ಪುತ್ತೂರು: ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ವತಿಯಿಂದ ‘ನೃತ್ಯ ತರಂಗಿಣಿ-2’ ಭರತನಾಟ್ಯ ಕಾರ್ಯಕ್ರಮ ಸೋಮವಾರ ಇಲ್ಲಿನ ಬರೆಕರೆ ವೆಂಕಟ್ರಮಣ
ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಧ್ಯಾನಗಿರಿ ಶ್ರೀಅಭಯ ಆಂಜನೇಯ ದೇವಸ್ಥಾನ ಸಾಲ್ಮರ ಇದರ ಆಡಳಿತ ಅಧಿಕಾರಿ ಗಣೇಶ್ ಕೆದಿಲಾಯ, ಭಾರತೀಯ ಕಲೆ ಮತ್ತು
ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಈ ಕಲಾ ಅಕಾಡೆಮಿಯ ಕೊಡುಗೆ ಅನನ್ಯ. 20ನೇ ವರ್ಷ ಸಂಭ್ರಮವನ್ನು ಆಚರಿಸಿರುವುದು ಕಡಿಮೆ ಸಾಧನೆಯೇನು ಅಲ್ಲ. ವಿದ್ಯಾರ್ಥಿಗಳ
ಪ್ರತಿಭೆಗೆ ವೇದಿಕೆ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ಅಕಾಡೆಮಿ ಅಧ್ಯಕ್ಷ ಮಂಜುನಾಥ್ ಪಿ.ಎಸ್, ಉಪಾಧ್ಯಕ್ಷ ಡಾ.ಕೃಷ್ಣಕುಮಾರ್ ಪಿ.ಎಸ್., ಕಾರ್ಯದರ್ಶಿ ಆತ್ಮಭೂಷಣ್ ಇದ್ದರು. ಬಳಿಕ ಅಕಾಡೆಮಿಯ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ನಿರ್ದೇಶನದಲ್ಲಿ ಅಕಾಡೆಮಿಯ ವಿದ್ಯಾರ್ಥಿಗಳಾದ ಧೃತಿ ಜಿ.ಎಸ್. ನೇತ್ರಶ್ರೀ ಪಿ.ಎಂ., ನಿಖಿತಾ ಎ.ಎಂ., ಮಂಗಳದುರ್ಗ ಟಿ.ಆರ್., ಸಿಂಚನಾ ಪಿ.ಎಸ್. ನೃತ್ಯ ಪ್ರದರ್ಶಿಸಿದರು.
ನಟುವಾಂಗದಲ್ಲಿ ವಿದುಷಿ ಶಾಲಿನಿ ಆತ್ಮಭೂಷಣ್, ಹಾಡುಗಾರಿಕೆಯಲ್ಲಿ ವಿದ್ವಾನ್ ಕೃಷ್ಣಾಚಾರ್ ಪಾಣೆಮಂಗಳೂರು, ಮೃದಂಗದಲ್ಲಿ ವಿದ್ವಾನ್ ಬಾಲಕೃಷ್ಣ ಭಟ್ ಪುತ್ತೂರು, ಕೊಳಲಿನಲ್ಲಿ ವಿದ್ವಾನ್ ಕೃಷ್ಣಗೋಪಾಲ್ ಪುತ್ತೂರು ಸಾಥ್ ನೀಡಿದರು. ಅಕ್ಷಯ ಶಂಕರಿ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.