ಐಜಿಪಿ ಅಮಿತ್‌ ಸಿಂಗ್, ಎಸಿಪಿ ಧನ್ಯಾ ನಾಯಕ್, ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಮುಖ್ಯಮಂತ್ರಿಗಳ ಪದಕ ಪುರಸ್ಕಾರಕ್ಕೆ ಆಯ್ಕೆ

0

ಪುತ್ತೂರು: ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ ನೀಡುವ 2024ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ರಾಜ್ಯದ ವಿವಿಧ ಜಿಲ್ಲೆಗಳ 197 ಮಂದಿಯನ್ನು ಆಯ್ಕೆ ಮಾಡಲಾಗಿದ್ದು ಇದರಲ್ಲಿ ಈ ಹಿಂದೆ ಪುತ್ತೂರಿನಲ್ಲಿ ಎಎಸ್ಪಿಯಾಗಿದ್ದು ಪ್ರಸ್ತುತ ಮಂಗಳೂರು ಪಶ್ಚಿಮ‌ ವಲಯ ಐಜಿಪಿ ಆಗಿರುವ ಅಮಿತ್ ಸಿಂಗ್, ಪುತ್ತೂರಿನಲ್ಲಿ ಪ್ರೊಬೆಷನರಿ ಡಿವೈಎಸ್‌ಪಿಯಾಗಿ ಕಾರ್ಯ ನಿರ್ವಹಿಸಿ ಪ್ರಸ್ತುತ ಮಂಗಳೂರು ದಕ್ಷಿಣ ವಿಭಾಗದ ಎಸಿಪಿಯಾಗಿರುವ ಧನ್ಯಾ ನಾಯಕ್ ಮತ್ತು ಪುತ್ತೂರು ನಗರ ಠಾಣಾ ಇನ್ಸ್‌ಪೆಕ್ಟರ್ ಆಗಿ ಕಾರ್ಯ ನಿರ್ವಹಿಸಿ ಪ್ರಸ್ತುತ ಸುರತ್ಕಲ್ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಆಗಿರುವ ಪುತ್ತೂರು ಮೂಲದವರೇ ಆಗಿರುವ ಮಹೇಶ್ ಪ್ರಸಾದ್‌‌ ಒಳಗೊಂಡಿದ್ದಾರೆ. ಎ.2ರಂದು ಬೆಂಗಳೂರಿನಲ್ಲಿ ನಡೆಯುವ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಐಜಿಪಿ ಅಮಿತ್ ಸಿಂಗ್:

ಉತ್ತರ ಭಾರತ ಮೂಲದವರಾಗಿರುವ ಅಮಿತ್ ಸಿಂಗ್ ಅವರು ಈ ಹಿಂದೆ ಎನ್‌ಐಎಯಲ್ಲಿ ಕಾರ್ಯ ನಿರ್ವಹಿಸಿದ್ದು ಕಳೆದೊಂದು ವರ್ಷದಿಂದ ಪಶ್ಚಿಮ ವಲಯ ಐಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾಲ್ಕು ವರ್ಷಗಳ ಕಾಲ ಕೇಂದ್ರದಿಂದ ನಿಯೋಜನೆ ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯಲ್ಲಿ ಕರ್ತವ್ಯದಲ್ಲಿದ್ದ ಇವರು 2023ರ ದಶಂಬರ್ ಎರಡನೇ ವಾರದಲ್ಲಿ ಮರಳಿ ಕರ್ನಾಟಕದಲ್ಲಿ ಸೇವೆಗೆ ಯೋಜಿತರಾಗಿದ್ದರು.

ಡಾ|ಚಂದ್ರಗುಪ್ತ ಅವರ ವರ್ಗಾವಣೆ ಬಳಿಕ ಪಶ್ಚಿಮ ವಲಯ ಐಜಿಪಿಯಾಗಿ ನೇಮಕಗೊಂಡು ವರ್ಗಾವಣೆಗೊಂಡಿದ್ದರು. ಅವರು ಆರಂಭದಲ್ಲಿ ಪುತ್ತೂರು ಉಪವಿಭಾಗದ ಎಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ದಕ್ಷ ಮತ್ತು ಖಡಕ್ ಐಪಿಎಸ್ ಅಧಿಕಾರಿ ಎಂದೇ ಕರೆಯಲ್ಪಡುವ ಇವರು ನಕ್ಸಲ್ ಸಂಘಟನೆಯಲ್ಲಿದ್ದವರು ಶರಣಾಗಲು ಪ್ರಮುಖ ಕಾರಣಕರ್ತರಾಗಿದ್ದ ಹಿನ್ನೆಲೆಯಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಧನ್ಯಾ ನಾಯಕ್:

