗ್ಗೆ ತಿಳಿಸಿದರು. ಸಂಚಾರಿ ಠಾಣಾಧಿಕಾರಿ ಉದಯರವಿ ಟ್ರಾಫಿಕ್ ಸುವ್ಯವಸ್ಥೆ ಕಾಪಾಡಲು ಕೈಗೊಳ್ಳುವ ಕ್ರಮಗಳ ಮಾಹಿತಿ ನೀಡಿದರು. ನಗರಸಭೆಯ ಅಧಿಕಾರಿ ರಾಮಚಂದ್ರ ಮಾಹಿತಿ ನೀಡಿ ದೇವರ ಪೇಟೆ ಸವಾರಿ ಸಂದರ್ಭ ರಸ್ತೆಗೆ ನೀರು ಸಿಂಪಡಣೆ, ಸ್ವಚ್ಚತೆ, ಶೌಚಾಲಯ ಸ್ವಚ್ಚತೆಯ ಕಾರ್ಯಗಳ ಬಗ್ಗೆ ತಿಳಿಸಿದರು.
ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಮಾತನಾಡಿ, ಜಾತ್ರಾ ಸಂದರ್ಬದಲ್ಲಿ ವಿದ್ಯುತ್ ಅಡಚಣೆಯಾಗದಂತೆ ನಿರಂತರ ವಿದ್ಯುತ್ ಸರಬರಾಜು ಮಾಡಲಾಗುವುದು. ಸ್ಟಾಲ್ಗಳಿಗೆ ಅಳವಡಿಸಬೇಕಾದ ವಿದ್ಯುತ್ ಸಂಪರ್ಕದ ಬಗ್ಗೆ ಮಾಹಿತಿ ನೀಡಿದರು. ಬೊಳುವಾರಿನಿಂದ ದರ್ಬೆಯವರಿಗೆ ಲೈಟಿಂಗ್ಸ್ ಅಳವಡಿಸುವ ಗುತ್ತಿಗೆದಾರರು ಜನರೇಟರ್ ವ್ಯವಸ್ಥೆ ಮಾಡಿಕೊಳ್ಳಬೇಕು. ಅಲ್ಲದೆ ಭದ್ರತೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾರಿಗೆ ಇಲಾಖೆಯ ಅಧಿಕಾರಿ ಮಾತನಾಡಿ ಎ.16 ಮತ್ತು 17ರಂದು ತಾಲೂಕಿನ ಗ್ರಾಮೀಣ ಭಾಗಗಳಿಗೆ ಹಾಗೂ ಮಂಗಳೂರು ಕಡೆಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗುವುದು. ಉಳಿದ ದಿನಗಳಲ್ಲಿ ಕೂಡ ಅವಶ್ಯಕತೆ ಇದ್ದಲ್ಲಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡುತ್ತೇವೆ. ಸಿಟಿ ಆಸ್ಪತ್ರೆ ಸಮೀಪದಿಂದ ಬಸ್ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆಯ ಬದಿಯಲ್ಲಿ ವಾಹನ ಪಾರ್ಕಿಂಗ್ ಮಾಡದಂತೆ ಕ್ರಮವಹಿಸಬೇಕು ಎಂದು ಹೇಳಿದರು. ರಥೋತ್ಸವ ಸಂದರ್ಭದಲ್ಲಿ ರಥ ಸಾಗುವ ಕೊನೆಯ ಸ್ಥಳದವರೆಗೂ ರಥಬೀದಿಯ ಸುತ್ತ ಬ್ಯಾರಿಕೇಡ್ ಅಳವಡಿಸುವಂತೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪ್ರಮೋದ್ ಸಲಹೆ ನೀಡಿದರು.
