ಉಪ್ಪಿನಂಗಡಿ: ಇಚ್ಚೂರು ಬಾಲಸುಬ್ರಹ್ಮಣ್ಯ ದೇವಸ್ಥಾನ ಉರುವಾಲುಪದವು ಇಲ್ಲಿನ ಕಾಲಾವಧಿ ಉತ್ಸವದಲ್ಲಿ ಕು.ಅಭಿಜ್ಞಾರಾವ್ ದಾಳಿಂಬ ಮತ್ತು ಮಾ. ಆಶ್ರಿತ್ ಕೃಷ್ಣ ದಾಳಿಂಬ ಇವರ ದ್ವಂದ್ವ ಹಾಡುಗಾರಿಕೆಯ ಸಂಗೀತ ಕಲಾ ಸೇವೆಯು ಮಾ.28ರಂದು ದೇವಳದ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆಯಿತು.
ವಾಯಲಿನ್ ನಲ್ಲಿ ಮನೋಜ್ ರಾವ್ ಮಂಗಳೂರು ಮತ್ತು ಮೃದಂಗದಲ್ಲಿ ವಿದ್ವಾನ್ ಶ್ಯಾಮ್ ಭಟ್ ಸುಳ್ಯ ಸಾಥ್ ನೀಡಿದರು. ಬೆಳ್ತಂಗಡಿ ಮಾದರಿ ಶಾಲೆಯ ಮುಖ್ಯೋಪಾಧ್ಯಾಯರೂ ಉತ್ಸವ ಸಮಿತಿಯ ಕಾರ್ಯದರ್ಶಿಗಳೂ ಆದ ಸೂರ್ಯನಾರಾಯಣ ಪುತ್ತೂರಾಯ, ಕಲಾವಿದರನ್ನು ಶಾಲು ನೀಡಿ ಗೌರವಿಸಿ, ಮಾತನಾಡುತ್ತಾ, ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ಕಲಿಕೆಯಲ್ಲಿ ಹಿನ್ನಡೆಯಾಗುತ್ತದೆ ಎಂಬ ಚಿಂತನೆಯಿಂದ ಹೊರಬರಬೇಕಾಗಿದೆ. ಇತರ ಚಟುವಟಿಕೆಗಳು ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಿ ಓದಿನಲ್ಲೂ ಹೆಚ್ಚು ಸಾಧನೆಯನ್ನು ಮಾಡುವುದಕ್ಕೆ ಸಹಕಾರಿಯಾಗುತ್ತವೆ. ಅದಕ್ಕೆ ಈ ಎರಡೂ ಮಕ್ಕಳು ಉದಾಹರಣೆಯಾಗಿದ್ದು ಇವರಿಬ್ಬರೂ ಓದಿನಲ್ಲೂ ಉತ್ತಮ ಫಲಿತಾಂಶದ ಜೊತೆ ಸಾಗುತ್ತಿದ್ದಾರೆ. ಸನಾತನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಜವಾಬ್ದಾರಿ ಪೋಷಕರಾದ ತಮ್ಮೆಲ್ಲರ ಮೇಲಿದೆ ಎಂದು ಹೇಳುತ್ತಾ ಕಾರ್ಯಕ್ರಮಕ್ಕೆ ಶುಭಹಾರೈಸುತ್ತಾ ಧನ್ಯವಾದ ಸಮರ್ಪಿಸಿದರು. ದೇವಳದ ಅನುವಂಶಿಕ ಮೊಕ್ತೇಸರರಾದ ಸುರೇಶ್ ಪುತ್ತೂರಾಯ ಪೀರ್ಯ ಮಾರ್ಗದರ್ಶನದಲ್ಲಿ ಕಲಾವಿದರಿಗೆ ದೇವರ ಪ್ರಸಾದ ನೀಡಿ ಗೌರವಿಸಲಾಯಿತು.