ಕಾರವಾರ ಜಲ್ಲೆಯ ಅಂಕೋಲಾ ಮೂದವರಾಗಿರುವ ಧನ್ಯಾ ನಾಯಕ್ ಅವರು ಪುತ್ತೂರಿನಲ್ಲಿ ಪ್ರೊಬೆಷನರಿ ಡಿವೈಎಸ್ಪಿಯಾಗಿದ್ದು ಪ್ರಸ್ತುತ ಮಂಗಳೂರು ದಕ್ಷಿಣ ವಿಭಾಗದ ಎಸಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧನ್ಯಾ ನಾಯಕ್ ಅವರು ಪುತ್ತೂರಿನಲ್ಲಿ ಪ್ರೊಬೆಷನರಿ ಡಿವೈಎಸ್ಪಿಯಾಗಿದ್ದ ವೇಳೆ ಉಪ್ಪಿನಂಗಡಿ ಪೊಲೀಸ್ ಠಾಣೆ ಮತ್ತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸಿದ್ದರು.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕುರಿತು ತನಿಖೆಗೆ ರಚಿಸಲಾಗಿರುವ 18 ಮಂದಿ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡಿರುವ ವಿಶೇಷ ತನಿಖಾ ತಂಡಕ್ಕೂ ಧನ್ಯಾ ನಾಯಕ್‌ರವರನ್ನು ನೇಮಕ ಮಾಡಲಾಗಿತ್ತು. ಕೋಟೆಕಾರು ಮತ್ತು ಉಳಾಯಿಬೆಟ್ಟು ಎಂಬಲ್ಲಿ ನಡೆದ ದರೋಡೆ ಪ್ರಕರಣ, ವಿವಿಧ ಕೊಲೆ ಪ್ರಕರಣಗಳ ಆರೋಪಿಗಳ ಪತ್ತೆ ಕಾರ್ಯಾಚರಣೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸಿದ ಹಿನ್ನೆಲೆಯಲ್ಲಿ ಇವರ ಹೆಸರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ.

ಮಹೇಶ್‌ಪ್ರಸಾದ್:

ಪುತ್ತೂರು ಮೂಲದವರಾಗಿರುವ ಮಹೇಶ್ ಪ್ರಸಾದ್ ಅವರು ಪ್ರಸ್ತುತ ಸುರತ್ಕಲ್ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಆಗಿ ಹಾವೇರಿ, ಬೆಂಗಳೂರು, ಹಿರಿಯಡ್ಕ, ಕೋಟ, ಬಂಟ್ವಾಳ ಮತ್ತು ಶೃಂಗೇರಿಯಲ್ಲಿ ಕಾರ‍್ಯ ನಿರ್ವಹಿಸಿದ್ದ ಇವರು ಬಳಿಕ ಇನ್ಸ್‌ಪೆಕ್ಟರ್ ಆಗಿ ಭಡ್ತಿ ಪಡೆದು ಕಾರವಾರ, ಮಣಿಪಾಲ, ಪುತ್ತೂರು ಮತ್ತು ಕಾಪು ಠಾಣೆಗಳಲ್ಲಿ ಕಾರ‍್ಯ ನಿರ್ವಹಿಸಿದ್ದಾರೆ. ಮಂಗಳೂರು ಸಿಸಿಬಿ ವಿಭಾಗದ ಇನ್ಸ್‌ಪೆಕ್ಟರ್ ಆಗಿದ್ದ ವೇಳೆ ಮಹೇಶ್ ಪ್ರಸಾದ್‌ರವರು ಉಳ್ಳಾಲದಲ್ಲಿ ಕಾರ‍್ಯಾಚರಣೆ ನಡೆಸಿ ಐಸಿಸ್ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದವರನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇವರ ಕಾರ್ಯ ದಕ್ಷತೆಯನ್ನು ಪರಿಗಣಿಸಿ ಉಗ್ರರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಕೇಂದ್ರ ಗೃಹ ಸಚಿವಾಲಯದಿಂದ ನೀಡುವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದರು. ಇತ್ತೀಚೆಗೆ ನಡೆದ ಕೋಟೆಕಾರು ದರೋಡೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿದ ಸಾಧನೆಗಾಗಿ ಪ್ರಶಸ್ತಿಗೆ ಭಾಜನರಾಗಿರುವ ಇವರು ಪೊಲೀಸ್ ಇಲಾಖೆಯಲ್ಲಿದ್ದ ರಘು ನಾಯ್ಕ್ ಮತ್ತು ಪುಷ್ಪಲತಾ ದಂಪತಿಯ ಪುತ್ರರಾಗಿದ್ದು ಪುತ್ತೂರಿನಲ್ಲಿ ಜನಿಸಿದವರಾಗಿದ್ದಾರೆ. ಪ್ರಸ್ತುತ ಉಡುಪಿ ಜಿಲ್ಲೆಯ ಬ್ರಹ್ಮಾವರದ ಚೆರ್ಕಾಡಿ ನಿವಾಸಿಯಾಗಿದ್ದಾರೆ. ಮೂಡಬಿದ್ರೆಯ ಶ್ರೀ ಮಹಾವೀರ ಕಾಲೇಜ್‌ನ ಹಿರಿಯ ವಿದ್ಯಾರ್ಥಿಯಾಗಿರುವ ಮಹೇಶ್ ಪ್ರಸಾದ್‌ರವರು ತನ್ನ ಕರ್ತವ್ಯದ ಅವಧಿಯಲ್ಲಿ ಹಲವು ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸಿ ಜನಮನ್ನಣೆ ಗಳಿಸಿದ್ದಾರೆ.

LEAVE A REPLY

Please enter your comment!
Please enter your name here