ಆರೋಗ್ಯ ಇಲಾಖೆಯಿಂದ ತಾಲೂಕು ವೈದ್ಯಾಧಿಕಾರಿ ದೀಪಕ್ ರೈ ಆರೋಗ್ಯ ವ್ಯವಸ್ಥೆ ಕಾಪಾಡಲು ತಾತ್ಕಾಲಿಕ ಕ್ಲಿನಿಕ್ ತೆರೆಯಲಾಗುವುದು ಎಂದರು. ಅಗ್ನಿ ಶಾಮಕ ದಳದ ಠಾಣಾಧಿಕಾರಿ ಶಂಕರ್ ಸುರಕ್ಷತೆಗೆ ಅಗ್ನಿಶಾಮಕ ಹಾಗೂ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಲಾಗುವುದು ಎಂದರು. ಬಲ್ನಾಡು ಶ್ರಿದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಆಡಳಿತಾಧಿಕಾರಿ ದೈವಗಳ ಕಿರುವಾಲು ಆಗಮಿಸುವ ಸಂದರ್ಭ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಜಾತ್ರೋತ್ಸವ ಯಶಸ್ವಿಯಾಗಿ ನಡೆಯಬೇಕು. ಇದಕ್ಕೆ ಬೇಕಾದ ಪೂರ್ವ ಸಿದ್ಧತೆಗಳ ಬಗ್ಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳು ಕ್ರಮಕೈಗೊಳ್ಳಬೇಕು. ಪುತ್ತೂರು ನಗರ ಅಲಂಕಾರ ಆಗಬೇಕು. ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಕಾನೂನಿನಲ್ಲಿ ಕಾಂಪ್ರಮೈಸ್ ಬೇಡ. ಬಿಗಿ ಕಾನೂನು ಮಾಡಿ. ಪಾರ್ಕಿಂಗ್ ವ್ಯವಸ್ಥೆಯನ್ನು ನಿರ್ವಹಣೆ ಮಾಡಬೇಕು. ಪುಷ್ಕರಿಣಿಯ ಸಮೀಪದ ಜಾಗದಲ್ಲಿ ಯಾವುದೇ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಬೇಡ. ಆರೋಗ್ಯ ಇಲಾಖೆಯಿಂದ ಸ್ಟಾಲ್ಗಳಲ್ಲಿ ನೀಡಲಾಗುವ ಆಹಾರದ ಗುಣಮಟ್ಟವನ್ನು ಪರಿಶೀಲಿಸಬೇಕು. ಸ್ವಚ್ಚತೆ, ಜಾಗೃತಿ ಮೂಡಿಸಬೇಕು. ಸ್ಟಾಲ್ಗಳಿಗೆ ತ್ಯಾಜ್ಯ ಹಾಕಲು ದೇವಾಲಯದ ವತಿಯಿಂದಲೇ ಡಸ್ಟ್ಬಿನ್ ವ್ಯವಸ್ಥೆ ಮಾಡಿಕೊಡಬೇಕು ಎಂದರು. ಜಾತ್ರಾ ಸಂದರ್ಭದಲ್ಲಿ ಎರಡು ದಿನ ಮೊಬೈಲ್ ನೆಟ್ವರ್ಕ್ ಜಾಮ್ ಆಗದಂತೆ ಸಂಬಂಧಪಟ್ಟ ನೆಟ್ವರ್ಕ್ ಕಂಪೆನಿಗೆ ನಿರ್ದೇಶನ ನೀಡುವಂತೆ ನಗರಸಭೆಯ ಅಧಿಕಾರಿಗೆ ತಿಳಿಸಿದರು. ಯಾವುದೇ ಅವಘಡ ಸಂಭವಿಸಿದಲ್ಲಿ ಆರೋಗ್ಯ ವಿಮೆ, ಗುಂಪು ವಿಮೆಯ ಸಾಧಕ ಬಾಧಕಗಳ ಬಗ್ಗೆ ವಿಮಾ ಕಂಪೆನಿಗಳ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ಜಾತ್ರೆ ವಿಜ್ರಂಭಣೆಯಿಂದ ನಡೆಯಲಿದೆ. ಮನೆ ತೆರವು ಮಾಡಿದ ಜಾಗದಲ್ಲಿ ಅನ್ನಸಂತರ್ಪಣೆ ಮಾಡಲಾಗುವುದು. ಅಚ್ಚುಕಟ್ಟಾಗಿ ಅನ್ನದಾನದ ವ್ಯವಸ್ಥೆ ಮಾಡುತ್ತೇವೆ. ಈಗಾಗಲೇ ಚಪ್ಪರ ತಯಾರಾಗುತ್ತಿದೆ. ವ್ಯವಸ್ಥಿತ ರೀತಿಯಲ್ಲಿ ಜಾತ್ರೆ ನಡೆಸಲಾಗುವುದು. ದೇವರ ಕೊಡಿ ಏರುವ ಸಂದರ್ಭ ಹಾಗೂ ರಥೋತ್ಸವದ ಸಂದರ್ಭ ಡ್ರೋಣ್ ಹಾರಾಟ ಬೇಡ ಎಂದು ಸಲಹೆ ನೀಡಿದರು. ಇಲಾಖಾಧಿಕಾರಿಗಳು ಎಲ್ಲ ಕೆಲಸ ಕಾರ್ಯಗಳಿಗೆ ಸ್ಪಂದಿಸಬೇಕು ಎಂದರು.