ಏ.8 – 14 ವಾರ್ಷಿಕ ಜಾತ್ರೋಮಹೋತ್ಸವ | ಏ.12 ಬ್ರಹ್ಮರಥೋತ್ಸವ
ಪುತ್ತೂರು: ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಏ.8ರಿಂದ ಏ.14ರ ವರೆಗೆ ನಡೆಯಲಿರುವ ಜಾತ್ರಾಮಹೋತ್ಸವದ ಅಂಗವಾಗಿ ಮಾ.30ರಂದು ಬೆಳಗ್ಗೆ ಬ್ರಹ್ಮರಥ ಮಂದಿರದಿಂದ ಬ್ರಹ್ಮರಥವನ್ನು ರಥ ಬೀದಿಗೆ ತಂದು ನಿಲ್ಲಿಸುವ ಕಾರ್ಯಕ್ರಮ ನಡೆಯಿತು.

ಮಾ.30ರಂದು ಬೆಳಿಗ್ಗೆ ಶುಭ ಮುಹೂರ್ತದಲ್ಲಿ ದೇವಳದ ಪ್ರಧಾನ ಅರ್ಚಕ ಕೃಷ್ಣ ಬಡಿಕಿಲ್ಲಾಯರವರು ವಿಜೃಂಭಣೆಯಿಂದ ಜಾತ್ರೆ ನಡೆಯುವಂತೆ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ರಥಕ್ಕೆ ಪೂಜೆ ಸಲ್ಲಿಸಿ ತೆಂಗಿನ ಕಾಯಿ ಒಡೆದ ಬಳಿಕ ರಥವನ್ನು ಮಂದಿರದಿಂದ ರಥಬೀದಿಗೆ ತರಲಾಯಿತು. ಈ ಸಂದರ್ಭ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜನಾರ್ದನ ಎರ್ಕಡಿತ್ತಾಯ, ಸದಸ್ಯರಾದ ಸುಬ್ರಹ್ಮಣ್ಯ ಗೌಡ ಹಣಿಯೂರು, ಚಂದ್ರಶೇಖರ ನಾಯ್ಕ್ ಕುದುಮಾನ್, ಸರೋಜಿನಿ ಅರ್ಕ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಕ್ಷೇತ್ರದ ಕಾರಣಿಕಕ್ಕೆ ಮತ್ತೆ ಸಾಕ್ಷಿಯಾದ ಗರುಡಾಗಮನ
ಜಾತ್ರಾಮಹೋತ್ಸವದ ಹಿನ್ನೆಲೆಯಲ್ಲಿ ಗ್ರಾಮದೆಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ ಬ್ರಹ್ಮರಥವನ್ನು ರಥಮಂದಿರದಿಂದ ಹೊರ ತರುವ ಪ್ರಕ್ರೀಯೆ ಅಂತಿಮ ಹಂತ ತಲುಪುತ್ತಿದ್ದಂತೆ ಕ್ಷೇತ್ರದ ಮೇಲ್ಬಾಗದ ಆಕಾಶದಲ್ಲಿ ಜೋಡಿ ಗರುಡಗಳ ಹಾರಾಟ ಕಂಡುಬಂತು. ಮೇಲ್ಬಾಗದಲ್ಲಿ ಮೂರು ಸುತ್ತು ಹಾರಾಟ ನಡೆಸಿದ ಗರುಡಗಳು ಆ ಬಳಿಕ ಕಣ್ಮರೆಯಾಯಿತು. ವರುಷಗಳ ಹಿಂದೆ ಬ್ರಹ್ಮ ರಥೋತ್ಸವದ ದಿನ ಬೆಳಗ್ಗೆ ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿಯ ಸಮಯ ಸಮೀಪಿಸುತ್ತಿದ್ದಂತೆ ತಂತ್ರಿ ವರ್ಗದವರು ಧ್ವಜಸ್ಥಂಭದ ಬಳಿ ಪೂಜೆ ನೆರವೇರಿಸುತ್ತಿದ್ದಂತೆ ಧ್ವಜಸ್ಥಂಭದ ಮೇಲ್ಬಾಗದ ಆಕಾಶದಲ್ಲಿ ಗರುಡ ಕಂಡು ಬಂದಿತ್ತು. ಅದಕ್ಕಿಂತ ಮೊದಲು ಕ್ಷೇತ್ರದಲ್ಲಿ ಧ್ವಜಸ್ಥಂಭ ನಿಲ್ಲಿಸುವಾಗ ಕಾರ್ಯ ನಡೆಯುತ್ತಿದ್ದಾಗ ಹಾಗೂ ಬ್ರಹ್ಮರಥದ ಪುರಪ್ರವೇಶ ನಡೆದು ಭೂಸ್ಪರ್ಶ ನಡೆದಾಗಲೂ ದೇವಾಲಯದ ಮೇಲ್ಬಾಗ ಆಕಾಶದಲ್ಲಿ ಗರುಡನ ಹಾರಾಟ ಕಂಡುಬಂದಿತ್ತು.
ಕ್ಷೇತ್ರದಲ್ಲಿ ಪ್ರಶ್ನಾಚಿಂತನೆ ನಡೆಸಿದ ವೇಳೆಯೂ ಈ ಗರುಡನ ಬಗೆಗಿನ ವಿಚಾರಗಳು ಬಂದಿತ್ತು.
ಪ್ರಾರಂಭದಲ್ಲಿ ಧ್ವಜಸ್ಥಂಭ ನಿಲ್ಲಿಸುವ ವೇಳೆ, ಆ ಬಳಿಕ ಬ್ರಹ್ಮ ರಥದ ಭೂಸ್ಪರ್ಶದ ವೇಳೆ, ಬಳಿಕ ದೇವರ ದರ್ಶನ ಬಲಿ ಸಂದರ್ಭದಲ್ಲಿ, ಇದೀಗ ಬ್ರಹ್ಮರಥ ರಥದ ಮಂದಿರದಿಂದ ಹೊರತಂದು ರಥಬೀದಿಯಲ್ಲಿ ನಿಲ್ಲಿಸಿದ ವೇಳೆ ಮತ್ತೊಮ್ಮೆ ಗರುಡಾಗಮನ ಆಗಿರುವುದು ಭಕ್ತರಲ್ಲಿ ಭಯಭಕ್ತಿ ಹುಟ್ಟಿಸಿದಲ್ಲದೇ ಕ್ಷೇತ್ರದ ಕಾರಣಿಕತೆಯ ನಂಬಿಕೆಗೆ ಇನ್ನಷ್ಟು ಪುಷ್ಟಿ ನೀಡಿದೆ.