ಸುಳ್ಯದಲ್ಲಿ ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ – ವಸತಿ ನಿಲಯ ಮೇಲ್ವಿಚಾರಕಿಗೆ ನಿರೀಕ್ಷಣಾ ಜಾಮೀನು

0

  • ಪುತ್ತೂರು: ತಿಂಗಳ ಹಿಂದೆ ಸುಳ್ಯದಲ್ಲಿ ನಡೆದಿದ್ದ ವಿದ್ಯಾರ್ಥಿನಿಯೋರ್ವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ವಸತಿ ನಿಲಯ ಮೇಲ್ವಿಚಾರಕಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಸುಳ್ಯದ ಡೆಂಟಲ್ ಕಾಲೇಜಿನಲ್ಲಿ ಎರಡನೇ ವರ್ಷದ ವಿದ್ಯಾರ್ಥಿನಿಯೋರ್ವರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಆಕೆಯ ತಂದೆ ಬೆಳಗಾವಿ ಜಿಲ್ಲೆಯ ಅಥೇನಿ ತಾಲೂಕಿನ ಸಿದ್ಧಪ್ಪಶಿವಪ್ಪ ನಿಡೋಣಿ ಅವರು ಫೆ.೨೭ರಂದು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ‘ತನ್ನ ಮಗಳು ವಿದ್ಯಾಭ್ಯಾಸ ಮಾಡುತ್ತಿರುವ ವೇಳೆ ಅದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನವೀನ್ ಎಂಬ ವಿದ್ಯಾರ್ಥಿಯು ಮಗಳಿಗೆ ಫೋನ್ ಕರೆ ಮಾಡಿ, ನಿನ್ನ ಫೋಟೋಸ್ ಮತ್ತು ವಿಡಿಯೋಗಳನ್ನು ನಿನ್ನ ತಂದೆಗೆ ಹಾಗು ಸಹೋದರನಿಗೆ ಕಳುಹಿಸುತ್ತೇನೆಂದು ಆಗಾಗ ಬೆದರಿಕೆ ಹಾಕುತ್ತಿದ್ದುದರಿಂದ ತನ್ನ ಮಗಳು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವಳ ಈ ಸಾವಿಗೆ ವಿದ್ಯಾರ್ಥಿ ನವೀನ ನೀಡುತಿದ್ದ ಕಿರುಕುಳ ಕಾರಣವಾಗಿದೆ ಮತ್ತು ಮಗಳು ವಾಸಿಸಿಕೊಂಡು ಬರುತ್ತಿದ್ದ ‘ನರ್ಮಾದ’ ವಸತಿ ನಿಲಯದ ಮೇಲ್ವಿಚಾರಕಿ ತಾರಾಕುಮಾರಿಗೆ ವಿಷಯ ತಿಳಿದಿದ್ದರೂ ಆ ಬಗ್ಗೆ ನನಗೆ ಮಾಹಿತಿಯನ್ನು ನೀಡದೆ ಕರ್ತವ್ಯಲೋಪ ಎಸಗಿ ತನ್ನ ಮಗಳ ಸಾವಿಗೆ ಕಾರಣ ಆಗಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದರು.

ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆರೋಪಿ ತಾರಾ ಕುಮಾರಿ ಅವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಪುತ್ತೂರಿನ ೫ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಸರಿತಾ ಡಿ ಅವರು ಆರೋಪಿ ತಾರಾ ಕುಮಾರಿಯವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ. ಆರೋಪಿ ಪರ ಸುಳ್ಯದ ಹಿರಿಯ ನ್ಯಾಯವಾದಿ ಯಂ.ವೆಂಕಪ್ಪ ಗೌಡ,ಚಂಪಾ ವಿ ಗೌಡ, ರಾಜೇಶ ಬಿ.ಜಿ ಹಾಗು ಶಾಮಪ್ರಸಾದ್ ನಿಡ್ಯಮಲೆ
ವಾದಿಸಿದ್ದರು.

LEAVE A REPLY

Please enter your comment!
Please enter your name here