ಪುತ್ತೂರು: ಬ್ಯಾಂಕ್ ಉದ್ಯೋಗಿ ಮಹಿಳೆ ಜೊತೆ ಅಸಭ್ಯ ವರ್ತನೆ ಆರೋಪ ಸಾಬೀತಾಗಿ ಅಪರಾಧಿಗೆ 3 ತಿಂಗಳ ಕಠಿಣ ಶಿಕ್ಷೆ ವಿಧಿಸಲಾಗಿದೆ.
ಸುಳ್ಯ ಕನಕಮಜಲು ಉಮ್ಮರ್ ಶಿಕ್ಷೆಗೊಳಗಾದ ಅಪರಾಧಿ.
2021ರ ಆ.3ರಂದು ಮಧ್ಯಾಹ್ನ ಬ್ಯಾಂಕ್ ಉದ್ಯೋಗಿ ಮಹಿಳೆಯೋರ್ವರು ತಾಯಿ ಮನೆಗೆ ಊಟಕ್ಕೆ ಹೋಗುತ್ತಿದ್ದ ಸಂದರ್ಭ ಇಲ್ಲಿನ ಕಿಲ್ಲೆ ಮೈದಾನದ ಬಳಿ ಆಟೋ ರಿಕ್ಷಾದಲ್ಲಿದ್ದ ಆರೋಪಿ, ಮಹಿಳೆಯನ್ನು ನೋಡಿ ಕೈಸನ್ನೆ ಮಾಡಿ ಕರೆದು ತನ್ನ ಪ್ಯಾಂಟಿನ ಜಿಪ್ ತೆರೆದು ಅಸಭ್ಯವಾಗಿ ವರ್ತಿಸಿದ್ದ. ಆ.18ರಂದು ಸಂಜೆ ಮಹಿಳೆ ಕಿಲ್ಲೆ ಮೈದಾನದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಅಲ್ಲೇ ಇದ್ದ ಗೂಡಂಗಡಿ ಬಳಿ ಸಿಗರೇಟು ಸೇದುತ್ತಾ ಪೇಪರ್ ಹಿಡಿದುಕೊಂಡಿದ್ದ ಆರೋಪಿ ಉಮ್ಮರ್, ಮಹಿಳೆಯನ್ನು ಹಿಂಬಾಲಿಸಿಕೊಂಡು ಬಂದು ಅಸಭ್ಯ ವರ್ತನೆ ತೋರಿದ್ದಾಗಿ, ನೊಂದ ಮಹಿಳೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮಹಿಳಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ಮತ್ತು ಜೆಎಂ ಎಫ್ ಸಿ ನ್ಯಾಯಾಲಯ ಕಿರಿಯ ವಿಭಾಗದ ನ್ಯಾಯಾಧೀಶೆ ಅರ್ಚನಾ ಉನ್ನಿತ್ತಾನ್ ಅವರು ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ, ಅಪರಾಧಿಗೆ 3 ತಿಂಗಳ ಕಠಿಣ ಶಿಕ್ಷೆ ಹಾಗೂ 6 ಸಾವಿರ ರೂ.ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದಲ್ಲಿ 3 ತಿಂಗಳ ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದಾರೆ. ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕಿ ಚೇತನಾದೇವಿ ಬೋಳೂರು ವಾದಿಸಿದ್ದರು.