ಬಲ್ನಾಡು ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕವಾಗಿ ಮೂರು ತಿಂಗಳಾಗುತ್ತಾ ಬಂದರೂ ನಡೆಯದ ಅಧ್ಯಕ್ಷರ ಆಯ್ಕೆ

0

ಪುತ್ತೂರು:ಪ್ರಸಿದ್ಧ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕವಾಗಿ ಬರೋಬ್ಬರಿ ಮೂರು ತಿಂಗಳಾಗುತ್ತಾ ಬಂದರೂ ಇನ್ನೂ ಅಧ್ಯಕ್ಷರ ಆಯ್ಕೆ ನಡೆಯದಿರುವುದು ಭಕ್ತಾದಿಗಳ ಅಚ್ಚರಿಗೆ ಕಾರಣವಾಗಿದೆ.


ಪ್ರವರ್ಗ ‘ಬಿ’ಗೆ ಸೇರಿರುವ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಮುಂದಿನ ಮೂರು ವರ್ಷಗಳ ಅವಧಿಗೆ ಓರ್ವ ಪ್ರಧಾನ ಅರ್ಚಕರ ಸಹಿತ ಒಂಭತ್ತು ಮಂದಿ ಸದಸ್ಯರನ್ನು ನೇಮಕಗೊಳಿಸಿ ಜ.9ರಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸಹಾಯಕ ಆಯುಕ್ತರು ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್‌ನ ಸದಸ್ಯ ಕಾರ್ಯದರ್ಶಿಯವರು ಆದೇಶಿಸಿದ್ದಾರೆ.ಅಲ್ಲದೆ, ಒಂದು ವಾರದ ಒಳಗಾಗಿ ಸದಸ್ಯರ ಸಭೆ ನಡೆಸಿ ಸಮಿತಿ ಅಧ್ಯಕ್ಷರ ಆಯ್ಕೆ ಮಾಡಿ ನಿರ್ಣಯದ ಪ್ರತಿಯನ್ನು ಸಲ್ಲಿಸುವಂತೆ ದೈವಸ್ಥಾನದ ಆಡಳಿತಾಧಿಕಾರಿಯವರಿಗೆ ಸೂಚಿಸಲಾಗಿತ್ತು. ಆದರೆ ಸದಸ್ಯರ ನೇಮಕಗೊಂಡು ಇದೀಗ ಮೂರು ತಿಂಗಳು ಪೂರ್ಣವಾಗುತ್ತಾ ಬಂದರೂ ಅಧ್ಯಕ್ಷ ಆಯ್ಕೆ ಆಗದೇ ಇರುವುದರಿಂದ ಭಕ್ತಾದಿಗಳಲ್ಲಿ ನಾನಾ ಪ್ರಶ್ನೆಗಳು ಮೂಡಲಾರಂಭಿಸಿದೆ.


ಇಲಾಖೆಯ ಆದೇಶದಂತೆ ದೈವಸ್ಥಾನದ ಪ್ರಧಾನ ಅರ್ಚಕ ರವಿಚಂದ್ರ ನೆಲ್ಲಿತ್ತಾಯ, ಪ.ಜಾತಿ ಮತ್ತು ಪ.ಪಂಗಡದಿಂದ ಸತೀಶ್ ನಾಯ್ಕ ಕಾನದಗುರಿ, ಮಹಿಳಾ ಮಿಸಲು ಸ್ಥಾನದಿಂದ ಪ್ರಮೀಳಾ ಬ್ರಹ್ಮರಕೋಡಿ, ಲಲಿತಾ ಪದವು, ಸಾಮಾನ್ಯ ಸ್ಥಾನದಿಂದ ವೆಂಕಟಕೃಷ್ಣ ಪಾಲೆಚ್ಚಾರು, ನವೀನ ಕರ್ಕೇರ ರಾಂಬೈಲು, ನಾರಾಯಣ ಗೌಡ ಕುಕ್ಕುತ್ತಡಿ, ಸತೀಶ ಒಳಗುಡ್ಡೆ ಹಾಗೂ ವಾಸುದೇವ ನಾಯ್ಕರವರು ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದರು.


