ನಗರದ ಹೃದಯ ಭಾಗದಲ್ಲೇ ನೆನೆಗುದಿಗೆ ಬಿದ್ದ ದುರಸ್ತಿ ಕಾಮಗಾರಿ
ಪುತ್ತೂರು:ನಗರದ ಮುಖ್ಯರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್‌ನಲ್ಲಿ ಸೋರಿಕೆಯಾಗುವುದನ್ನು ದುರಸ್ತಿ ಪಡಿಸಲು ಕಾಂಕ್ರೀಟ್ ರಸ್ತೆಯನ್ನು ಅಗೆದು ಹಾಕಿ ವಾರ ಕಳೆದರೂ ಕಾಮಗಾರಿ ಪೂರ್ಣಗೊಳ್ಳದೇ ರಸ್ತೆಯಲ್ಲಿ ಹೊಂಡಗಳು ಬಾಯ್ತೆರೆದು ನಿಂತು ಅಪಾಯ ಆಹ್ವಾನಿಸುತ್ತಿದೆ.
ಮುಖ್ಯರಸ್ತೆ ಯಂ.ಸಂಜೀವ ಶೆಟ್ಟಿ ಜವುಳಿ ಮಳಿಗೆ ಬಳಿಯಿಂದ ತಿರುಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿ ಕಳೆದ ಕೆಲ ಸಮಯಗಳಿಂದ ಕುಡಿಯುವ ನೀರಿನ ಪೈಪ್‌ನಲ್ಲಿ ನೀರು ಸೋರಿಕೆಯಾಗುತ್ತಿತ್ತು.ಅದನ್ನು ದುರಸ್ತಿಪಡಿಸಲೆಂದು ವಾರದ ಹಿಂದೆ ಕಾಂಕ್ರೀಟ್ ರಸ್ತೆಯ ಅರ್ಧ ಭಾಗದಲ್ಲಿ ಕಂಪ್ರೆಸರ್ ಮೂಲಕ ಅಗೆದು ಹಾಕಲಾಗಿದ್ದು ರಸ್ತೆಯಲ್ಲಿ ದೊಡ್ಡ ಹೊಂಡ ನಿರ್ಮಾಣಗೊಂಡಿದೆ.ಅಗೆದ ಮಣ್ಣು ರಸ್ತೆಯಲ್ಲೇ ಇದೆ.ಹೊಂಡದ ಎರಡೂ ಭಾಗದಲ್ಲಿಯೂ ಬ್ಯಾರಿಕೇಡ್ ಅಳವಡಿಸಲಾಗಿದೆ.ರಸ್ತೆ ಅಗೆದು ಹಾಕಿದ ನಂತರ ಅಲ್ಲಿ ಮುಂದಿನ ಯಾವುದೇ ಕಾಮಗಾರಿಗಳು ನಡೆಯದೇ ಒಂದು ವಾರವಾಗುತ್ತಾ ಬಂದಿದ್ದು ಕಾಮಗಾರಿ ಪೂರ್ಣಗೊಳ್ಳಲು ಇನ್ನೆಷ್ಟು ದಿನ ಕಾಯಬೇಕು.ಇನ್ನೆಷ್ಟು ದಿನ ಇಲ್ಲಿ ಸಮಸ್ಯೆ ಅನುಭವಿಸಬೇಕು ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಸಾರಿಗೆ ಬಸ್, ಖಾಸಗಿ ಬಸ್, ಆಟೋ ರಿಕ್ಷಾಗಳು ಸೇರಿದಂತೆ ಸಾವಿರಾರು ವಾಹನಗಳು ದಿನನಿತ್ಯ ಇದೇ ರಸ್ತೆಯ ಮೂಲಕ ಸಂಚರಿಸುತ್ತವೆ. ಸಾರಿಗೆ ಬಸ್, ಖಾಸಗಿ ಬಸ್ ಹಾಗೂ ಆಟೋರಿಕ್ಷಾಗಳು ಬಸ್ ನಿಲ್ದಾಣಕ್ಕೆ ಇದೇ ರಸ್ತೆಯ ಮೂಲಕವೇ ತೆರಳಬೇಕಾಗಿದ್ದು ಇದರಿಂದಾಗಿ ನಿತ್ಯ ವಾಹನ ಸಂಚಾರದಲ್ಲಿ ತೊಡಕು ಉಂಟಾಗುತ್ತಿದೆ. ಬೆಳಿಗ್ಗೆ ಹಾಗೂ ಸಂಜೆಯ ವೇಳೆಯಲ್ಲಂತು ವಾಹನ ಸವಾರರು ಬಹಳಷ್ಟು ಸಮಸ್ಯೆ ಎದುರಿಸುವಂತಾಗಿದೆ.
ಏಪ್ರಿಲ್ ಮೊದಲ ವಾರದಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಂದು ವೇಳೆ ಮಳೆ ಬಂದರೆ,ಇಲ್ಲಿ ಅಗೆದು ಬಿಟ್ಟಿರುವ ಹೊಂಡದಲ್ಲಿ ನೀರು ತುಂಬಿಕೊಳ್ಳಲಿದೆ.ಅಗೆದ ಮಣ್ಣು, ಕಲ್ಲುಗಳು ಪಕ್ಕದ ಚರಂಡಿಯಲ್ಲಿ ತುಂಬಿಕೊಂಡು ಚರಂಡಿಯೂ ಬಂದ್ ಆಗುವ ಸಾಧ್ಯತೆಗಳಿವೆ.ಅಗೆದು ಹಾಕಲಾದ ಮಣ್ಣು ಮಳೆ ನೀರಿನೊಂದಿಗೆ ರಸ್ತೆಯಲ್ಲಿ ಹರಡಿಕೊಳ್ಳಲಿದೆ.ಇದರಿಂದಾಗಿ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಇನ್ನಷ್ಟು ಸಮಸ್ಯೆ ಉಂಟಾಗಲಿದೆ.ಅಲ್ಲದೆ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೋತ್ಸವವು ಮುಂದಿನ ವಾರದಿಂದ ಪ್ರಾರಂಭಗೊಳ್ಳಲಿದ್ದು ನಗರದಲ್ಲಿ ವಾಹನ ದಟ್ಟಣೆ ಇನ್ನಷ್ಟು ಅಧಿಕವಾಗಲಿದೆ.ಹೀಗಾಗಿ ನಗರ ಸಭೆ ಕೂಡಲೇ ಈ ಕುರಿತು ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.