ಇಬ್ಬರೊಳಗಿನ ಪೈಪೋಟಿ ನಡೆಯದ ಅಧ್ಯಕ್ಷರ ಆಯ್ಕೆ?:
ಜಿಲ್ಲಾ ಧಾರ್ಮಿಕ ಪರಿಷತ್‌ನಿಂದ ನೇಮಕಗೊಂಡಿರುವ ಎಂಟು ಮಂದಿ ಸದಸ್ಯರಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಇಬ್ಬರೊಳಗೆ ತೀವ್ರ ಪೈಪೋಟಿಯಿರುವುದರಿಂದ ಅಧ್ಯಕ್ಷರ ಆಯ್ಕೆಗೆ ಸದಸ್ಯರಲ್ಲಿ ಒಮ್ಮತ ಮೂಡುತ್ತಿಲ್ಲ.ಇದು ಶಾಸಕರ ಗಮನಕ್ಕೂ ಬಂದಿದ್ದು ಅವರು ಸಭೆ ನಡೆಸಿದ್ದರೂ ಅಲ್ಲಿಯೂ ಅಧ್ಯಕ್ಷರ ಆಯ್ಕೆಗೆ ಒಮ್ಮತ ಮೂಡಿಲ್ಲ ಎಂದು ತಿಳಿದುಬಂದಿದೆ.ಹೀಗಾಗಿ ವ್ಯವಸ್ಥಾಪನಾ ಸಮಿತಿಗೆ ಅಧ್ಯಕ್ಷರ ಆಯ್ಕೆ ಕಗ್ಗಂಟಾಗಿಯೇ ಉಳಿದಿದೆ.


ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ ನೆರವೇರಿದೆ.ಜಾತ್ರೋತ್ಸವದಲ್ಲಿ ಪೂರ್ವ ಸಂಪ್ರದಾಯದಂತೆ ಏ.16ಕ್ಕೆ ಬಲ್ನಾಡು ಉಳ್ಳಾಲ್ತಿ ದೈವಸ್ಥಾನದಿಂದ ದೈವಗಳ ಕಿರುವಾಳು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಲಿದೆ.ಅಲ್ಲದೆ ಏ.28ರಂದು ಬಲ್ನಾಡು ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವಗಳು ನಡೆಯಬೇಕಿದೆ.ಹೀಗಿದ್ದರೂ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಅಧ್ಯಕ್ಷರ ಆಯ್ಕೆ ಆಗದೇ ಇರುವುದು ಭಕ್ತಾದಿಗಳಲ್ಲಿ ಕುತೂಹಲದ ಜೊತೆಗೆ ನಿರಾಸೆ ಮೂಡಿಸಿದೆ.

ಈಗಾಗಲೇ ಜಿಲ್ಲಾ ಧಾರ್ಮಿಕ ಪರಿಷತ್‌ನಿಂದ ನೇಮಕಗೊಂಡಿರುವ ಸದಸ್ಯರಲ್ಲಿ ಹೊಂದಾಣಿಕೆಯ ಕೊರತೆಯಿದೆ.ಅಧ್ಯಕ್ಷ ಸ್ಥಾನಕ್ಕೆ ಸದಸ್ಯರಿಬ್ಬರಲ್ಲಿ ಪೈಪೋಟಿಯಿದೆ.ಇದರ ಬಗ್ಗೆ ಮುಂದಿನ ಕ್ರಮಕ್ಕಾಗಿ ಅಭಿಪ್ರಾಯ ತಿಳಿಸಲು ಜಿಲ್ಲಾ ಧಾರ್ಮಿಕ ಪರಿಷತ್‌ನ ಸದಸ್ಯ ಕಾರ್ಯದರ್ಶಿಯವರಿಗೆ ಪತ್ರ ಮೂಲಕ ಮನವಿ ಮಾಡಲಾಗಿದ್ದು ಅವರ ಸೂಚನೆಯಂತೆ ಮುಂದಿನ ಕ್ರಮಕೈಗೊಳ್ಳಲಾಗುವುದು
ದೇವಪ್ಪ ಪಿ.ಆರ್, ಆಡಳಿತಾಧಿಕಾರಿ

ಮುಂದಿನ ಸಭೆಯಲ್ಲಿ ತೀರ್ಮಾನ
ಬಲ್ನಾಡು ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರ ನೇಮಕಗೊಂಡಿದ್ದರೂ ಅಧ್ಯಕ್ಷರ ಆಯ್ಕೆಯಲ್ಲಿ ಸಮಸ್ಯೆ ಇರುವ ಬಗ್ಗೆ ಜಿಲ್ಲಾ ಧಾರ್ಮಿಕ ಪರಿಷತ್‌ಗೆ ದೂರು ಬಂದಿದೆ.ಇದರ ಬಗ್ಗೆ ಜಿಲ್ಲಾ ಧಾರ್ಮಿಕ ಪರಿಷತ್‌ನ ಮುಂದಿನ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು
-ಶಿವನಾಥ ರೈ ಮೇಗಿನಗುತ್ತು,
ಸದಸ್ಯರು, ಜಿಲ್ಲಾ ಧಾರ್ಮಿಕ ಪರಿಷತ್

LEAVE A REPLY

Please enter your comment!
Please enter your name here